ಮುನ್ನೆಚ್ಚರಿಕೆ ಇಲ್ಲದೆ ಗುಡ್ಡ ಅಗೆತ Puttur

ಮಂಜಳಪಡ್ಪು ಸಮೀಪದಲ್ಲಿ ಅವೈeನಿಕವಾಗಿ ಗುಡ್ಡವನ್ನು ಅಗೆದಿರುವುದು.
ಮಂಜಳಪಡ್ಪು ಸಮೀಪದಲ್ಲಿ ಅವೈeನಿಕವಾಗಿ ಗುಡ್ಡವನ್ನು ಅಗೆದಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಮಳೆಗಾಲದಲ್ಲಿ ಅಪಾಯ ಭೀತಿ
  • ಜನವಸತಿ ಪ್ರದೇಶಕ್ಕೆ ನುಗ್ಗುವ ನೀರು
ಪುತ್ತೂರು: ಬೆಟ್ಟಗುಡ್ಡಗಳ ಅವೈಜ್ಞಾನಿಕ ಅಗೆತದಿಂದ ಮಳೆಗಾಲದಲ್ಲಿ ಅಪಾಯ ಸಂಭವಿಸುವ ಆತಂಕ ಸುತ್ತಮುತ್ತಲಿನ ನಿವಾಸಿಗಳನ್ನು ಕಾಡುತ್ತಿದೆ. ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಜನವಸತಿ ಪ್ರದೇಶಗಳಿಗೆ ನೀರು ನುಗ್ಗುತ್ತಿದ್ದು, ಅಧಿಕಾರಿಗಳ ನಿರ್ಲಕ್ಷ್ಯ ವಹಿಸಿದ್ದಾರೆ.
ಮಳೆಯ ತೀವ್ರತೆಗೆ ಬೆಟ್ಟಗಳೇ ತಗ್ಗುಪ್ರದೇಶಕ್ಕೆ ನುಗ್ಗಿ ಅನಾಹುತ ಸಂಭವಿಸುವುದರಿಂದ ನಿಗದಿತ ಎತ್ತರಕ್ಕಿಂತ ಹೆಚ್ಚು ಅಗೆಯಲು ಸಂಬಂಧಪಟ್ಟ ಇಲಾಖೆಯ ಒಪ್ಪಿಗೆ ಪಡೆಯಬೇಕೆಂಬ ನಿಯಮ ಜಾರಿಗೆ ತರಲಾಗಿತ್ತು. ಆದರೆ ಅಽಕಾರಿ ವರ್ಗ ಕಟ್ಟುನಿಟ್ಟಾಗಿ ಜಾರಿಗೆ ಮುಂದಾಗದಿರುವುದು ಭೂಮಾಫಿಯಾದವರ ಪಾಲಿಗೆ ವರದಾನವಾಗಿದೆ.
ಎರಡು ವರ್ಷಗಳಿಂದ ಪುತ್ತೂರು ಮಂಜಲಪಡ್ಪು, ಬಪ್ಪಳಿಗೆ ಜಂಕ್ಷನ್ ಸೇರಿ ಬೈಪಾಸ್ ರಸ್ತೆಯಲ್ಲಿ ಗುಡ್ಡ ಕುಸಿತವಾಗಿ ವಾಹನ ಸಂಚಾರಕ್ಕೆ ಸಮಸ್ಯೆಯಾಗಿತ್ತು. ತೀವ್ರವಾದ ಮಳೆಗೆ ಮಣ್ಣು ರಸ್ತೆಗೆ ನುಗ್ಗಿ ಅಪಾಯ ಸಂಭವಿಸಿತ್ತು. ಅಗ್ನಿಶಾಮಕ ಹಾಗೂ ನೀರಿನ ಟ್ಯಾಂಕರ್ ಗಳ ಮೂಲಕ ಮಣ್ಣು ತೆರವು ಮಾಡಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು.
ಮುನ್ನೆಚ್ಚರಿಕೆ ಇಲ್ಲ: ಇಂಥ ಘಟನೆಗಳು ನಡೆದಿರುವ ಉದಾಹರಣೆ ಕಣ್ಣಮುಂದಿದ್ದರೂ ಮಂಜಲಪಡ್ಪು ಭಾಗದಲ್ಲಿ ಹಚ್ಚಹಸಿರಿನಿಂದ ಕೂಡಿರುವ ಗುಡ್ಡವನ್ನು ಕೊರೆಯಲಾಗುತ್ತಿದೆ. ಮಳೆ ನೀರು ಹರಿದು ಹೋಗಲು ಬೇಕಾದ ಮುನ್ನೆಚ್ಚರಿಕೆಯನ್ನು ತೆಗೆದುಕೊಂಡಿಲ್ಲ. ಶುಕ್ರವಾರ ರಾತ್ರಿ ಸುರಿದ ಮಳೆಗೆ ಕೆಲವು ಮನೆಗಳಿಗೆ ನೀರು ನುಗ್ಗಿದ್ದು, ನಿವಾಸಿಗಳು ರಾತ್ರಿ ಆತಂಕದಲ್ಲೇ ಕಳೆಯುವಂತಾಯಿತು. ಸುತ್ತಮುತ್ತಲಿನ ಸುಮಾರು ಹತ್ತಕ್ಕೂ ಹೆಚ್ಚು ಮನೆಗಳಿಗೆ ಅಪಾಯ ಎದುರಾಗಿದೆ.

ಕ್ರಮಕ್ಕೆ ಮುಂದಾಗದ ಸ್ಥಳೀಯಾಡಳಿತ

ಅಪಾಯ ಆಹ್ವಾನಿಸುವಂತೆ ಅಗೆಯುತ್ತಿದ್ದರೂ, ಸ್ಥಳೀಯಾಡಳಿತ ಸುಮೋಟೋ ಕೇಸು ದಾಖಲಿಸಿಕೊಂಡು ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ. ಒಂದು ವೇಳೆ ಅವೈಜ್ಞಾನಿಕ ಕಾಮಗಾರಿಗಳಿಗೂ ಇಂಜಿನಿಯರ್ ಸದೃಢವೆಂದು ದೃಢೀಕರಣ ನೀಡಿದರೆ ಕೆಂಗಣ್ಣಿಗೆ ಗುರಿಯಾವುದನ್ನು ತಪ್ಪಿಸಿಕೊಳ್ಳುವ ಪ್ರಯತ್ನ ಇದಾಗಿದೆ.

ಮುಖ್ಯ ರಸ್ತೆ ಬದಿಯಲ್ಲೇ ಕಾಮಗಾರಿ

ಗ್ರಾಮೀಣ ಪ್ರದೇಶದ ಒಳಗಿನ ಸ್ಥಳಗಳಲ್ಲಿ ನಡೆಯುವ ಕಾಮಗಾರಿಗಳು ಮುಖ್ಯ ರಸ್ತೆಯ ಬದಿಯಲ್ಲಿ ನಡೆಯುತ್ತಿದ್ದರೂ ಅಧಿಕಾರಿಗಳು ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ. ಮಳೆಗಾಲ ಸಮೀಸುವ ಸಂದರ್ಭದಲ್ಲಿ ಇಂತಹ ಕಾಮಗಾರಿಗೆ ಅನುಮತಿ ನೀಡುತ್ತಿರುವುದು ದುರಂತವಾಗಿದೆ. ಅಪಾಯ ಸಂಭವಿಸಿದ ಬಳಿಕ ಪರಿಹಾರಕ್ಕೆ ಮುಂದಾಗುವ ಬದಲು ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಉತ್ತಮ ಎಂದು ಸಾರ್ವಜನಿಕರು ಹೇಳುತ್ತಾರೆ.
"

ಭೂಮಾಫಿಯಾ ಪರವಾಗಿರುವ ಅಧಿಕಾರಿಗಳು ಅವೈಜ್ಞಾನಿಕ ಕಾಮಗಾರಿ ನಡೆಯುವ ಪ್ರದೇಶಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿಲ್ಲ. ಯಾವುದೇ ತಪ್ಪು ಮಾಡದ ಅಕ್ಕಪಕ್ಕದ ನಿವಾಸಿಗಳು ಮಳೆಗಾಲದಲ್ಲಿ ಅಂತಂತ್ರ ಸ್ಥಿತಿಯನ್ನು ಅನುಭವಿಸುವಂತಾಗಿದೆ. ಅನಾಹುತ ಸಂಭವಿಸಿ ಜೀವಕ್ಕೆ ಹಾನಿಯಾದ ಮೇಲೆ ಎಲ್ಲರೂ ಬೊಬ್ಬೆ ಹಾಕುವ ಬದಲು ಮೊದಲೇ ಅಗತ್ಯ ಕ್ರಮ ಕೈಗೊಳ್ಳಬೇಕು.

— ಅರವಿಂದ, ಸ್ಥಳೀಯ ನಿವಾಸಿ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net