ವ್ಯಕ್ತಿಗಳನ್ನು ಖುಷಿಪಡಿಸುವ ತನಿಖೆಯಿಲ್ಲ PUTTUR

ಸಾರ್ವಜನಿಕ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನಡೆದ ಶಾಂತಿ ಸಭೆಯಲ್ಲಿ ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಮಾತನಾಡಿದರು. ಪ್ರಮೋದ್ ಕುಮಾರ್, ಜಾನ್ಸನ್ ಡಿಸೋಜ, ಸುನಿಲ್ ಕುಮಾರ್ ಉಪಸ್ಥಿತರಿದ್ದರು.
ಸಾರ್ವಜನಿಕ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನಡೆದ ಶಾಂತಿ ಸಭೆಯಲ್ಲಿ ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಮಾತನಾಡಿದರು. ಪ್ರಮೋದ್ ಕುಮಾರ್, ಜಾನ್ಸನ್ ಡಿಸೋಜ, ಸುನಿಲ್ ಕುಮಾರ್ ಉಪಸ್ಥಿತರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪೊಲೀಸ್ ಉಪಾಧೀಕ್ಷಕ ಪ್ರಮೋದ್ ಕುಮಾರ್ ಎಚ್ಚರಿಕೆ
  • ಪುತ್ತೂರಿನಲ್ಲಿ ಶಾಂತಿ ಸಭೆ
ಪುತ್ತೂರು: ದರ್ಬೆ ಘಟನೆಯಲ್ಲಿ ಎಲ್ಲವೂ ಪಾರದರ್ಶಕವಾಗಿದ್ದು, ಸಿಸಿ ಕ್ಯಾಮರಾ, ಮೊಬೈಲ್ ದೃಶ್ಯಾವಳಿಯಂತೆ ತನಿಖೆ ನಡೆಯುತ್ತಿದೆ. ಘಟನೆಗಳ ಬಗ್ಗೆ ಅಭಿಪ್ರಾಯ ಭೇದವಿದ್ದರೂ, ತಪ್ಪುಗಳನ್ನು ಒಪ್ಪಿಕೊಳ್ಳುವ ಮನಸ್ಥಿತಿಯಿರಬೇಕು. ವ್ಯಕ್ತಿಗಳನ್ನು ಖುಷಿಪಡಿಸುವ ನಿಟ್ಟಿನಲ್ಲಿ ತನಿಖೆ ನಡೆಯದೆ ಕಾನೂನಿನ ಚೌಕಟ್ಟಿನ ಒಳಗೆ ನಡೆಯುತ್ತದೆ. ಹಬ್ಬದ ಆಚರಣೆಯ ಸಂದರ್ಭ ಹಿಂದೆ ನಡೆದ ಘಟನೆಗಳ ಬಗ್ಗೆ ಪ್ರಸ್ತಾಪವಾಗಬಾರದು. ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು ಎಂದು ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಪ್ರಮೋದ್ ಕುಮಾರ್ ಹೇಳಿದರು.
ಪುತ್ತೂರು ಕೋ-ಆಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಸಾರ್ವಜನಿಕ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿ, ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಪ್ರಕರಣಗಳು ದಾಖಲಾಗಿ ಕಾನೂನು ಪ್ರಕ್ರಿಯೆ ನಡೆಯುತ್ತಿವೆ. ಶಾಂತಿ ಸುವ್ಯವಸ್ಥೆಯಿಂದ ಹಬ್ಬ ನಡೆಯಬೇಕಿದ್ದು ಇದಕ್ಕೆ ಬೇಕಾದ ಪೊಲೀಸ್ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಶಾಂತಿ ಸಭೆಗಳು ಈಗಾಗಲೇ ನಡೆದಿದ್ದು, ದರ್ಬೆ ಘಟನೆಯ ಹಿನ್ನೆಲೆಯಲ್ಲಿ ಎಸ್‌ಪಿ ಸೂಚನೆಯಂತೆ ಮತ್ತೊಮ್ಮೆ ಸಭೆ ನಡೆಸಲಾಗಿದೆ ಎಂದರು.
ಪುತ್ತೂರು ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್, ತಹಸೀಲ್ದಾರ್ ಬಿ.ಎಸ್.ಕೂಡಲಗಿ, ನಗರ ಠಾಣೆ ಪೊಲೀಸ್ ನಿರೀಕ್ಷಕ ಜಾನ್ಸನ್ ಡಿಸೋಜ, ಮಹಿಳಾ ಠಾಣೆ ಪೊಲೀಸ್ ನಿರೀಕ್ಷಕ ಸುನೀಲ್ ಕುಮಾರ್, ಸಂಚಾರ ಠಾಣೆ ಉಪನಿರೀಕ್ಷಕ ಸುಹಾಸ್, ಸಂಪ್ಯ ಠಾಣೆ ಉಪನಿರೀಕ್ಷಕ ಗುಣಪಾಲ್ ಉಪಸ್ಥಿತರಿದ್ದರು.

ಕೆಲವರಿಗೆ ಮಾತ್ರ ಸೀಮಿತ

ನಗರ ಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸುಂದರ ಪೂಜಾರಿ ಹೊರತುಪಡಿಸಿ ಬಿಜೆಪಿ, ಸಂಘ ಪರಿವಾರ ಸೇರಿ ಹಿಂದೂ ಸಂಘಟನೆಯ ಮುಖಂಡರು ಸಭೆಯಿಂದ ಅಂತರ ಕಾಯ್ದುಕೊಂಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಶಾಂತಿ ಕದಡುವ ಪ್ರಯತ್ನ ನಡೆಯದಂತೆ ಪೊಲೀಸ್ ಇಲಾಖೆಯಿಂದ ಕಠಿಣ ಕ್ರಮ ಕೈಗೊಳ್ಳುವ ಕಾರ್ಯ ನಡೆಯುತ್ತಿದೆ. ಇದಕ್ಕೆ ಮುನಿಸಿಕೊಂಡು ಒಂದು ಸಮುದಾಯದವರು ಸಭೆಯಿಂದ ದೂರ ಉಳಿದಿದ್ದಾರೆ ಎನ್ನಲಾಗಿದೆ.

ತುರ್ತು ಸಭೆ ಸರಿಯಲ್ಲ

ತುರ್ತಾಗಿ ಆಯೋಜಿಸಲಾದ ಶಾಂತಿ ಸಭೆಯಲ್ಲಿ ಮುಸ್ಲಿಂ ಹಾಗೂ ಕ್ರೈಸ್ತ ಸಮುದಾಯದವರು ಹೆಚ್ಚಾಗಿ ಭಾಗವಹಿಸಿದ್ದರು. ಶಾಂತಿ ಸಭೆಯ ಬಗ್ಗೆ ಸ್ವಲ್ಪ ಮುಂಚಿತವಾಗಿ ತಿಳಿಸಬೇಕು. ಶಾಂತಿ-ಅಶಾಂತಿ ಉಂಟುಮಾಡುವವರು ಯಾರೆಂಬ ಮಾಹಿತಿ ಇಲಾಖೆಗೆ ಇದೆ. ಅಶಾಂತಿ ಉಂಟುಮಾಡುವ ಮಾಡುವ ಪ್ರಮುಖರನ್ನು ಕರೆದು ಅವರಿಗೂ ತಿಳಿಹೇಳಬೇಕು ಎಂಬ ಅಭಿಪ್ರಾಯ ಸಭೆಯಿಂದ ವ್ಯಕ್ತವಾಯಿತು.

ಸಾರ್ವಜನಿಕರಿಂದ ವಿವಿಧ ಅಭಿಪ್ರಾಯ

ಶಾಂತಿ ಸುವ್ಯವಸ್ಥೆಗೆ ಸಾರ್ವಜನಿಕರಿಂದ ಅಗತ್ಯ ನೆರವನ್ನು ಇಲಾಖೆಯಿಂದ ನೀಡಲಾಗುತ್ತಿದ್ದು ಸಿಸಿ ಕ್ಯಾಮರಾಗಳನ್ನು ಸರಿಪಡಿಸಬೇಕು. ಎರಡು ಸಮುದಾಯದ ಹಬ್ಬಗಳನ್ನು ಸೌಹಾರ್ದದಿಂದಲೇ ಆಚರಿಸಲಾಗುತ್ತದೆ. ಸಹೋದರ ಧರ್ಮದವರೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಕಡಬದ ಕೊಯಿಲ ಭಾಗದಲ್ಲಿ ಹಬ್ಬದ ಆಚರಣೆ ಮಾಡದಿರಲು ನಿರ್ಧರಿಸಿ ಶೋಕಾಚರಣೆ ಮಾಡಲಾಗಿದೆ. ಕಾನೂನು ಕೈಗೆತ್ತಿಕೊಂಡಾಗ ಮಾತ್ರ ಶಾಂತಿ ಸುವ್ಯವಸ್ಥೆಗೆ ಸಮಸ್ಯೆಯಾಗುತ್ತಿದೆ. ಕ್ರೈಸ್ತ ಧರ್ಮದ ಹಬ್ಬಗಳ ಸಂದರ್ಭ ಯಾವುದೇ ಶಾಂತಿ ಸಭೆ ಅಗತ್ಯವಿರುವುದಿಲ್ಲ. ಹಿಂದೂ ಹಾಗೂ ಮುಸ್ಲಿಂ ಹಬ್ಬಗಳ ಸಂದರ್ಭ ಶಾಂತಿ ಸಭೆ ನಡೆಯುತ್ತಿದ್ದು, ಇದರ ಹಿಂದಿನ ಉದ್ದೇಶ ಏನೆಂಬುದನ್ನು ತಿಳಿಯಬೇಕು ಎಂದು ಸೇರಿದವರು ಮಾತನಾಡಿಕೊಂಡರು.
"

ಹಬ್ಬಗಳ ಆಚರಣೆ ಉದ್ದೇಶ ಅರಿತುಕೊಂಡು ಪ್ರತಿಯೊಬ್ಬರು ಜವಾಬ್ದಾರಿಯಿಂದ ವರ್ತಿಸುವ ಅಗತ್ಯವಿದೆ. ತಪ್ಪುಗಳನ್ನು ತಪ್ಪು ಎಂದು ಸ್ವೀಕರಿಸುವ ಮನೋಭಾವ ಇರಬೇಕು. ಶಾಂತಿ, ಸೌಹಾರ್ದ ಕಾಪಾಡಿಕೊಂಡು ಆಚರಣೆಗಳು ಇರಬೇಕು. ಪೊಲೀಸರು ಇರುವಾಗ ಘಟನೆ ನಡೆದಲ್ಲಿಗೆ ತೆರಳಿ ತಂಡಗಳಾಗಿ ನಿಲ್ಲುವ ಅಗತ್ಯವಿಲ್ಲ. ಬುದ್ಧಿವಂತರ ಜಿಲ್ಲೆಯಲ್ಲಿ ಯಾವ ರೀತಿಯಲ್ಲಿ ವರ್ತಿಸಬೇಕೆಂಬ ಅರಿವು ಇರಬೇಕು. ಸಣ್ಣ ವಿಚಾರಗಳಿಗೆ ಜಿಲ್ಲೆ ರಾಜ್ಯದಲ್ಲಿ ಗುರುತಿಸುವಂತೆ ಆಗಬಾರದು.

— ಸ್ಟೆಲ್ಲಾ ವರ್ಗೀಸ್, ಸಹಾಯಕ ಆಯುಕ್ತೆ, ಪುತ್ತೂರು

"

ಒಂದು ಧರ್ಮದ ಹಬ್ಬವನ್ನು ಎಲ್ಲರೂ ಸೇರಿ ಆಚರಿಸಿದಾಗ ಎಲ್ಲರಿಗೂ ನೆಮ್ಮದಿ. ಕೋಮು ವಿಚಾರ ಬಾರದೆ ಸಹೋದರತ್ವದಿಂದ ಹಬ್ಬಗಳು ನಡೆದಾಗ ಪೊಲೀಸ್ ಇಲಾಖೆ, ತಾಲೂಕು ಆಡಳಿತದ ಅಗತ್ಯ ಬರುವುದಿಲ್ಲ.

— ಬಿ.ಎಸ್.ಕೂಡಲಗಿ, ತಹಸೀಲ್ದಾರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net