ಅಶೋಕ ಜನಮನ ಕಾರ್ಯಕ್ರಮ ನ.೨೨ಕ್ಕೆ ಮುಂದೂಡಿಕೆ PUTTUR

ನಿರಂತರ ಮಳೆ ಕಾರಣ | ಶಾಸಕ ಅಶೋಕ್ ಕುಮಾರ್ ರೈ ಹೇಳಿಕೆ
Published on: 

ಪುತ್ತೂರು: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಟ್ರಸ್ಟ್ ಮೂಲಕ ನಡೆಸಲಾಗುವ ಅಶೋಕ ಜನಮನ ಕಾರ್ಯಕ್ರಮವನ್ನು ನಿರಂತರ ಮಳೆಯ ಕಾರಣದಿಂದ ಮುಂದೂಡಲಾಗಿದೆ. ೧೪ನೇ ವರ್ಷದ ಕಾರ್ಯಕ್ರಮವನ್ನು ನವೆಂಬರ್ ೮ರಂದು ನಡೆಸಲು ನಿಗದಿ ಮಾಡಲಾಗಿತ್ತು. ಆದರೆ ಪ್ರಸ್ತುತ ಹವಾಮಾನ ವೈಪರೀತ್ಯದ ಕಾರಣದಿಂದಾಗಿ ತುಳಸಿ ಹಬ್ಬದಂದು ನ.೨೨ರಂದು ನಡೆಸಲು ತೀರ್ಮಾನಿಸಲಾಗಿದೆ. ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳನ್ನು ಕರೆಸಲು ಪ್ರಯತ್ನ ನಡೆಯುತ್ತಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು ೪ ಕೋಟಿ ರೂ. ಖರ್ಚು ಮಾಡಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಟ್ರಸ್ಟ್‌ನಿಂದ ಪ್ರಯೋಜನ ಪಡೆದ ೧೮ ಸಾವಿರ ಮಂದಿಗೆ ಈಗಾಗಲೇ ಅಂಚೆ ಮೂಲಕ ಪತ್ರ ಕಳುಹಿಸಲಾಗಿದ್ದು, ದಿನಾಂಕ ಬದಲಾವಣೆಯ ಬಗ್ಗೆ ಮತ್ತೆ ಪತ್ರ ನೀಡುವುದು ಕಷ್ಟಕರವಾಗಿದೆ. ನ.೨೨ರಂದು ಬೆಳಗ್ಗೆ ೯.೩೦ರಿಂದಲೇ ಬಟ್ಟಲು, ಬೌಲ್, ಗ್ಲಾಸ್, ಬಾತ್ ಟವೆಲ್, ಸೀರೆ, ಬೆಡ್‌ಶೀಟ್ ವಿತರಣೆ ಆರಂಭವಾಗಲಿದೆ. ವ್ಯಾಪ್ತಿ ರಹಿತವಾಗಿ ಉಡುಗೊರೆ ನೀಡಲಿದ್ದು ಯಾವುದೇ ಐಡಿ ಕಾರ್ಡ್ ಅಗತ್ಯವಿಲ್ಲ. ಗೊಂದಲಕ್ಕೆ ಆಸ್ಪದವಿಲ್ಲದೆ ಕಾರ್ಯಕ್ರಮ ನಡೆಯಲಿದೆ. ಸುಮಾರು ೧ ಲಕ್ಷ ಮಂದಿಗೆ ನೀಡಲು ಉಡುಗೊರೆಗಗಳು ಸಿದ್ಧವಾಗಿದ್ದು, ಅಂದು ಸಂಜೆ ೧ ಲಕ್ಷ ದೋಸೆ ವಿತರಣೆ ಮಾಡಲಾಗುವುದು. ಮಧ್ಯಾಹ್ನ ೩೦ ಸಾವಿರ ಮಂದಿಗೆ ಊಟದ ವ್ಯವಸ್ಥೆ ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್‌ನ ಸುದೇಶ್ ಶೆಟ್ಟಿ, ನಿಹಾಲ್ ಪಿ.ಶೆಟ್ಟಿ, ದುರ್ಗಾಪ್ರಸಾದ್ ರೈ, ಜಯಪ್ರಕಾಶ ಬದಿನಾರು ಉಪಸ್ಥಿತರಿದ್ದರು.

ರಾಜಕೀಯ ಪ್ರೇರಿತ ದೂರುಗಳು

ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ವಿಚಾರದಲ್ಲಿ ರಾಜಕೀಯ ಪ್ರೇರಿತ ದೂರುಗಳು ಬಂದಿವೆ. ಬೇರೆಯವರ ಟೀಕೆಗಳಿಗೆ ಹೆದರಿ ಅಭಿವೃದ್ಧಿ ಕಾರ್ಯ ನಿಲ್ಲಿಸುವುದಿಲ್ಲ. ನಾವು ದೇವರ ಹಣವನ್ನು ಮುಟ್ಟುವುದಿಲ್ಲ. ಒಂದು ರೂಪಾಯಿ ಮುಟ್ಟಿದ್ದರೂ ನಮಗೆ ದೇವರು ಶಿಕ್ಷೆ ನೀಡಲಿ. ದೂರುಗಳು ಬಂದ ಹಿನ್ನೆಲೆಯಲ್ಲಿ ತನಿಖೆ ನಡೆದಿದೆ. ಅಧಿಕಾರಿಗಳು ಹೇಳುವ ಪ್ರಕಾರ ಲೋಪ ಕಂಡು ಬಂದಿಲ್ಲ. ಜೀರ್ಣೋದ್ಧಾರ ಮಾಡುವುದು ಸಮಿತಿಗೆ ಬಿಟ್ಟ ವಿಚಾರ ಎಂದು ಶಾಸಕ ರೈ ಹೇಳಿದರು.

ದೇವಸ್ಥಾನದ ಜಾಗ ನಿರ್ದಾಕ್ಷಿಣ್ಯವಾಗಿ ವಸೂಲಿ

ದೇವಸ್ಥಾನಕ್ಕೆ ಸೇರಿದ ೩೦ರಿಂದ ೪೦ ಕೋಟಿ ರೂ. ಮೌಲ್ಯದ ಜಾಗವನ್ನು ನಿರ್ದಾಕ್ಷಿಣ್ಯವಾಗಿ ಸ್ವಾಧೀನ ಮಾಡಲಾಗುವುದು. ದೇವಸ್ಥಾನದ ಬಳಕೆಗೆ ರಸ್ತೆ ಮಾಡಬಾರದು ಎಂದು ಎಲ್ಲೂ ಉಲ್ಲೇಖವಿಲ್ಲ. ರಸ್ತೆ ಕಾಮಗಾರಿಗೆ ೨೫ರಿಂದ ೩೦ ಸೆಂಟ್ಸ್ ಜಾಗ ಹೋಗಲಿದೆ. ದೇವಸ್ಥಾನದ ಜಾಗವನ್ನು ಯಾರಿಗೂ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ದೇವಸ್ಥಾನದ ಬಳಕೆಗೆ ನಿರ್ಮಿಸುವ ರಸ್ತೆಯನ್ನು ಯಾವುದೇ ಸಂಸ್ಥೆಗೆ ನೀಡುವುದಿಲ್ಲ ಎಂದು ಅಶೋಕ್ ಕುಮಾರ್ ರೈ ಹೇಳಿದರು.

ಮೆಡಿಕಲ್ ಕಾಲೇಜಿನ ೩೦೦ ಹಾಸಿಗೆ ಆಸ್ಪತ್ರೆಯ ಕಾಮಗಾರಿ ನಡೆಯುತ್ತಿದ್ದು, ಮೆಡಿಕಲ್ ಕಾಲೇಜು ಕಟ್ಟಡದ ಕಾಮಗಾರಿ ಟೆಂಡರ್‌ಗೆ ಹೋಗಿದ್ದು, ಒಂದು ತಿಂಗಳ ಕಾಲಾವಕಾಶ ತೆಗೆದುಕೊಳ್ಳಲಿದೆ. ಪಂಚಾಯಿತಿ ಚುನಾವಣೆಯ ಮೊದಲು ಶಿಲಾನ್ಯಾಸ ನಡೆಯಲಿದೆ.
ಅಶೋಕ್ ಕುಮಾರ್ ರೈ, ಶಾಸಕ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net