

ವಿಜಯವಾಣಿ ಸುದ್ದಿಜಾಲ ಮುಳ್ಳೇರಿಯ
ಕೇರಳ ರಾಜ್ಯ ವಿದ್ಯುತ್ ಮಂಡಳಿ (ಕೆಎಸ್ಇಬಿ) ರಾಜ್ಯದಲ್ಲೇ ಪ್ರಥಮ ಬಾರಿ ನಿರ್ಮಿಸಿರುವ ಬೃಹತ್ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್ ಘಟಕ ಮುಳ್ಳೇರಿಯಾದಲ್ಲಿ ಸಂಪೂರ್ಣವಾಗಿ ಸಿದ್ಧಗೊಂಡಿದೆ. 15 ಮೆಗಾವಾಟ್ ಸಾಮರ್ಥ್ಯದ ವಿದ್ಯುತ್ ಸಂಗ್ರಹಣಾ ಘಟಕದ ನಿರ್ಮಾಣ ಕಾರ್ಯಗಳು ಪೂರ್ಣಗೊಂಡಿದ್ದು, ಪ್ರಾಯೋಗಿಕವಾಗಿ ವಿದ್ಯುತ್ ಪೂರೈಕೆಯನ್ನು ಕೂಡ ಯಶಸ್ವಿಯಾಗಿ ಆರಂಭಿಸಲಾಗಿದೆ.
ಮುಳ್ಳೇರಿಯಾ ಸಬ್ಸ್ಟೇಷನ್ಗೆ ಹೊಂದಿಕೊಂಡಂತೆ ಇರುವ ಕೆಎಸ್ಇಬಿಯ ಒಂದು ಎಕರೆ ಜಾಗದಲ್ಲಿ ಘಟಕ ಸ್ಥಾಪಿಸಲಾಗಿದೆ. ಇದರಲ್ಲಿ ಒಟ್ಟು 14 ಬ್ಯಾಟರಿ ಕಂಟೇನರ್ಗಳು, 7 ಪವರ್ ಕನ್ವರ್ಟರ್ ವ್ಯವಸ್ಥೆಗಳು ಹಾಗೂ 2 ಟ್ರಾನ್ಸ್ಫಾರ್ಮರ್ಗಳು ಸೇರಿವೆ.
ಹಗಲಿನ ವೇಳೆಯಲ್ಲಿ ಲಭ್ಯವಾಗುವ ಹೆಚ್ಚುವರಿ ವಿದ್ಯುತ್ ಅನ್ನು ಈ ಬ್ಯಾಟರಿಗಳಲ್ಲಿ ಸಂಗ್ರಹಿಸಿಟ್ಟುಕೊಳ್ಳಲಾಗುತ್ತದೆ. ನಂತರ ರಾತ್ರಿ ಸಮಯದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಾದಾಗ ಅದನ್ನು ಮರಳಿ ಗ್ರಿಡ್ಗೆ ಪೂರೈಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಮುಖ್ಯವಾಗಿ ಅಂಬಲತ್ತರ ಮತ್ತು ಪೈವಳಿಕೆ ಕೊಮ್ಮಂಗಳ ಪ್ರದೇಶಗಳ ಸೌರ ವಿದ್ಯುತ್ ಪಾರ್ಕ್ಗಳಲ್ಲಿ ಉತ್ಪಾದನೆಯಾಗುವ ವಿದ್ಯುತ್ ಅನ್ನು ಇಲ್ಲಿಗೆ ಪೂರೈಸಲಾಗುತ್ತದೆ.
ಕಳೆದ ಎರಡು ದಿನಗಳಿಂದ ರಾತ್ರಿ ವೇಳೆಯಲ್ಲಿ 60 ಮೆಗಾವಾಟ್ ಅವರ್ನಷ್ಟು ವಿದ್ಯುತ್ ಪೂರೈಕೆ ಮಾಡಿ ಪರೀಕ್ಷಾರ್ಥ ಪ್ರಯೋಗ ನಡೆಸಲಾಗಿದೆ. ಕೆಎಸ್ಇಬಿಯ ಕಲಮಶ್ಶೇರಿಯಲ್ಲಿರುವ ‘ರಾಜ್ಯ ಲೋಡ್ ಡಿಸ್ಪಾೃಚ್ ಕೇಂದ್ರ’ದಿಂದ ಅಂತಿಮ ಅನುಮತಿ ದೊರೆತ ತಕ್ಷಣವೇ ಈ ಘಟಕವನ್ನು ಅಧಿಕೃತವಾಗಿ ಉದ್ಘಾಟಿಸಲಾಗುತ್ತದೆ. 15 ಮೆಗಾವಾಟ್ ಸಾಮರ್ಥ್ಯದ ಈ ಘಟಕವು 4 ಗಂಟೆಗಳ ಕಾಲ ವಿದ್ಯುತ್ ಪೂರೈಸುವ ರೀತಿಯಲ್ಲಿ ಕಾರ್ಯಾಚರಣೆ ನಡೆಸಲಿದೆ.
ಹಗಲಿನಲ್ಲಿ ಕಡಿಮೆ ದರದಲ್ಲಿ ಸಿಗುವ ಸೌರ ವಿದ್ಯುತ್ ಸಂಗ್ರಹಿಸಿ ರಾತ್ರಿ ಸಮಯದಲ್ಲಿ ಹೊರಗಿನಿಂದ ಹೆಚ್ಚಿನ ದರ ಕೊಟ್ಟು ವಿದ್ಯುತ್ ಖರೀದಿಸುವುದನ್ನು ತಪ್ಪಿಸುವುದು ಈ ಯೋಜನೆಯ ಪ್ರಮುಖ ಗುರಿಯಾಗಿದೆ. ಕೆಎಸ್ಇಬಿ ಈ ಯೋಜನೆಗಾಗಿ ಕೇವಲ ಜಾಗ ಒದಗಿಸಿದ್ದು ಘಟಕದ ನಿರ್ಮಾಣಕ್ಕಾಗಿ ಮಂಡಳಿಯು ನೇರವಾಗಿ ಹಣ ವೆಚ್ಚ ಮಾಡಿಲ್ಲ. ಒಪ್ಪಂದದ ಪ್ರಕಾರ ಸಂಗ್ರಹಿಸಿದ ವಿದ್ಯುತ್ ಅನ್ನು ರಾತ್ರಿ ಪೂರೈಸುವುದಕ್ಕಾಗಿ ಒಪೇರ ಗ್ರೀನ್ ಯಾನ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಕೆಎಸ್ಇಬಿ ಪ್ರತಿ ಯೂನಿಟ್ಗೆ 4.38 ರೂ.ನಂತೆ ಪಾವತಿಸಲಿದೆ.
ಪ್ರಸ್ತುತ ರಾಜ್ಯದಲ್ಲಿ ವಿದ್ಯುತ್ ಬಳಕೆ ಹೆಚ್ಚಾಗುತ್ತಿದ್ದು ಈ ಹೊಸ ವ್ಯವಸ್ಥೆಯು ವಿದ್ಯುತ್ ಪೂರೈಕೆಯ ಸಮರ್ಥ ನಿರ್ವಹಣೆಗೆ ಮತ್ತು ಮಂಡಳಿಯ ಆರ್ಥಿಕ ಹೊರೆ ತಗ್ಗಿಸಲು ದೊಡ್ಡಮಟ್ಟದಲ್ಲಿ ನೆರವಾಗುವ ನಿರೀಕ್ಷೆಯಿದೆ.
ಕಾಸರಗೋಡು ಜಿಲ್ಲೆಯ ಮೈಲಾಟಿಯಲ್ಲಿ 125 ಮೆಗಾವಾಟ್ ಸಾಮರ್ಥ್ಯದ ಮತ್ತೊಂದು ಬ್ಯಾಟರಿ ವಿದ್ಯುತ್ ಸಂಗ್ರಹದ ಬೃಹತ್ ಘಟಕ ನಿರ್ಮಿಸಲು ಯೋಜಿಸಲಾಗಿದೆ. ಆದರೆ ಅಲ್ಲಿಗೆ ಬ್ಯಾಟರಿಗಳು ಇನ್ನೂ ತಲುಪದ ಕಾರಣ ಕಾಮಗಾರಿ ಪೂರ್ಣಗೊಂಡಿಲ್ಲ.
ಮುಳ್ಳೇರಿಯಾ ಘಟಕಕ್ಕೆ ಚೀನಾದಿಂದ ಆಮದು ಮಾಡಿಕೊಳ್ಳಲಾದ ಬ್ಯಾಟರಿಗಳನ್ನು ಬಳಸಲಾಗಿದೆ. ನಿಗದಿತ ಅವಧಿಯೊಳಗೆ ನಿರ್ಮಾಣ ಮುಗಿದಿದ್ದು, ಪ್ರಸ್ತುತ ಸುತ್ತುಬೇಲಿ ಅಳವಡಿಸುವಂತಹ ಕೆಲವು ಸಣ್ಣಪುಟ್ಟ ಕೆಲಸಗಳು ಮಾತ್ರ ಬಾಕಿ ಇವೆ. ಮುಂದಿನ ಒಂದು ತಿಂಗಳ ಒಳಗಾಗಿ ಈ ಘಟಕ ಅಧಿಕೃತವಾಗಿ ಉದ್ಘಾಟನೆಗೊಳ್ಳುವ ಸಾಧ್ಯತೆಯಿದೆ.