ಒಎಲ್‌ಎಕ್ಸ್‌ನಲ್ಲಿ ಗ್ರಾಫಿಕ್ಸ್ ಕಾರ್ಡ್ ಹೆಸರಿನಲ್ಲಿ 1.61 ಲಕ್ಷ ರೂ. ವಂಚನೆ

ಜಿಎಸ್‌ಟಿ ಬಿಲ್ ಕಳುಹಿಸಿ ನಂಬಿಕೆ ಗಳಿಸಿದ ಸೈಬರ್ ವಂಚಕರು
ಒಎಲ್‌ಎಕ್ಸ್‌ನಲ್ಲಿ ಗ್ರಾಫಿಕ್ಸ್ ಕಾರ್ಡ್ ಹೆಸರಿನಲ್ಲಿ  1.61 ಲಕ್ಷ ರೂ. ವಂಚನೆ
Published on: 

ಮಂಗಳೂರು: ಆನ್‌ಲೈನ್‌ನಲ್ಲಿ ಗ್ರಾಫಿಕ್ಸ್ ಕಾರ್ಡ್ ಖರೀದಿಸಲು ಮುಂದಾದ ವ್ಯಕ್ತಿಯೊಬ್ಬರಿಗೆ 1,61,660 ರೂ. ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.

ದೂರುದಾರರು ಅ. 4ರಂದು ಒಎಲ್‌ಎಕ್ಸ್ ವೆಬ್‌ಸೈಟ್‌ನಲ್ಲಿ ಗ್ರಾಫಿಕ್ಸ್ ಕಾರ್ಡ್‌ಗಾಗಿ ಹುಡುಕಾಟ ನಡೆಸಿದಾಗ, ಗಣೇಶ್ ಎಲೆಕ್ಟ್ರಾನಿಕ್ಸ್ ಹೆಸರಿನ ಕಂಪನಿಯಲ್ಲಿ ಕಾರ್ಡ್ ಮಾರಾಟಕ್ಕಿರುವುದು ಗಮನಕ್ಕೆ ಬಂದಿದೆ. ಬಳಿಕ ಕಂಪನಿಯನ್ನು ಸಂಪರ್ಕಿಸಿದಾಗ, ಅಪರಿಚಿತ ವ್ಯಕ್ತಿಯೊಬ್ಬರು ವಾಟ್ಸ್‌ಆ್ಯಪ್ ಮೂಲಕ ವ್ಯವಹರಿಸಲು ಮೊಬೈಲ್ ಸಂಖ್ಯೆ ನೀಡಿದ್ದಾರೆ.

ವಾಟ್ಸ್‌ಆ್ಯಪ್‌ನಲ್ಲಿ ಗ್ರಾಫಿಕ್ಸ್ ಕಾರ್ಡ್ ಕುರಿತು ಮಾಹಿತಿ ವಿನಿಮಯ ಮಾಡಿಕೊಂಡ ಬಳಿಕ ಆರೋಪಿಗಳು ಜಿಎಸ್‌ಟಿ ಬಿಲ್ ಕಳುಹಿಸಿದ್ದಾರೆ. ಇದನ್ನು ನಂಬಿದ ದೂರುದಾರರು ಅ. 6ರಂದು ೞಠ್ಠಞಜಿಠಿ906ಃಚ್ಡ್ಝೞ ಯುಪಿಐ ಐಡಿಗೆ 1 ಲಕ್ಷ ರೂ. ವರ್ಗಾಯಿಸಿದ್ದಾರೆ. ಮರುದಿನ ೞಚ್ಟಞ123456788ಃಚ್ಡ್ಝೞ ಯುಪಿಐ ಐಡಿಗೆ 61,660 ರೂ. ಪಾವತಿಸಿದ್ದಾರೆ.

ಅ.10ರಂದು ಬ್ಲೂ ಡಾರ್ಟ್ ಕೊರಿಯರ್ ಮೂಲಕ ಗ್ರಾಫಿಕ್ಸ್ ಕಾರ್ಡ್ ಕಳುಹಿಸುವುದಾಗಿ ಆರೋಪಿಗಳು ಭರವಸೆ ನೀಡಿದ್ದರು. ಆದರೆ, ಪಾರ್ಸೆಲ್‌ನ ಟ್ರ್ಯಾಕಿಂಗ್ ಐಡಿ ಕೇಳಿದಾಗ ನೀಡಲು ನಿರಾಕರಿಸಿ, ದೂರುದಾರರ ಮೊಬೈಲ್ ಸಂಖ್ಯೆಯನ್ನು ಬ್ಲಾಕ್ ಮಾಡಿದ್ದಾರೆ. ಇದರಿಂದ ವಂಚನೆಗೊಳಗಾಗಿರುವುದು ಅರಿವಿಗೆ ಬಂದಿದ್ದು, ಸೈಬರ್ ಸಹಾಯವಾಣಿ 1930ಕ್ಕೆ ದೂರು ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net