ದಶಕಗಳ ಬಳಿಕ ಒಂದೇ ವೇದಿಕೆಗೆ ‘ರಾಮ ಸೇನೆ’ ಮತ್ತು ‘ಶ್ರೀರಾಮ ಸೇನೆ’!

ವಿರೋಧಿಗಳಿಗೆ ತೀವ್ರ ನಡುಕ- ಹಿಂದುತ್ವದ ಕಹಳೆ: ಪ್ರಮೋದ್ ಮುತಾಲಿಕ್ ಮತ್ತು ಪ್ರಸಾದ್ ಅತ್ತಾವರ ರೋಚಕ ಹಿನ್ನೆಲೆ
ಕರಾವಳಿಯ ಹಿಂದುತ್ವದ ರಾಜಕಾರಣದಲ್ಲಿ ದಶಕಗಳ ಕಾಲ ಪ್ರತ್ಯೇಕ ದಾರಿಯಲ್ಲಿ ಸಾಗಿದ್ದ ಎರಡು ಪ್ರಬಲ ಶಕ್ತಿಗಳು ಈಗ ಒಂದಾಗಿವೆ!
ಭಿನ್ನಾಭಿಪ್ರಾಯಗಳಿಂದ ಬೇರ್ಪಟ್ಟು ಕಾಲಾಂತರದಲ್ಲಿ ಬೇರೆಯೇ ನೆಲೆ ಕಂಡುಕೊಂಡಿದ್ದ ರಾಮ ಸೇನೆ ಮತ್ತು ಶ್ರೀರಾಮ ಸೇನೆ ಸಂಘಟನೆಗಳು, ಮುಂಬರುವ ದಿನಗಳಲ್ಲಿ ಒಟ್ಟಾಗಿ ಹೆಜ್ಜೆ ಇಡಲು ಐತಿಹಾಸಿಕ ತೀರ್ಮಾನ ಕೈಗೊಂಡಿವೆ.ಕರಾವಳಿಯ ಹಿಂದುತ್ವದ ರಾಜಕಾರಣದಲ್ಲಿ ದಶಕಗಳ ಕಾಲ ಪ್ರತ್ಯೇಕ ದಾರಿಯಲ್ಲಿ ಸಾಗಿದ್ದ ಎರಡು ಪ್ರಬಲ ಶಕ್ತಿಗಳು ಈಗ ಒಂದಾಗಿವೆ!
Published on: 

ಮಂಗಳೂರು: ಕರಾವಳಿಯ ಹಿಂದುತ್ವದ ರಾಜಕಾರಣದಲ್ಲಿ ದಶಕಗಳ ಕಾಲ ಪ್ರತ್ಯೇಕ ದಾರಿಯಲ್ಲಿ ಸಾಗಿದ್ದ ಎರಡು ಪ್ರಬಲ ಶಕ್ತಿಗಳು ಈಗ ಒಂದಾಗಿವೆ! ಭಿನ್ನಾಭಿಪ್ರಾಯಗಳಿಂದ ಬೇರ್ಪಟ್ಟು ಕಾಲಾಂತರದಲ್ಲಿ ಬೇರೆಯೇ ನೆಲೆ ಕಂಡುಕೊಂಡಿದ್ದ ರಾಮ ಸೇನೆ ಮತ್ತು ಶ್ರೀರಾಮ ಸೇನೆ ಸಂಘಟನೆಗಳು, ಮುಂಬರುವ ದಿನಗಳಲ್ಲಿ ಒಟ್ಟಾಗಿ ಹೆಜ್ಜೆ ಇಡಲು ಐತಿಹಾಸಿಕ ತೀರ್ಮಾನ ಕೈಗೊಂಡಿವೆ.

ಮಂಗಳೂರಿನಲ್ಲಿ ಸೋಮವಾರ ನಡೆದ ಅತ್ಯಂತ ಮಹತ್ವದ ಸುದ್ದಿಗೋಷ್ಠಿಯಲ್ಲಿ ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಈ ಬೃಹತ್ ರಾಜಕೀಯ ಬೆಳವಣಿಗೆಯನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಎರಡು ದಶಕಗಳ ಹಿಂದೆ ಕರಾವಳಿಯಲ್ಲಿ ಉಗ್ರ ಹಿಂದುತ್ವದ ಅಲೆಯನ್ನೇ ಸೃಷ್ಟಿಸಿದ್ದ ಈ ಸಂಘಟನೆಗಳ ವಿಲೀನ ಅಥವಾ ಮೈತ್ರಿ, ರಾಜ್ಯದ ರಾಜಕೀಯ ಮತ್ತು ಹಿಂದುಪರ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುತಾಲಿಕ್, ರಾಮ ಸೇನೆ ಮತ್ತು ಶ್ರೀರಾಮ ಸೇನೆ ಇನ್ನು ಮುಂದೆ ಒಟ್ಟಾಗಿ ಕೆಲಸ ಮಾಡಲಿವೆ. ಇನ್ನುಂದೆ ರಾಜ್ಯಾದ್ಯಂತ ‘ಶ್ರೀರಾಮ ಸೇನೆ’ಯ ಹೆಸರಿನಲ್ಲೇ ಕಾರ್ಯಕರ್ತರು ಒಂದಾಗಿ ಸಂಘಟನೆಯನ್ನು ಬಲಪಡಿಸಲಿದ್ದಾರೆ, ಎಂದು ಘೋಷಿಸಿದರು.

ಇದೇ ವೇಳೆ ರಾಮ ಸೇನೆಯ ಸಂಸ್ಥಾಪಕ ಪ್ರಸಾದ್ ಅತ್ತಾವರ ಅವರ ಅನಾರೋಗ್ಯದ ಕುರಿತು ಮಾತನಾಡಿದ ಅವರು, ಪ್ರಸಾದ್ ಅತ್ತಾವರ ಅವರು ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದು, ಶೀಘ್ರದಲ್ಲೇ ಸಂಪೂರ್ಣವಾಗಿ ಚೇತರಿಸಿಕೊಳ್ಳಲಿದ್ದಾರೆ. ಅವರ ಸಕ್ರಿಯ ಉಪಸ್ಥಿತಿಯೊಂದಿಗೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹಿಂದುತ್ವದ ರಕ್ಷಣೆಗಾಗಿ ಎಲ್ಲರನ್ನೂ ಒಗ್ಗೂಡಿಸಿ ಬೃಹತ್ ಹೋರಾಟಗಳನ್ನು ನಡೆಸಲಾಗುವುದು, ಎಂದು ಗುಡುಗಿದ್ದಾರೆ.

ವಿರೋಧಿಗಳಿಗೆ ತೀವ್ರ ನಡುಕ

ಒಂದು ಕಾಲದಲ್ಲಿ ಕರಾವಳಿಯ ನೈತಿಕ ಪೊಲೀಸ್‌ಗಿರಿ, ಧರ್ಮ ರಕ್ಷಣೆ ಹಾಗೂ ತೀವ್ರವಾದಿ ಹಿಂದುತ್ವದ ನಿಲುವುಗಳ ಮೂಲಕ ದೇಶಾದ್ಯಂತ ಸದ್ದು ಮಾಡಿದ್ದ ಈ ಸಂಘಟನೆಗಳು, ದಶಕಗಳ ಬಳಿಕ ಮರಳಿ ಒಂದಾಗುತ್ತಿರುವುದು ವಿರೋಧಿಗಳಿಗೆ ತೀವ್ರ ನಡುಕ ಹುಟ್ಟಿಸಿದೆ. ಹಿಂದೂ ಸಮಾಜವನ್ನು ಒಡೆಯುವ ಶಕ್ತಿಗಳಿಗೆ ಪ್ರತ್ಯುತ್ತರ ನೀಡಲು ಮತ್ತು ಹಿಂದುತ್ವದ ಕಾರ್ಯಗಳನ್ನು ರಾಜ್ಯಮಟ್ಟದಲ್ಲಿ ವ್ಯಾಪಕವಾಗಿ ವಿಸ್ತರಿಸಲು ಈ ಐತಿಹಾಸಿಕ ಒಪ್ಪಂದವು ಮಹತ್ವದ ಮೈಲಿಗಾಲಾಗಲಿದೆ. ಈ ಬೆನ್ನಲ್ಲೇ ಕರಾವಳಿ ಸೇರಿದಂತೆ ರಾಜ್ಯ ರಾಜಕಾರಣದಲ್ಲಿ ಹೊಸ ರಾಜಕೀಯ ಸಮೀಕರಣಗಳು ಹುಟ್ಟಿಕೊಳ್ಳುವ ಸಾಧ್ಯತೆಯಿದ್ದು, ಮುಂದಿನ ದಿನಗಳಲ್ಲಿ ಈ ಜೋಡಿಯಿಂದ ಯಾವೆಲ್ಲಾ ರೋಮಾಂಚಕ ಹಾಗೂ ಬಿರುಸಿನ ಹೋರಾಟಗಳು ಮೂಡಿಬರಲಿವೆ ಎಂಬುದನ್ನು ಕಾದುನೋಡಬೇಕಿದೆ!

ಹಿಂದುತ್ವದ ಕಹಳೆ: ಪ್ರಮೋದ್ ಮುತಾಲಿಕ್ ಮತ್ತು ಪ್ರಸಾದ್ ಅತ್ತಾವರ ರೋಚಕ ಹಿನ್ನೆಲೆ!

ಆರಂಭದಲ್ಲಿ ಆರ್‌ಎಸ್‌ಎಸ್, ಬಜರಂಗದಳ ಹಾಗೂ ಶಿವಸೇನೆಯಲ್ಲಿ ಬೌದ್ಧಿಕ ಮತ್ತು ಉಗ್ರ ಹಿಂದುತ್ವದ ಪಾಠ ಕಲಿತ ಪ್ರಮೋದ್ ಮುತಾಲಿಕ್, 2005ರಲ್ಲಿ ‘ಶ್ರೀರಾಮ ಸೇನೆ’ ಕಟ್ಟಿ ಅಕ್ಷರಶಃ ಬಿರುಗಾಳಿ ಎಬ್ಬಿಸಿದರು. 2009ರ ಕುಖ್ಯಾತ ಮಂಗಳೂರು ಪಬ್ ದಾಳಿ ಇವರನ್ನು ರಾತ್ರಿಭರೋಪದಲ್ಲಿ ರಾಷ್ಟ್ರೀಯ ಮಟ್ಟದ ಸೆನ್ಸೇಷನ್ ಮಾಡಿತು! ವಿವಾದಾತ್ಮಕ ಭಾಷಣಗಳು ಹಾಗೂ ಧರ್ಮ ರಕ್ಷಣೆಯ ಉಗ್ರ ನಿಲುವುಗಳಿಂದ ಸದಾ ಪೊಲೀಸ್ ವರಾಂಡದಲ್ಲೇ ಇರುತ್ತಿರುವ ಇವರ ದಿಟ್ಟತನಕ್ಕೆ ಕೋಟ್ಯಂತರ ಹಿಂದುತ್ವವಾದಿಗಳ ಬೆಂಬಲವಿದೆ.

ಇತ್ತ ಕರಾವಳಿಯ ಮತ್ತೊಂದು ಸಿಂಹಪ್ರಾಯದ ನಾಯಕ ಪ್ರಸಾದ್ ಅತ್ತಾವರ. ಆರಂಭದಲ್ಲಿ ಮುತಾಲಿಕ್ ಬಲಗೈ ಬಂಟನಾಗಿ ಶ್ರೀರಾಮ ಸೇನೆಯ ಉಪಾಧ್ಯಕ್ಷರಾಗಿದ್ದ ಇವರು, ಪಬ್ ದಾಳಿಯ ಪ್ರಮುಖ ಆರೋಪಿಯಾಗಿದ್ದರು. ಬಳಿಕ ಭಿನ್ನಾಭಿಪ್ರಾಯದಿಂದ ಹೊರಬಂದು ‘ರಾಮ ಸೇನೆ’ ಎಂಬ ಪ್ರತ್ಯೇಕ ಸಾಮ್ರಾಜ್ಯ ಕಟ್ಟಿ ಕರಾವಳಿಯಲ್ಲಿ ಸಂಚಲನ ಮೂಡಿಸಿದರು. ಇತಿಹಾಸದ ಈ ಹಾದಿ ಏನೇ ಇರಲಿ, ನ್ಯಾಯಾಲಯ ಎಲ್ಲರನ್ನೂ ದೋಷಮುಕ್ತಗೊಳಿಸಿದ್ದು, ಈಗ ಇವರ ಐತಿಹಾಸಿಕ ಮೈತ್ರಿ ಹೊಸ ಯುದ್ಧಕ್ಕೆ ನಾಂದಿ ಹಾಡಿದೆ!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net