ಪೆರ್ನಾಲೆ ಕೆರೆಗೆ ಮರುಜೀವ

ಹೂಳು ತೆರವು, ಶಟರ್ ವ್ಯವಸ್ಥೆ ಅಳವಡಿಕೆ ಮೂಲಕ ಪುನಶ್ಚೇತನ
ಪೆರ್ನಾಲೆ ಕೆರೆಯ ಹೂಳು ತೆರವು, ಶಟರ್ ವ್ಯವಸ್ಥೆ ಅಳವಡಿಕೆ.
ಪೆರ್ನಾಲೆ ಕೆರೆಯ ಹೂಳು ತೆರವು, ಶಟರ್ ವ್ಯವಸ್ಥೆ ಅಳವಡಿಕೆ.
Published on: 

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಪಶ್ಚಿಮ ಘಟ್ಟದ ತಪ್ಪಲಿನ ಗ್ರಾಮೀಣ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವುದು, ನೈಸರ್ಗಿಕ ಜಲಮೂಲ ಸಂರಕ್ಷಿಸುವುದು ಹಾಗೂ ಬೇಸಿಗೆಯಲ್ಲಿಯೂ ನೀರಿನ ಲಭ್ಯತೆ ಕಾಯ್ದುಕೊಳ್ಳುವ ಉದ್ದೇಶದಿಂದ ಜಾರಿಗೊಳಿಸಲಾಗುತ್ತಿರುವ ಸ್ಪ್ರಿಂಗ್ ಶೆಡ್ ಯೋಜನೆಯಡಿ ಚಾರ್ಮಾಡಿ ಗ್ರಾಪಂ ವ್ಯಾಪ್ತಿಯ ಪೆರ್ನಾಲೆ ಕೆರೆ ಸಂರಕ್ಷಿಸಿ ಪುನಶ್ಚೇತನಗೊಳಿಸಲಾಗಿದೆ. ದೀರ್ಘಕಾಲದಿಂದ ಹೂಳು ತುಂಬಿಕೊಂಡು ತನ್ನ ಸಂಗ್ರಹ ಸಾಮರ್ಥ್ಯದ ಶೇ.20ರಷ್ಟು ಕಳೆದುಕೊಂಡಿದ್ದ ಕೆರೆಗೆ ಇದೀಗ ಮರುಜೀವ ದೊರೆತಿದೆ.

ಸ್ಪ್ರಿಂಗ್ ಶೆಡ್ ಯೋಜನೆಯ ಜಲಾನಯನ ಪ್ರದೇಶದ ಎತ್ತರದ ಪ್ರದೇಶದಲ್ಲಿರುವ ಪೆರ್ನಾಲೆ ಕೆರೆ ಸುತ್ತಮುತ್ತಲಿನ ನೈಸರ್ಗಿಕ ನೀರು ಹಾಗೂ ಮಳೆನೀರಿನ ಹರಿವನ್ನು ಸಂಗ್ರಹಿಸುವ ಪ್ರಮುಖ ಜಲಮೂಲವಾಗಿದೆ. ಕೆರೆಯಲ್ಲಿ ಸಂಗ್ರಹವಾಗುವ ನೀರು ನಿಧಾನವಾಗಿ ಭೂಮಿಯೊಳಗೆ ಇಂಗಿ ಕೆಳಭಾಗದ ಜಲಾನಯನ ಪ್ರದೇಶದಲ್ಲಿರುವ ಬಾವಿಗಳು ಹಾಗೂ ಇತರ ಜಲಮೂಲಗಳ ನೀರಿನ ಮಟ್ಟ ಕಾಯ್ದುಕೊಳ್ಳಲು ನೆರವಾಗುತ್ತದೆ. ಈ ಮೂಲಕ ಯೋಜನೆಯ ಗ್ರಾಮ ವ್ಯಾಪ್ತಿಯ 153 ಕುಟುಂಬಗಳ ನೀರಿನ ಅಗತ್ಯ ಪೂರೈಸುವಲ್ಲಿ ಕೆರೆ ಮಹತ್ವದ ಪಾತ್ರ ವಹಿಸುತ್ತಿದೆ.

ಆದರೆ ಹಲವು ವಷರ್ಗಳಿಂದ ಕೆರೆಯಲ್ಲಿ ಹೂಳು ತುಂಬಿಕೊಂಡು ಸೂಕ್ತ ನಿರ್ವಹಣೆ ಇಲ್ಲದ ಕಾರಣ ಅದರ ಒಟ್ಟು ನೀರು ಸಂಗ್ರಹ ಸಾಮರ್ಥ್ಯದ ಶೇ.20ರಷ್ಟು ನಷ್ಟವಾಗಿತ್ತು. ಪರಿಣಾಮವಾಗಿ ಬೇಸಿಗೆಯಲ್ಲಿ ಕೆಳಭಾಗದ ಬಾವಿಗಳು ಹಾಗೂ ಇತರ ಜಲಮೂಲಗಳಲ್ಲಿ ನೀರಿನ ಲಭ್ಯತೆ ಕುಂಠಿತವಾಗಿತ್ತು.

ಜಲಮೂಲಗಳ ಪುನಶ್ಚೇತನ

ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೆರೆ ಸಂರಕ್ಷಣಾ ಕಾಮಗಾರಿ ಕೈಗೆತ್ತಿಕೊಳ್ಳಲಾಯಿತು. ಕೆರೆಯಲ್ಲಿದ್ದ ಹೂಳನ್ನು ಸಂಪೂರ್ಣವಾಗಿ ತೆರವುಗೊಳಿಸುವುದರ ಜತೆಗೆ ನೀರಿನ ಸಂಗ್ರಹ ಮತ್ತು ನಿಯಂತ್ರಿತ ಹರಿವಿಗೆ ಅನುಕೂಲವಾಗುವಂತೆ ಶಟರ್ ವ್ಯವಸ್ಥೆಯುಳ್ಳ ಔಟ್‌ಲೆಟ್ ಗೇಟ್ ಅಳವಡಿಸಲಾಗಿದೆ. ಒಟ್ಟು 16,87,825 ರೂ. ವೆಚ್ಚದಲ್ಲಿ ಕಾಮಗಾರಿ ಇದಾಗಿದೆ. 394 ಮೀ. ಉದ್ದ, 144 ಮೀ. ಅಗಲ ಹಾಗೂ 6.06 ಮೀ. ಆಳ ಹೊಂದಿರುವ ಕೆರೆಯಲ್ಲಿ ಪ್ರತಿ ಬಾರಿ ಭರ್ತಿಯಾದಾಗ 34.38 ಕೋಟಿ ಲೀ. ನೀರು ಸಂಗ್ರಹವಾಗುತ್ತದೆ. ಇದು ಸುತ್ತಮುತ್ತಲಿನ ಜಲಮೂಲಗಳ ಪುನಶ್ಚೇತನ ಹಾಗೂ ಬೇಸಿಗೆಯ ನೀರಿನ ಲಭ್ಯತೆ ಹೆಚ್ಚಳಕ್ಕೆ ಪೂರಕವಾಗಲಿದೆ.

ಏನಿದು ಸ್ಪ್ರಿಂಗ್ ಶೆಡ್ ಯೋಜನೆ ?

ಪರ್ವತ ಪ್ರದೇಶಗಳಲ್ಲಿನ ಅಂತರ್ಜಲ ಭೂಮಿಯ ಮೇಲ್ಮೈಗೆ ಹೊರಹೊಮ್ಮುವ ಸ್ಥಳಗಳನ್ನು ನೈಸರ್ಗಿಕ ನೀರಿನ ಚಿಲುಮೆಗಳು ಅಥವಾ ಸ್ಪ್ರಿಂಗ್ಸ್ ಎಂದು ಕರೆಯಲಾಗುತ್ತದೆ. ಭೂಮಿಯೊಳಗಿನ ಜಲಧಾರಕ ಪದರಗಳು ನೆಲದ ಮೇಲ್ಮೈ ಸಂಧಿಸುವಾಗ ಬಂಡೆಗಳ ರಂಧ್ರಗಳು, ಬಿರುಕುಗಳು, ಸೀಳುಗಳು ಹಾಗೂ ತಗ್ಗು ಪ್ರದೇಶಗಳ ಮೂಲಕ ನೀರು ಹೊರಹೊಮ್ಮುತ್ತದೆ. ಪಶ್ಚಿಮ ಘಟ್ಟದ ಅನೇಕ ಗ್ರಾಮಗಳ ಕುಡಿಯುವ ನೀರು ಹಾಗೂ ಕೃಷಿ ಚಟುವಟಿಕೆಗಳಿಗೆ ಇಂಥ ಚಿಲುಮೆಗಳು ಪ್ರಮುಖ ಆಧಾರವಾಗಿವೆ. ಈ ನೈಸರ್ಗಿಕ ಜಲಮೂಲಗಳ ಹರಿವನ್ನು ಹೆಚ್ಚಿಸುವುದು ಮತ್ತು ಅವುಗಳ ಜಲಾನಯನ ಪ್ರದೇಶಗಳನ್ನು ವೈಜ್ಞಾನಿಕವಾಗಿ ಸಂರಕ್ಷಿಸುವುದು ಸ್ಪ್ರಿಂಗ್ ಶೆಡ್ ಆಧಾರಿತ ಜಲಾನಯನ ಯೋಜನೆ ಮುಖ್ಯ ಉದ್ದೇಶವಾಗಿದೆ.