ಅಕಾಲಿಕ ಮಳೆ ತಂದ ಅವಾಂತರ Puttur

ಪುತ್ತೂರು ಮುಖ್ಯ ರಸ್ತೆಯ ಮಯೂರ ಜಂಕ್ಷನ್ ಬಳಿ ರಸ್ತೆಯಲ್ಲಿ ಮಳೆ ನೀರು ನಿಂತು ವಾಹನ ಸಂಚಾರಕ್ಕೆ ಸಮಸ್ಯೆಯಾಗಿರುವುದು.
ಪುತ್ತೂರು ಮುಖ್ಯ ರಸ್ತೆಯ ಮಯೂರ ಜಂಕ್ಷನ್ ಬಳಿ ರಸ್ತೆಯಲ್ಲಿ ಮಳೆ ನೀರು ನಿಂತು ವಾಹನ ಸಂಚಾರಕ್ಕೆ ಸಮಸ್ಯೆಯಾಗಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಕೆರೆಯಂತಾದ ಪುತ್ತೂರು ನಗರ ರಸ್ತೆಗಳು
  • ಮಂಜಾಗ್ರತೆ ಕೈಗೊಳ್ಳದ ಆಡಳಿತ
  • ರಾಜಕಾಲುವೆ ಚರಂಡಿಗಳ ಹೂಳೆತ್ತದೆ ಸಮಸ್ಯೆ
ಪುತ್ತೂರು: ನಗರಸಭೆ ಮಳೆಗಾಲದ ಮುನ್ನೆಚ್ಚರಿಕೆ ಕೈಗೊಳ್ಳಲು ವಿಫಲವಾದ ಪರಿಣಾಮ, ಮಂಗಳವಾರ ರಾತ್ರಿ ಸುರಿದ ದಿಢೀರ್ ಮಳೆಯಿಂದಾಗಿ ನಗರದಲ್ಲಿ ಅನೇಕ ಸಮಸ್ಯೆ ಸೃಷ್ಟಿಯಾಯಿತು. ಮಳೆ ನೀರು ಸರಾಗ ಹರಿವಿಗೆ ತಡೆಯಾಗಿ ರಸ್ತೆಯಲ್ಲೇ ನೀರು ನಿಂತು ಕೆರೆಯಂತಾಗಿದ್ದರಿಂದ ವಾಹನ ಸವಾರರು ಹಾಗೂ ಪಾದಚಾರಿಗಳು ಪರದಾಡುವಂತಾಯಿತು. ಹಲವು ಕಡೆ ಚರಂಡಿ, ರಾಜಕಾಲುವೆ ಮಣ್ಣಿನಿಂದ ತುಂಬಿದ್ದರೂ ಅಧಿಕಾರಿಗಳು ಇನ್ನೂ ಎಚ್ಚೆತ್ತುಕೊಂಡಿಲ್ಲ. ರಾಜಕಾಲುವೆ ಒತ್ತುವರಿ ಗುರುತಿಸಿ ತೆರುವು ಮಾಡಲೂ ಸ್ಥಳೀಯಾಡಳಿತ ಮುಂದಾಗಿಲ್ಲ. ಇದರಿಂದಾಗಿ ಮಳೆಗಾಲದಲ್ಲಿ ಎಲ್ಲೆಂದರಲ್ಲಿ ನೀರು ನುಗ್ಗುವ ಆತಂಕ ಎದುರಾಗಿದೆ. 
ಪುತ್ತೂರು ನಗರ ಭಾಗದಲ್ಲಿ ಮಂಗಳವಾರ ರಾತ್ರಿ ಮಳೆಯಾಗಿದ್ದು, ರಸ್ತೆಯಲ್ಲಿ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆಯಿಲ್ಲದೆ ಕೆಲವು ಕಡೆಯಲ್ಲಿ ರಸ್ತೆಯೇ ಹಳ್ಳವಾಗಿ ಪರಿವರ್ತನೆಯಾಗಿದೆ. ವಾಹನಗಳ ಓಡಾಟದ ಅಬ್ಬರಕ್ಕೆ ಪಾದಚಾರಿಗಳ ಮೇಲೆ ಕೆಸರು ನೀರಿನ ಸಿಂಚನವಾಗುತ್ತಿದೆ. ಅಧಿಕಾರಿಗಳು ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ. 
ಮಳೆಗಾಲಕ್ಕೂ ಮುನ್ನ ಎಚ್ಚೆತ್ತುಕೊಳ್ಳಬೇಕು: ಮುಂಗಾರಿನ ಆಗಮನಕ್ಕೆ ಕೆಲವೇ ದಿನ ಉಳಿದಿದ್ದು, ಪುತ್ತೂರಿನಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸ್ಥಳೀಯ ಆಡಳಿತ ನಿರ್ಲಕ್ಷ್ಯ ವಹಿಸಿದೆ. ಕೆಲವು ಚರಂಡಿಗಳಲ್ಲಿ ಹೂಳು ತುಂಬಿದ್ದರೆ, ಇನ್ನೂ ಕೆಲವು ಕಡೆಯಲ್ಲಿ ಕಾಮಗಾರಿಗಾಗಿ ಚರಂಡಿಯನ್ನೇ ಮುಚ್ಚಲಾಗಿದೆ. ಇದರಿಂದ ರಸ್ತೆಯೇ ಹೊಳೆಯಾಗಿ ಪರಿವರ್ತನೆಯಾಗುವ ಲಕ್ಷಣಗಳು ಗೋಚರಿಸುತ್ತಿದೆ.

ಹಲವು ಕಡೆ ನೀರು ನುಗ್ಗಿತ್ತು! 

ಆದರ್ಶ ಆಸ್ಪತ್ರೆಯ ಬಳಿಯಲ್ಲಿ ರಾಜಕಾಲುವೆಯನ್ನು ಸಮರ್ಪಕವಾಗಿ ದುರಸ್ತಿ ಮಾಡದ ಹಿನ್ನೆಲೆಯಲ್ಲಿ ಕಳೆದ ವರ್ಷ ವಿಪರೀತ ಮಳೆಗೆ ಆದರ್ಶ ಆಸ್ಪತ್ರೆಯ ಮುಂಭಾಗದ ಎಪಿಎಂಸಿ ರಸ್ತೆಗೆ ಹಲವು ಬಾರಿ ನೀರು ನುಗ್ಗಿತ್ತು. ಇದರಿಂದ ಈ ಭಾಗದ ಜನಜೀವನಕ್ಕೂ ಕಷ್ಟಕವಾಗಿತ್ತು. ದರ್ಬೆ ಜಂಕ್ಷನ್ ಬಳಿಯಲ್ಲಿ ರಾಜಕಾಲುವೆಯನ್ನು ಕಿರಿದಾಗಿಸಿದ ಪರಿಣಾಮ ನೀರು ಮುಖ್ಯ ರಸ್ತೆಗೆ ನುಗ್ಗಿ ವಾಹನ ಸಂಚಾರಕ್ಕೆ ಸಮಸ್ಯೆಯಾಗಿತ್ತು. ಈ ಬಾರಿಯೂ ಸಮಸ್ಯೆ ಎದುರಾಗುವ ಆತಂಕ ಕಾಡುತ್ತಿದ್ದು ನಗರಸಭೆ ಮುಂಜಾಗ್ರತೆ ಕೈಗೊಳ್ಳಬೇಕಿದೆ. 

ರಾಜಕಾಲುವೆ ಆಸುಪಾಸು ಪರಂಬೋಕು!

ತೋಡು ಹಾಗೂ ಹೊಳೆಯ ಬದಿಗಳಲ್ಲಿ ಪರಂಬೋಕು ಇರುವಂತೆ ರಾಜಕಾಲುವೆಯ ನಿಗದಿತ ಸ್ಥಳವನ್ನು ಪರಂಬೋಕು ಎಂದು ಗುರುತಿಸಲಾಗಿದೆ. ನಿಗದಿತ ಸ್ಥಳವನ್ನು ಖಾಸಗಿಯವರು ಒತ್ತುವರಿ ಮಾಡಿಕೊಳ್ಳುವ ಜತೆಗೆ ರಾಜಕಾಲುವೆಯನ್ನು ಕಿರಿದಾಗಿಸುವ ಪ್ರಯತ್ನ ನಡೆಯುತ್ತಿದೆ. 
ಉರ್ಲಾಂಡಿ ಸಮೀಪ ಹೆದ್ದಾರಿ ಚರಂಡಿಯ ಸ್ಲ್ಯಾಬ್ ಕುಸಿದು ಅಪಾಯಕಾರಿಯಾಗಿದೆ.

ಹೆದ್ದಾರಿ ಸೇರುವಲ್ಲಿ ಅಪಾಯ

ಮಾಣಿ-ಮೈಸರೂ ಹೆದ್ದಾರಿಯ ಪುತ್ತೂರು ಬೈಪಾಸ್ ರಸ್ತೆಗೆ ಉರ್ಲಾಂಡಿಯಲ್ಲಿ ಬೊಳುವಾರು ಕಡೆಯಿಂದ ಒಳರಸ್ತೆ ಸೇರ್ಪಡೆಯಾಗುತ್ತದೆ. ಈ ಸ್ಥಳದಲ್ಲಿ ಚರಂಡಿಯ ಮೇಲುಹಾಸು ಕುಸಿದಿದೆ. ಹೆದ್ದಾರಿಯ ತಿರುವಿನಲ್ಲಿ ರಸ್ತೆ ಸಂಧಿಸುವುದರಿಂದ ವಾಹನ ಸವಾರರು ಸ್ವಲ್ಪ ಎಚ್ಚರ ತಪ್ಪಿದರೂ ಅನಾಹುತ ಸಂಭವಿಸಬಹುದು. ಸ್ಲ್ಯಾಬ್ ಕುಸಿದು ವಾರವಾದರೂ ಸರಿಪಡಿಸುವ ಗೋಜಿಗೆ ಮುಂದಾಗಿಲ್ಲ.
"

ಪುತ್ತೂರಿನಲ್ಲಿ ಸಮಸ್ಯೆಗಳನ್ನು ಹೇಳಿದರೂ ಅಧಿಕಾರಿಗಳು ಬಗೆಹರಿಸಲು ಮುಂದಾಗುವುದಿಲ್ಲ. ಇದರ ಪರಿಣಾಮ ಪ್ರತಿ ವರ್ಷ ಮಳೆಗೆ ಎಲ್ಲೆಂದರಲ್ಲಿ ನೀರು ನುಗ್ಗಿ ಆಂತಕದಲ್ಲೇ ರಾತ್ರಿ ಕಳೆಯುವಂತಹ ಸ್ಥಿತಿಯಿದೆ. ಮಳೆಗೂ ಮುನ್ನ ಅಗತ್ಯ ಕಾಮಗಾರಿಗೆ ಹಣ ಬಿಡುಗಡೆಯಾದರೂ ಹಾನಿ ಸಂಭವಿಸಿದ ಬಳಿಕ ಕೆಲಸ ಮಾಡುತ್ತಾರೆ.

— ರಾಜೇಶ್, ಖಾಸಗಿ ಕಂಪನಿ ಉದ್ಯೋಗಿ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net