ಸ್ಮಾರಕಗಳಲ್ಲೂ ಅಶುಚಿತ್ವ ತಾಂಡವ Puttur

ಪುತ್ತೂರಿನ ಅಮರ್ ಜವಾನ್ ಜ್ಯೋತಿ ಸ್ಮಾರಕದ ಪಕ್ಕದಲ್ಲೇ ಕಸದ ಕಟ್ಟುಗಳನ್ನು ಎಸೆದಿರುವುದು.
ಪುತ್ತೂರಿನ ಅಮರ್ ಜವಾನ್ ಜ್ಯೋತಿ ಸ್ಮಾರಕದ ಪಕ್ಕದಲ್ಲೇ ಕಸದ ಕಟ್ಟುಗಳನ್ನು ಎಸೆದಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಸರ್ಕಾರಿ ಕಚೇರಿ ಆವರಣದಲ್ಲೇ ತ್ಯಾಜ್ಯ ರಾಶಿ
  • ಕ್ರಮಕ್ಕೆ ಮುಂದಾಗದ ಅಧಿಕಾರಿಗಳು
ಪುತ್ತೂರು: ಬೀದಿ ಬದಿ, ನಿರ್ಜನ ಪ್ರದೇಶಗಳಲ್ಲಿ ತ್ಯಾಜ್ಯ ಎಸೆದು ಸಾರ್ವಜನಿಕ ಸ್ಥಳಗಳನ್ನು ವಿರೂಪ ಮಾಡುವ ಕಾರ್ಯ ಅನಾಗರಿಕ ವರ್ತನೆ ಸುಶಿಕ್ಷಿತರಿಂದ ನಡೆಯುತ್ತಲೇ ಇದೆ. ತ್ಯಾಜ್ಯದ ವಿಚಾರದಲ್ಲಿ ಜಾಗೃತಿ ಮೂಡಿಸಬೇಕಾದ, ಕಠಿಣ ಕ್ರಮ ಕೈಗೊಳ್ಳಬೇಕಾದ ಅಧಿಕಾರಗಳು ಕಣ್ಮುಚ್ಚಿ ಕುಳಿತಿರುವುದರಿಂದ ಸರ್ಕಾರಿ ಕಚೇರಿಗಳ ಮುಂಭಾಗದಲ್ಲೇ ಇರುವ ಸ್ಮಾರಕ ಜಾಗವೇ ಕಸದ ತೊಟ್ಟಿಯಾಗಿ ಪರಿವರ್ತನೆಯಾಗಿವೆ. ಇದು ದೇಶಾಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ನಗರದ ಅಮರ್ ಜವಾನ್ ಜ್ಯೋತಿ ಹಾಗೂ ಮಂಗಲ ಪಾಂಡೆ ಚೌಕದ ಸುತ್ತ ಪ್ಲಾಸ್ಟಿಕ್ ಬಾಟಲಿ, ತ್ಯಾಜ್ಯ ತುಂಬಿದ ಪ್ಲಾಸ್ಟಿಕ್ ಚೀಲಗಳು, ವಿವಿಧ ಪೊಟ್ಟಣಗಳನ್ನು ಎಲ್ಲೆಂದರಲ್ಲಿ ಎಸೆಯಲಾಗಿದೆ. ಮರಗಳ ಬುಡದಲ್ಲೂ ತ್ಯಾಜ್ಯ ಕಣ್ಣಿಗೆ ರಾಚುತ್ತದೆ. ಸಂಪೂರ್ಣ ಸರ್ಕಾರಿ ಕಚೇರಿಗಳೇ ಇರುವ ಸ್ಥಳದಲ್ಲೇ ಈ ರೀತಿ ಎಲ್ಲೆಂದರಲ್ಲಿ ತ್ಯಾಜ್ಯ ಎಸೆದು ಹೋಗುತ್ತಿದ್ದರೂ, ಅಧಿಕಾರಿಗಳಿಗೆ ಕಾಣಿಸದಿರುವುದು ಅಚ್ಚರಿಗೆ ಕಾರಣವಾಗಿದೆ. ಸ್ಥಳೀಯಾಡಳಿತಕ್ಕೆ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಬರುವ ಅನುದಾನ ಎಲ್ಲಿಗೆ ಹೋಗುತ್ತಿದೆ ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ.
ಸ್ಮಾರಕಗಳು ಅಪವಿತ್ರ: ದೇಶವನ್ನು ಕಾಯುವ ಯೋಧರ ಸ್ಮರಣಾರ್ಥ ಇರುವ ಸ್ಮಾರಕವನ್ನು ಈ ಮೂಲಕ ಅಪವಿತ್ರಗೊಳಿಸುವ ಕಾರ್ಯ ನಡೆಯುತ್ತಿದೆ. ಸಮಸ್ಯೆಗಳಿರುವಲ್ಲಿಗೆ ನಗರಸಭೆ ಅಧಿಕಾರಿಗಳು ಸುಳಿಯುತ್ತಿಲ್ಲ. ಸಮಸ್ಯೆಯನ್ನು ಸರಿಪಡಿಸುವ ಗೋಜಿಗೂ ಹೋಗದಿರುವುದು ದುರಂತವಾಗಿದೆ.

೧೨ ಗಂಟೆಗೆ ಕಚೇರಿಗೆ ಬರುತ್ತಾರೆ!

ಇನ್ನು ಮಿನಿವಿಧಾನ ಸೌಧದಲ್ಲಿ ತಹಸೀಲ್ದಾರ್ ಹಾಗೂ ಸಹಾಯಕ ಆಯುಕ್ತರು ಇದ್ದರೂ, ಇವರೂ ಸಮಸ್ಯೆಯನ್ನು ಗಮನಿಸಿ ಶಿಸ್ತು ಕ್ರಮಕ್ಕೆ ಮುಂದಾಗಿಲ್ಲ. ಸರ್ಕಾರ ನೀಡಿದ ಮನೆಯ ಮುಂದೆ ಸರ್ಕಾರಿ ವಾಹನ ನಿಂತಿದ್ದರೂ, ಬೆಳಗ್ಗೆ ಫೀಲ್ಡ್ ವೀಕ್ಷಣೆಯ ನೆಪ ಹೇಳಿ ಕಚೇರಿಗೆ ಮಧ್ಯಾಹ್ನ ೧೨ ಗಂಟೆಗೆ ಆಗಮಿಸುವುದು ಅಧಿಕಾರಿಗಳಿಗೆ ಅಭ್ಯಾಸವಾಗಿದೆ. ಈ ನಡುವೆ ತ್ಯಾಜ್ಯ, ಪರಿಸರ ಕಾಳಜಿ ತಮಗೆ ಸಂಬಂಧವೇ ಇಲ್ಲ ಎನ್ನುವಂತೆ ಇದ್ದಾರೆ.

ಸ್ವಚ್ಛತಾ ಕಾರ್ಯವೂ ಇಲ್ಲ

ಅಮರ್ ಜವಾನ್ ಜ್ಯೋತಿ ಸ್ಮಾರಕದಲ್ಲಿ ವರ್ಷ ಪೂರ್ತಿ ಉರಿಯುವ ದೀಪ, ಸುತ್ತಲೂ ಇಂಟರ್‌ಲಾಕ್ ಅಳವಡಿಸಲಾಗಿದೆ. ಮಳೆಗಾಲದಲ್ಲಿ ಇದರ ಮೇಲೆ ಹಾವಸೆ, ಹುಲ್ಲುಗಳು ಬೆಳೆದರೂ ಸ್ವಚ್ಛ ಮಾಡುವ ಕಾರ್ಯ ನಗರಸಭೆಯಿಂದ ನಡೆಯುತ್ತಿಲ್ಲ. ಬೀದಿನಾಯಿಗಳು ಗಲೀಜು ಮಾಡಿಟ್ಟರೂ ಅದರ ಮಧ್ಯದಲ್ಲೇ ಸಭೆ ಸಮಾರಂಭ ಮಾಡುವಂತಹ ಸ್ಥಿತಿ ಇದೆ.

೪ನೇ ಸೈನಿಕ ಸ್ಮಾರಕ

ಭಾರತದ ಮಹಾ ಸ್ವಾತಂತ್ರ್ಯ ಸಂಗ್ರಾಮ ೧೮೫೭ರ ಶತಮಾನೋತ್ಸವದ ಐತಿಹಾಸಿಕ ಸ್ಮಾರಕವಾಗಿ ಮಂಗಲ ಪಾಂಡೆ ಚೌಕವನ್ನು ತಾಲೂಕು ಆಡಳಿತ ಮುಂಭಾಗದಲ್ಲಿ ನಿರ್ಮಿಸಲಾಗಿದೆ. ೨೦೧೮ರಲ್ಲಿ ಪುನಃ ನಿರ್ಮಾಣ ಮಾಡಲಾಗಿತ್ತು. ಖಾಸಗಿ ಸಂಸ್ಥೆಯಿಂದ ಅಮರ್ ಜವಾನ್ ಜ್ಯೋತಿ ನಿರ್ಮಾಣವಾಗಿದ್ದು, ೪ನೇ ಸೈನಿಕ ಸ್ಮಾರಕ ಎಂಬ ಹೆಗ್ಗಳಿಕೆಗೆ ಒಳಪಟ್ಟಿದೆ.
"

ಅಮರ್ ಜವಾನ್ ಜ್ಯೋತಿಯ ಪರಿಸರವನ್ನು ಹಾಳು ಮಾಡಿರುವುದು ಅತ್ಯಂತ ದುಃಖಕರ ಮತ್ತು ನಾಚಿಕೆಯ ವಿಷಯ. ಭಾರತಕ್ಕಾಗಿ, ನಮ್ಮ ರಕ್ಷಣೆಗಾಗಿ ತಮ್ಮ ಮನೆ, ಕುಟುಂಬವನ್ನೆಲ್ಲ ತೊರೆದು ಪ್ರಾಣ ತ್ಯಾಗ ಮಾಡಿರುವ ಸೈನಿಕರಿಗಾಗಿ ನಿರ್ಮಿಸಿದ ಸ್ಮಾರಕವನ್ನು ಈ ರೀತಿ ಮಾಡಿರುವುದು ಖೇದಕರ. ಇದನ್ನು ನಗರಸಭೆ ಗಂಭೀರವಾಗಿ ಪರಿಗಣಿಸಬೇಕಿದೆ.

"

ಮಿನಿ ವಿಧಾನಸೌಧ ಮುಂಭಾಗದಲ್ಲಿ, ನಗರಸಭೆಯ ಕೂಗಳತೆ ದೂರದಲ್ಲಿರುವ ಮಂಗಲ ಪಾಂಡೆ ಚೌಕದ ಸುತ್ತಲೂ ತ್ಯಾಜ್ಯ ಎಸೆಯುವುದನ್ನು ಗಂಭೀರವಾಗಿ ಪರಿಗಣಿಸಿ ಅಽಕಾರಿಗಳು ಕ್ರಮ ಕೈಗೊಳ್ಳಬೇಕು. ನಗರದ ಹೃದಯ ಭಾಗದಲ್ಲೇ ಕಸ ಎಸೆದು ಹೋದರೂ ಕ್ರಮಕ್ಕೆ ಮುಂದಾಗದಿರುವುದು ಆಡಳಿತ ವ್ಯವಸ್ಥೆ ಸಂಪೂರ್ಣ ನಿಷ್ಕ್ರಿಯವಾಗಿದೆ ಎಂಬುದಕ್ಕೆ ಸೂಕ್ತ ನಿದರ್ಶನ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net