ಕಾಸರಗೋಡು: ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಕುಂಬ್ಡಾಜೆಯಲ್ಲಿ ಅಭ್ಯರ್ಥಿಯೊಬ್ಬರ ಮನೆ ವಠಾರದ ತೋಟದಲ್ಲಿ ಕಚ್ಚಾ ಬಾಂಬ್ ಸ್ಫೋಟಗೊಂಡ ಪರಿಣಾಮ ಸಾಕು ನಾಯಿ ಸಾವಿಗೀಡಾಗಿದೆ. ಆಸುಪಾಸಿನಿಂದ ಸ್ಫೋಟಗೊಳ್ಳದೆ ಉಳಿದಿದ್ದ ಮೂರು ಸಜೀವ ಕಚ್ಚಾ ಬಾಂಬುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಜಿಪಂ ಬದಿಯಡ್ಕ ಡಿವಿಜನ್‌ನಿಂದ ಸ್ಪರ್ಧಿಸುತ್ತಿರುವ ಎಡರಂಗ ಅಭ್ಯರ್ಥಿ ಕಾಡ್ರಬೆಳ್ಳಿಗೆ ಪ್ರಕಾಶ್ ಎಂಬುವರ ಮನೆ ಸನಿಹ ಸ್ಫೋಟ ಸಂಭವಿಸಿದೆ. ಶಬ್ದ ಕೇಳಿ ಜನರು ಸ್ಥಳಕ್ಕೆ ಧಾವಿಸಿದಾಗ ಪ್ರಕಾಶ್ ಅವರ ಸಾಕುನಾಯಿ ಸಾವಿಗೀಡಾಗಿತ್ತು. ಈ ಪ್ರದೇಶದಲ್ಲಿ ಹಂದಿ ಉಪಟಳ ಹೆಚ್ಚಾಗಿದ್ದು, ಯಾರೋ ಹಂದಿ ಕೊಲ್ಲಲು ಕಚ್ಚಾ ಬಾಂಬ್ ಇರಿಸಿರಬೇಕೆಂದು ಸಂಶಯಿಸಲಾಗಿದೆ. ಬದಿಯಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.