ದೂರುದಾರ ವಿದ್ಯಾರ್ಥಿ, ಬಿಡುವಿನ ವೇಳೆಯಲ್ಲಿ ಪೂಜೆ, ಹವನ ಮತ್ತು ಇನ್ನಿತರ ದೇವರ ಕೈಂಕರ್ಯಗಳಲ್ಲಿ ಸಹಾಯಕನಾಗಿ ಕೆಲಸ ಮಾಡಿ ಅದರ ಆದಾಯದ ಉಳಿತಾಯದ ಹಣವನ್ನು ಬ್ಯಾಂಕ್ ನಲ್ಲಿ ಇರಿಸಿದ್ದರು. ನವೆಂಬರ್ ತಿಂಗಳಲ್ಲಿ ವಾಟ್ಸ್‌ಆ್ಯಪ್ ನಲ್ಲಿ ಸಂದೇಶವೊಂದು ಬಂದಿದೆ. ಅದರಲ್ಲಿ ಡಿಬಿಎಸ್ ಟ್ರೇಡಿಂಗ್ ಬಗ್ಗೆ ವಿವರಿಸಿ ಹಣ ಹೂಡಿಕೆ ಮಾಡಿದರೆ ಪ್ರತಿದಿನ ಶೇ.5 ರಿಂದ 10 ರಷ್ಟು ಲಾಭಾಂಶ ಗಳಿಸಬಹುದು ಎಂದು ತಿಳಿಸಲಾಗಿತ್ತು. ಹೆಚ್ಚಿನ ಹಣ ಹೂಡಿಕೆ ಮಾಡಿದಲ್ಲಿ ಡಿಸೆಂಬರ್ ಅಂತ್ಯದೊಳಗೆ ಶೇ. 800ರಷ್ಟು ಲಾಭಾಂಶ ನೀಡುವುದಾಗಿ ಭರವಸೆ ನೀಡಿದ್ದರು. ಇದರಿಂದ ಪ್ರೇರೇಪಿತರಾಗಿ ಅಪರಿಚಿತ ವ್ಯಕ್ತಿಗಳು ತಿಳಿಸಿದಂತೆ ಹಣ ಹೂಡಿಕೆ ಮಾಡಲು ಮುಂದಾಗಿದ್ದಾರೆ. ಬಳಿಕ ಮೀನಾ ಭಟ್ ಎನ್ನುವ ಅಪರಿಚಿತ ಮಹಿಳೆ ಮಾರ್ಗದರ್ಶಕಿಯಾಗಿ ಪ್ರತಿದಿನ ನಿರಂತರವಾಗಿ ವಾಟ್ಸ್‌ಆ್ಯಪ್ ನಲ್ಲಿ ಸಂದೇಶ ಕಳುಹಿಸುತ್ತಾ ಹಣ ಹೂಡಿಕೆ ಮಾಡುವಂತೆ ಪ್ರೇರಪಣೆ ನೀಡುತ್ತಿದ್ದಳು. ಅವರು ನೀಡಿದ ಬೇರೆ ಬೇರೆ ಖಾತೆಗಳಿಗೆ ನ.5ರಿಂದ 26ರ ವರೆಗೆ ತನ್ನಲ್ಲಿದ್ದ ಹಣ ಹಾಗೂ ಮನೆಯಲ್ಲಿದ್ದ ಬಂಗಾರನ್ನು ಅಡವಿಟ್ಟು ಹಂತ ಹಂತವಾಗಿ ಒಟ್ಟು 31,99,800 ರೂ. ವರ್ಗಾಯಿಸಿದ್ದಾರೆ.