ರೈತ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ಆಗ್ರಹ
ಪುತ್ತೂರು: ವಿಟ್ಲದಲ್ಲಿ ರಸ್ತೆ ಅಭಿದ್ಧಿಗೆ ವಿರೋಧ ವ್ಯಕ್ತವಾಗುತ್ತಿದ್ದು ಇದರ ವಿರುದ್ಧ ಪ್ರಬಲ ಹೋರಾಟ ನಡೆಯಬೇಕು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಜೂನ್, ಜುಲೈ ತಿಂಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಈ ಬಗ್ಗೆ ಅಧಿಕಾರಿಗಳು ಸರಿಯಾದ ಮಾಹಿತಿಯನ್ನು ದಾಖಲಿಸಬೇಕು. ಬರಪೀಡಿತ ಜಿಲ್ಲೆಗಳ ಪಟ್ಟಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಸೇರಿಸಿ ಸರ್ಕಾರ ರೈತರಿಗೆ ಹೆಚ್ಚಿನ ಪರಿಹಾರ ನೀಡಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ಹೇಳಿದರು.
ಪುತ್ತೂರಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ವತಿಯಿಂದ ಮುಂದಿನ ರೈತ ಹೋರಾಟಗಳ ಬಗ್ಗೆ ನಡೆದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.
ಮನೋಹರ ಶೆಟ್ಟಿ ನಡಿಕೊಂಬಳಗುತ್ತು ಮಾತನಾಡಿ, ಕೃಷಿಕರಿಗೆ ಟ್ರ್ಯಾಕ್ಟರ್ ಹಾಗೂ ಕಳೆಯಂತ್ರಕ್ಕೆ ಡೀಸೆಲ್, ಪೆಟ್ರೋಲ್ ಸಬ್ಸಿಡಿ ಒದಗಿಸಬೇಕು. ಹೋರಾಟ ಮಾಡುವುದು ಸುಲಭದ ಕೆಲಸವಲ್ಲ. ಅದಕ್ಕಾಗಿ ಹಲವರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಕೃಷಿಕರಿಗೆ ಬೆಳೆ ವಿಮೆ ಪರಿಹಾರ ಸರಿಯಾಗಿ ಪಾವತಿಯಾಗಬೇಕು ಎಂದರು.
ರೈತ ಮುಖಂಡ ರಾಮಣ್ಣ ಪಾಳಿಗೆ ಮಾತನಾಡಿ ಕೃಷಿ ಪಂಪ್‌ಸೆಟ್‌ಗಳಿಗೆ ಓವರ್ ಲೋಡ್ ಇರುವ ಪರಿವರ್ತಕದಿಂದ ಸಂಪರ್ಕ ನೀಡುವುದಿಲ್ಲ ಎಂದು ಹೊಸ ಆದೇಶವಾಗಿದೆ. ಹೊಸ ಪರಿವರ್ತಕವನ್ನು ಇಲಾಖೆಯಿಂದ ಪೂರೈಸಿದರೆ ಅದಕ್ಕೆ ಬೇಕಾದ ಅಗತ್ಯ ವ್ಯವಸ್ಥೆಯನ್ನು ಕೃಷಿಕರೇ ಮಾಡಿಕೊಳ್ಳಬೇಕು. ಸುಮಾರು ೧೫ ಸಾವಿರ ರೂ. ಅಭಿವೃದ್ಧಿ ಶುಲ್ಕ ಪಾವತಿಸಬೇಕಿದೆ ಎಂದರು.