ತಳಮಟ್ಟದ ಜನರ ನೋವು ಅರಿಯದ ರಾಜಕಾರಣಿಗಳು PUTTUR

ಶ್ಯಾಮರಾಜ ಪಟ್ರಮೆ ಆಕ್ರೋಶ | ಅಕ್ಷರ ದಾಸೋಹ ನೌಕರರ ಪ್ರತಿಭಟನೆ
puttur protest
ಅಕ್ಷರ ದಾಸೋಹ ಯೋಜನೆ ನೌಕರರ ಸಂಘದ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಶ್ಯಾಮರಾಜ್ ಪಟ್ರಮೆ ಮಾತಾಡಿದರು. ಈಶ್ವರಿ ಪದ್ಮುಂಜ, ರಂಜಿತಾ ಕೋಡಿಂಬಾಡಿ, ಲತಾ, ಹೇಮಾವತಿ ಇತರರು ಇದ್ದರು.
Published on: 

ಪುತ್ತೂರು: ಬಿಸಿಯೂಟಕ್ಕೆ ನೇಮಕ ಮಾಡಿದವರಿಗೆ ಸರ್ಕಾರ ಸರಿಯಾಗಿ ವೇತನ ನೀಡುತ್ತಿಲ್ಲ. ಈಗ ಕೆಲಸವನ್ನು ಖಾಸಗೀಕರಣ ಮಾಡಲು ಮುಂದಾಗಿದೆ. ರಾಜಕಾರಣಿಗಳು ಐಶಾರಾಮಿ ಜೀವನ ನಡೆಸುವ ಮೂಲಕ ಸಾಮಾನ್ಯರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ. ತಳಹಂತದ ಜನರ ನೋವು ತಿಳಿಯದ ಜನಪ್ರತಿನಿಽಗಳ ಅವಶ್ಯಕತೆಯೇನಿದೆ? ಎಂದು ಪ್ರಾಂತ ರೈತ ಸಂಘದ ದ.ಕ. ಜಿಲ್ಲಾ ಮುಖಂಡ ಶ್ಯಾಮರಾಜ್ ಪಟ್ರಮೆ ಹೇಳಿದರು.

ಖಾಸಗೀಕರಣ ಹುನ್ನಾರ ತಡೆದು, ವೇತನ ಭದ್ರತೆ ಒದಗಿಸುವಂತೆ ಆಗ್ರಹಿಸಿ ಪುತ್ತೂರು ಮತ್ತು ಕಡಬ ತಾಲೂಕು ಅಕ್ಷರ ದಾಸೋಹ ನೌಕರರ ಸಂಘದ ವತಿಯಿಂದ ಪುತ್ತೂರು ಸಹಾಯಕ ಆಯುಕ್ತರ ಕಚೇರಿ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.

ಜಿಲ್ಲಾ ಅಕ್ಷರ ದಾಸೋಹ ಸಂಘದ ಉಪಾಧ್ಯಕ್ಷೆ ಈಶ್ವರಿ ಪದ್ಮುಂಜ ಮಾತನಾಡಿ, ಬಿಸಿಯೂಟ ತಯಾರಿಸುವವರ ಪರ ಗಟ್ಟಿಧ್ವನಿ ಮೊಳಗಬೇಕಿದೆ. ಯಾವುದೇ ಕಾರಣಕ್ಕೂ ಬಿಸಿಯೂಟ ಕೆಲಸದಿಂದ ತೆಗೆಯಲು ಬಿಡುವುದಿಲ್ಲ. ಎಲ್ಲರೂ ಒಗ್ಗಟ್ಟಾಗಿ ನಮ್ಮ ವಿರುದ್ಧವಿರುವ ಸರ್ಕಾರವನ್ನು ಉಚ್ಚಾಟಿಸುವ ಕೆಲಸ ಮಾಡುತ್ತೇವೆ ಎಂದರು.

ಸಿಐಟಿಯು ಪುತ್ತೂರು ತಾಲೂಕು ಮುಖಂಡ ಪಿ.ಕೆ.ಸತೀಶನ್, ಅಕ್ಷರ ದಾಸೋಹ ನೌಕರರ ಸಂಘದ ಪುತ್ತೂರು ತಾಲೂಕು ಅಧ್ಯಕ್ಷೆ ರಂಜಿತಾ ಕೋಡಿಂಬಾಡಿ, ಕಾರ್ಯದರ್ಶಿ ಲತಾ, ಕಡಬ ತಾಲೂಕು ಅಧ್ಯಕ್ಷೆ ಹೇಮಾವತಿ, ಜಿಲ್ಲಾ ಸಮಿತಿ ಮುಖಂಡರಾದ ರೇವತಿ ಕಡಬ, ಸುಲೋಚನಾ ಕಡಬ, ರೈತ ಮುಖಂಡ ಮಹಮ್ಮದ್ ಅನಸ್, ಪುಷ್ಪಾ, ಮಹೇಂದ್ರ ಮತ್ತಿತರರು ಇದ್ದರು.