ರಸ್ತೆಯುದ್ದಕ್ಕೂ ಎಲ್ಲೆಂದರಲ್ಲಿ ಕಸದ ರಾಶಿ Puttur

ಪುತ್ತೂರು ನಗರಸಭೆಯ ಬನ್ನೂರು ಘನ ತ್ಯಾಜ್ಯ ನಿರ್ವಹಣೆ ಮತ್ತು ವಿಲೇವಾರಿ ಘಟಕದ ಆವರಣದ ಹೊರಗೆ ಬಿದ್ದಿರುವ ಕಸದ ರಾಶಿ.
ಪುತ್ತೂರು ನಗರಸಭೆಯ ಬನ್ನೂರು ಘನ ತ್ಯಾಜ್ಯ ನಿರ್ವಹಣೆ ಮತ್ತು ವಿಲೇವಾರಿ ಘಟಕದ ಆವರಣದ ಹೊರಗೆ ಬಿದ್ದಿರುವ ಕಸದ ರಾಶಿ.
Published on

ಪ್ರಮುಖ ಮುಖ್ಯಾಂಶಗಳು

  • ಬನ್ನೂರು ತ್ಯಾಜ್ಯ ನಿರ್ವಹಣೆ ಘಟಕ ಮುಂಭಾಗ ಸ್ಥಳೀಯರ ಪ್ರತಿಭಟನೆ
ಪುತ್ತೂರು: ನಗರಸಭೆಯ ಬನ್ನೂರು ಘನ ತ್ಯಾಜ್ಯ ನಿರ್ವಹಣೆ ಮತ್ತು ವಿಲೇವಾರಿ ಘಟಕದ ಪ್ಲಾಸ್ಟಿಕ್ ಕಸವನ್ನು ಆವರಣದ ಹೊರಗಿನ ಖಾಲಿ ಜಾಗದಲ್ಲಿ ಸುರಿದಿರುವುದನ್ನು ವಿರೋಧಿಸಿ ಸೋಮವಾರ ಸ್ಥಳೀಯ ನಿವಾಸಿಗಳು ದಿಢೀರ್ ಪ್ರತಿಭಟನೆ ನಡೆಸಿದರು.
ರಕ್ತೇಶ್ವರಿ ಸಹಿತ ಸಪರಿವಾರ ದೈವಸ್ಥಾನದ ರಸ್ತೆಯ ಬದಿಯಲ್ಲಿ ಕಸದ ರಾಶಿ ಹಾಕಲಾಗಿದ್ದು ಓಡಾಟಕ್ಕೆ ಸಮಸ್ಯೆಯಾಗುತ್ತಿದೆ. ಅಲ್ಲದೆ ಸ್ಥಳೀಯ ನಿವಾಸಿಗಳಿಗೂ ತೊಂದರೆಯಾಗುತ್ತಿದೆ. ರಸ್ತೆಯುದ್ದಕ್ಕೂ ಕಸದ ರಾಶಿ ಬೀಳುತ್ತಿದ್ದು, ಪರಿಸರದ ಅಂದಗೆಡುತ್ತಿದೆ. ವೈಜ್ಞಾನಿಕವಾಗಿ ಕಸ ನಿರ್ವಹಣೆ ಮಾಡುವುದಾಗಿ ಹೇಳಿ ಈಗ ಆವರಣದ ಹೊರೆಗೆಯೂ ಕಸ ಸುರಿಯಲು ಪ್ರಾರಂಭಿಸಲಾಗಿದೆ ಎಂದು ಆರೋಪಿಸಿದರು. ರಸ್ತೆಯಲ್ಲಿ ಬಿದ್ದಿರುವ ಕಸವನ್ನು ಪ್ರಾಣಿಗಳು ಎಳೆದಾಡುತ್ತ ಮನೆಗಳ ಮುಂದೆ ತಂದು ಹಾಕುತ್ತವೆ. ಕಚೇರಿಯಲ್ಲಿ ಕುಳಿತಿರುವ ಅಧಿಕಾರಿಗಳು ಸ್ಥಳಕ್ಕೆ ಬಂದು ಜನಸಾಮಾನ್ಯರ ಸಮಸ್ಯೆ ತಿಳಿಯಬೇಕು ಎಂದು ಆಗ್ರಹಿಸಿದರು.
ಬನ್ನೂರು ತ್ಯಾಜ್ಯ ನಿರ್ವಹಣೆ ಮತ್ತು ವಿಲೇವಾರಿ ಘಟಕದ ಮುಂಭಾಗದಲ್ಲಿ ಸ್ಥಳೀಯ ನಿವಾಸಿಗಳು ತ್ಯಾಜ್ಯ ವಾಹನ ತಡೆದು ಪೌರಾಯುಕ್ತರು ಸ್ಥಳಕ್ಕೆ ಬರುವಂತೆ ಆಗ್ರಹಿಸಿದರು.


ನಗರಸಭೆ ಪೌರಾಯುಕ್ತರು, ಇಂಜಿನಿಯರ್ ಸ್ಥಳಕ್ಕೆ ಬರಬೇಕು ಇಲ್ಲದಿದ್ದರೆ ಘಟಕದೊಳಗೆ ತ್ಯಾಜ್ಯ ಸಂಗ್ರಹ ಲಾರಿಗಳಿಗೆ ಪ್ರವೇಶ ನೀಡುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪೌರಾಯುಕ್ತೆ ವಿದ್ಯಾ ಕಾಳೆ, ರಾಜಕಾಲುವೆ ತ್ಯಾಜ್ಯವನ್ನು ತಂದು ಸುರಿದ ಬಗ್ಗೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ದೈವಸ್ಥಾನಕ್ಕೆ ಹೋಗುವ ರಸ್ತೆ ಬದಿಯಲ್ಲಿರುವ ತ್ಯಾಜ್ಯ ತೆರವಿಗೆ ಸೂಚಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.
ಪ್ರಮುಖರಾದ ಕಾರ್ತಿಕ ಕುಲಾಲ್, ರಾಮಚಂದ್ರ ಭಟ್, ಗೌರಿ ಬನ್ನೂರು, ಹರೀಶ್ ಕುಲಾಲ್, ಬಾಲಚಂದ್ರ ಆಚಾರ್ಯ, ವಿಜಿತ್ ಗೌಡ, ವಿಜಯ್ ಗೌಡ, ವಿಠಲ ಹೆಗ್ಡೆ, ಹೇಮಲತಾ ಹೆಗ್ಡೆ, ಅಮಿತ್, ಮಹಾಬಲ ಪೂಜಾರಿ, ಭಾಗೀರಥಿ, ರಾಜೇಂದ್ರ, ಬಾಲಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.
"

ತ್ಯಾಜ್ಯ ಘಟಕಕ್ಕೆ ಬರುವ ಪ್ಲಾಸ್ಟಿಕ್‌ಗಳನ್ನು ಸಿಮೆಂಟ್ ಕಂಪನಿ ಬಳಕೆ ಕಳುಹಿಸಲಾಗುತ್ತಿದೆ. ಘಟಕದಲ್ಲಿ ಮಳೆಯಿಂದ ಸಾಗಾಟ ವಾಹನಕ್ಕೆ ಅಡಚಣೆಯಾಗುತ್ತಿರುವುದರಿಂದ ಹೊರಗಡೆ ನಗರಸಭೆಯ ಜಾಗದಲ್ಲಿ ತಾತ್ಕಾಲಿಕವಾಗಿ ಹಾಕಲಾಗಿದೆ. ಇದಕ್ಕೂ ಅಗತ್ಯ ತಡೆ ಬೇಲಿಗಳನ್ನು ಅಳವಡಿಸಲಾಗಿತ್ತು. ಮಳೆ-ಗಾಳಿಗೆ ಬಿದ್ದು ಹೋಗಿದೆ.

— ಪ್ರಜ್ವಲ್, ಸೈಟ್ ಇನ್‌ಜಾರ್ಜ್

"

ಘಟಕದಿಂದ ಆರು ಏಳು ತಿಂಗಳಿನಿಂದ ನಿರಂತರ ಸಮಸ್ಯೆಯಾಗುತ್ತಿದೆ. ನಗರಸಭೆ ಅಽಕಾರಿಗಳು ಘಟಕದ ಒಳಗಿನ ಯಾವುದೇ ಕಸವನ್ನು ಹೊರಗಡೆ ಹಾಕುವುದಿಲ್ಲ ಎಂದು ಭರವಸೆ ನೀಡಿದ್ದರು. ಆದರೆ ಈಗ ಖಾಸಗಿ ಲಾರಿಗಳಲ್ಲಿ ಕಸ ತಂದು ಎಲ್ಲೆಂದರಲ್ಲಿ ಸುರಿಯುತ್ತಿದ್ದಾರೆ. ಪಕ್ಕದಲ್ಲಿ ನಿರ್ಮಾಣವಾಗುತ್ತಿರುವ ಮಲ ತ್ಯಾಜ್ಯ ಘಟಕವೂ ನನೆಗುದಿಗೆ ಬಿದ್ದಿದೆ. ಮಳೆ ಬಂದು ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ.

— ಕಾರ್ತಿಕ್, ಸ್ಥಳೀಯ ನಿವಾಸಿ


"

ಜನಪ್ರತಿನಿಧಿಗಳ ಆಡಳಿತ ಮುಗಿದ ಬಳಿಕ ಸಾರ್ವಜನಿಕರ ಸಮಸ್ಯೆ ಕೇಳುವವರಿಲ್ಲದಂತಾಗಿದೆ. ಮೂರು ತಿಂಗಳಿನಿಂದ ಡಂಪಿಂಗ್ ಯಾರ್ಡ್ ಹೊರಗೆ ಬೇಕಾಬಿಟ್ಟಿ ಕಸ ಹಾಕಲಾಗುತ್ತಿದೆ. ನಗರಸಭೆಯ ರಾಜಕಾಲುವೆಗಳ ಕಸವನ್ನು ಮನೆಗಳ ಸಮೀಪ ಸುರಿಯಲಾಗುತ್ತಿದೆ. ಜನರಿಗೆ ಅನಾರೋಗ್ಯ ಕಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಜನರ ಮನವಿಗೆ ಅಧಿಕಾರಿಗಳು ಸ್ಪಂದಿಸಬೇಕು.

— ಗೌರಿ ಬನ್ನೂರು, ನಗರಸಭೆ ಮಾಜಿ ಸದಸ್ಯೆ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net