ಅಭ್ಯರ್ಥಿ ಆಯ್ಕೆಗೆ ಆಸ್ತಿ, ಅಂತಸ್ತು ಮಾನದಂಡವಾಗದಿರಲಿ PUTTUR

ಸದಾನಂದ ನಾಗಪ್ಪ ನಾಯ್ಕ ಅಭಿಪ್ರಾಯ | ಯುವ ಸಂಸತ್ತು ಚರ್ಚಾ ಸ್ಪರ್ಧೆ
ಅಭ್ಯರ್ಥಿ ಆಯ್ಕೆಗೆ ಆಸ್ತಿ, ಅಂತಸ್ತು ಮಾನದಂಡವಾಗದಿರಲಿ PUTTUR
ಯುವ ಸಂಸತ್ತು ಚರ್ಚಾ ಸ್ಪರ್ಧೆಯಲ್ಲಿ ಪುತ್ತೂರು ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ ಸದಾನಂದ ನಾಗಪ್ಪ ನಾಯ್ಕ ಮಾತನಾಡಿದರು. ಅಮಳ ರಾಮಚಂದ್ರ, ಎಸ್.ಬಿ.ಕೂಡಲಗಿ, ನವೀನ್ ಭಂಡಾರಿ, ಪ್ರಮೋದ್ ಕುಮಾರ್, ಸಂತೋಷ್ ಕುಮಾರ್ ಎಂ. ಉಪಸ್ಥಿತರಿದ್ದರು.
Published on: 

ಪುತ್ತೂರು: ರಾಜಕಾರಣಿಗಳು ಮೌಲ್ಯ, ಆದರ್ಶಗಳನ್ನು ಅಳವಡಿಸಿಕೊಂಡು ಮಾದರಿಯಾಗಿರಬೇಕು. ನಾಯಕರನ್ನು ಆಯ್ಕೆ ಮಾಡುವ ಜವಾಬ್ದಾರಿ ಮತದಾರರಿಗಿದ್ದು, ಪ್ರತಿಯೊಬ್ಬರೂ ಮತದಾನದಲ್ಲಿ ಭಾಗವಹಿಸಿ ಉತ್ತಮರನ್ನು ಆಯ್ಕೆ ಮಾಡಬೇಕು. ಅಭ್ಯರ್ಥಿಗಳನ್ನು ಅವರ ಆಸ್ತಿ, ಅಂತಸ್ತಿನ ಮೇಲೆ ಆಯ್ಕೆ ಮಾಡುವುದು ಸರಿಯಲ್ಲ. ಭ್ರಷ್ಟಾಚಾರ ನಿರ್ಮೂಲನೆಯಲ್ಲಿ ಮಹಿಳೆಯ ಪಾತ್ರ ಮಹತ್ತರವಾದುದು ಎಂದು ಪುತ್ತೂರು ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ ಸದಾನಂದ ನಾಗಪ್ಪ ನಾಯ್ಕ ಹೇಳಿದರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಆಡಳಿತ, ತಾಪಂ, ನಗರಸಭೆ, ಶಾಲಾ ಶಿಕ್ಷಣ, ಸಾಕ್ಷರತಾ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಕಾನೂನು ನ್ಯಾಯ ಮತ್ತು ಮಾನವ ಹಕ್ಕು ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಗಳ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ಯುವಸಂಸತ್ತು ಚರ್ಚಾ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ಪೊಲೀಸ್ ಉಪಾಧೀಕ್ಷಕ ಪ್ರಮೋದ್ ಕುಮಾರ್ ಮಾತನಾಡಿ, ಯುವ ಸಂಸತ್‌ನಲ್ಲಿ ಭಾಗವಹಿಸಿರುವ ವಿದ್ಯಾರ್ಥಿಗಳು ಇಲ್ಲಿನ ಅನುಭವಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಭವಿಷ್ಯದದಲ್ಲಿ ಉತ್ತಮ ನಾಯಕರಾಗಿ ಮೂಡಿಬರಬೇಕು ಎಂದರು.

ತಹಸೀಲ್ದಾರ್ ಎಸ್.ಬಿ ಕೂಡಲಗಿ ಅಧ್ಯಕ್ಷತೆ ವಹಿಸಿದ್ದರು. ವಿಧಾನಸಭೆಯ ಕಲ್ಪಿತ ಕಾರ್ಯಕಲಾಪಗಳ ಮೂಲಕ ಯುವ ಸಂಸತ್ ಸ್ಪರ್ಧೆ ನಡೆಯಿತು. ತಾಲೂಕಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮಳ ರಾಮಚಂದ್ರ, ವಕೀಲರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಎಂ., ತಾಪಂ ಇಒ ನವೀನ್ ಭಂಡಾರಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಸುನೀತಾ ಕುಮಾರಿ ಉಪಸ್ಥಿತರಿದ್ದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶ್ ಡಿ. ಸ್ವಾಗತಿಸಿದರು. ಉಪನ್ಯಾಸಕ ಅಬ್ದುಲ್ ರಝಾಕ್ ಪ್ರಮಾಣ ವಚನ ಬೋಧಿಸಿದರು. ಶಿಕ್ಷಣ ಸಂಯೋಜಕ ಹರಿಪ್ರಸಾದ್ ವಂದಿಸಿದರು. ಶಿಕ್ಷಕ ಪ್ರಶಾಂತ್ ಅನಂತಾಡಿ ನಿರೂಪಿಸಿದರು.

ಅವರದೇ ಲೋಕದಲ್ಲಿದ್ದರು...

ಯುವಸಂಸತ್ತಿನ ಸಭಾ ಕಾರ್ಯಕ್ರಮದ ವೇಳೆ ಹಿಂದಿನ ಸಾಲಿನಲ್ಲಿ ಕುಳಿತುಕೊಂಡಿದ್ದ ಕೆಲವು ವಿದ್ಯಾರ್ಥಿಗಳು ತಮ್ಮದೇ ಲೋಕದಲ್ಲಿದ್ದರು. ಕೆಲವರು ಗಂಭೀರವಾಗಿ ಸಂಸತ್ತಿನ ಕಲಾಪ ನಡೆಸಿದರೆ, ಕೆಲವರು ಹರಟೆ ಹೊಡೆಯುವುದರಲ್ಲಿ ನಿರತರಾಗಿದ್ದರು. ಇನ್ನು ಕೆಲವರು ಚುಕ್ಕೆ ಆಟ ಆಡುತ್ತಾ ಕಲಾಪಕ್ಕೂ ನಮಗೂ ಸಂಬಂಧವೇ ಇಲ್ಲದಂತೆ ಇದ್ದರು.

ಪ್ರಶ್ನಿಸುವುದು ಪ್ರಜಾಪ್ರಭುತ್ವ ಮೊದಲ ಲಕ್ಷಣವಾಗಿದ್ದು, ಇದನ್ನು ಜನರು ಜೀವನದಲ್ಲಿ ಅಳವಡಿಸಬೇಕು. ಪ್ರಜಾಪ್ರಭುತ್ವದಲ್ಲಿ ವಿಪಕ್ಷದ ನಾಯಕ ನಿಜವಾದ ಹಿರೋ ಆಗಿರುತ್ತಾನೆ. ಪ್ರಜಾಪ್ರಭುತ್ವದ ಕಂಬಗಳು ಆಳುವವರ ಕೈಗೊಂಬೆಯಾಗಬಾರದು.
ಅಮಳ ರಾಮಚಂದ್ರ, ಪುಡಾ ಅಧ್ಯಕ್ಷ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net