೨೦೨೮ರ ಚುನಾವಣೆಗಾಗಿ ದೇವಸ್ಥಾನದಲ್ಲಿ ರಾಜಕೀಯ PUTTUR

ಮುರಳೀಕೃಷ್ಣ ಹಸಂತಡ್ಕ ಆರೋಪ | ಧಾರ್ಮಿಕ ಕ್ಷೇತ್ರಗಳ ಭ್ರಷ್ಟಾಚಾರ ಖಂಡಿಸಿ ಬಿಜೆಪಿ ಪ್ರತಿಭಟನೆ
puttur bjp protest
ಪ್ರತಿಭಟನಾಕಾರರು ನೀಡಿದ ದೂರನ್ನು ಕಂದಾಯ ಇಲಾಖೆಯ ಸುಲೋಚನಾ ಸ್ವೀಕರಿಸಿದರು. ಸಂಜೀವ ಮಠಂದೂರು, ದಯಾನಂದ ಶೆಟ್ಟಿ, ಶಿವಕುಮಾರ್, ಪ್ರಸನ್ನ ಮಾರ್ತ ಉಪಸ್ಥಿತರಿದ್ದರು.
Published on: 

ಪುತ್ತೂರು: ಎಲ್ಲ ಹಿಂದೂಗಳ ಸೊತ್ತಾಗಿರುವ ದೇವಸ್ಥಾನ ಭಕ್ತಿಯ ಕೇಂದ್ರವಾಗಿದೆ. ಆದರೆ ೨೦೨೮ರ ಚುನಾವಣೆಯ ಗುರಿಯನ್ನಿಟ್ಟುಕೊಂಡು ದೇವಸ್ಥಾನದಲ್ಲಿ ರಾಜಕೀಯ ಮಾಡಲಾಗುತ್ತಿದೆ. ಅರಸರ ಆಡಳಿತದ ಕಾಲದಲ್ಲಿದ್ದಂತೆ ದೇವಸ್ಥಾನದ ಆಡಳಿತ ನಡೆಯುತ್ತಿದೆ. ಲೆಕ್ಕಾಚಾರದಲ್ಲಿ ಪಾರದರ್ಶಕತೆಯಿಲ್ಲದೆ ಭಕ್ತ ಸಮುದಾಯಕ್ಕೆ ಅನ್ಯಾಯ ಮಾಡಲಾಗುತ್ತಿದೆ. ಸಾವಿರಾರು ಭಕ್ತರ ಸ್ವಯಂಸೇವೆಯಿಂದ ಧಾರ್ಮಿಕ ಕ್ಷೇತ್ರ ಅಭಿವೃದ್ಧಿಯಾಗಿದೆ. ಬೆಂಗಳೂರಿನವರ ದುಡ್ಡಿನಲ್ಲಿ ಅಭಿವೃದ್ಧಿಯಾಗಲು ಸಾಧ್ಯವೇ? ಎಂದು ಧಾರ್ಮಿಕ ಮುಖಂಡ ಮುರಳೀಕೃಷ್ಣ ಹಸಂತಡ್ಕ ಹೇಳಿದರು.

ಧಾರ್ಮಿಕ ಕ್ಷೇತ್ರಗಳಲ್ಲಿನ ಭ್ರಷ್ಟಾಚಾರ, ರಾಜಕೀಯ ಹಸ್ತಕ್ಷೇಪ ವಿರೋಧಿಸಿ ಅಮರ್ ಜವಾನ್ ಜ್ಯೋತಿಯ ಸಮೀಪ ಪುತ್ತೂರು ಬಿಜೆಪಿ ವತಿಯಿಂದ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.

ದೇವರ ವಿಚಾರವನ್ನು ಬೀದಿಗೆ ತರಬಾರದೆಂದು ಇಲ್ಲಿಯವರೆಗೆ ಸುಮ್ಮನಿದ್ದೆವು. ದೇವಸ್ಥಾನ, ಧರ್ಮದ ವಿಚಾರದಲ್ಲಿ ರಾಜಕೀಯ ಮಾಡಬಾರದೆಂದು ಸುಮ್ಮನಿದ್ದೆವು. ಆದರೆ ಅವ್ಯವಹಾರ, ರಾಜಕೀಯ ಹಸ್ತಕ್ಷೇಪದ ವಿರುದ್ಧದ ಹೋರಾಟಕ್ಕೆ ಬಿಜೆಪಿ ಮತ್ತೆ ಎದ್ದು ನಿಂತಿದೆ. ವೈಯಕ್ತಿಕ ಟೀಕೆಗಳನ್ನು ಮಾಡುವ ತಾಕತ್ತು ನಮಗೂ ಇದೆ ಎಂದರು.

ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ಆಯುಕ್ತರಿಗೆ ಸಹಾಯಕ ಆಯುಕ್ತರ ಮೂಲಕ ಪ್ರತಿಭಟನಾಕಾರರು ದೂರು ಸಲ್ಲಿಸಿದರು. ಕಂದಾಯ ಇಲಾಖೆಯ ಸುಲೋಚನಾ ದೂರು ಸ್ವೀಕರಿಸಿದರು.

ಮಾಜಿ ಶಾಸಕ ಸಂಜೀವ ಮಠಂದೂರು, ಮುಖಂಡರಾದ ಶಿವಕುಮಾರ್, ಪ್ರಸನ್ನ ಮಾರ್ತ, ಲೋಕೇಶ್ ಚಾಕೊಟೆ ಉಪಸ್ಥಿತರಿದ್ದರು. ಸುನೀಲ್ ದಡ್ಡು ಸ್ವಾಗತಿಸಿದರು. ದಯಾನಂದ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜೇಶ್ ಬನ್ನೂರು ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net