ಜನರಿಗೆ ಹೊರೆಯಾಗದಂತೆ ಆದಾಯ ಕ್ರೋಡೀಕರಣ Puttur

ಪುತ್ತೂರು ನಗರಸಭೆಯ ೨೦೨೬-೨೭ನೇ ಸಾಲಿನ ಆಯವ್ಯಯ ಪೂರ್ವಸಿದ್ಧತಾ ಸಭೆಯಲ್ಲಿ ಭಾಗವಹಿಸಿದ್ದ ಸಂಘಸಂಸ್ಥೆಗಳ ಪ್ರತಿನಿಽಗಳು ಹಾಗೂ ಪ್ರಮುಖ ಸಾರ್ವಜನಿಕರು.
ಪುತ್ತೂರು ನಗರಸಭೆಯ ೨೦೨೬-೨೭ನೇ ಸಾಲಿನ ಆಯವ್ಯಯ ಪೂರ್ವಸಿದ್ಧತಾ ಸಭೆಯಲ್ಲಿ ಭಾಗವಹಿಸಿದ್ದ ಸಂಘಸಂಸ್ಥೆಗಳ ಪ್ರತಿನಿಽಗಳು ಹಾಗೂ ಪ್ರಮುಖ ಸಾರ್ವಜನಿಕರು.
Published on

ಪ್ರಮುಖ ಮುಖ್ಯಾಂಶಗಳು

  • - ಪುತ್ತೂರು ನಗರಸಭೆ ಬಜೆಟ್ ಪೂರ್ವ ಸಭೆಯಲ್ಲಿ ಸಾರ್ವಜನಿಕರ ಆಗ್ರಹ
ಪುತ್ತೂರು: ನಗರಸಭೆಯ ೨೦೨೬-೨೭ನೇ ಸಾಲಿನ ಆಯವ್ಯಯ ತಯಾರಿಸುವ ನಿಟ್ಟಿನಲ್ಲಿ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ನಗರದ ಪ್ರಮುಖರನ್ನೊಳಗೊಂಡ ೨ನೇ ಸುತ್ತಿನ ಸಾರ್ವಜನಿಕ ಸಮಾಲೋಚನಾ ಸಭೆ ಶುಕ್ರವಾರ ನಡೆಯಿತು.
ಪುತ್ತೂರಿನ ಜನರಿಗೆ ಯಾವುದೇ ಹೊರಯಾಗದಂತೆ ಸಂಪನ್ಮೂಲ ಕ್ರೋಡೀಕರಣ ಮಾಡಬೇಕು. ಜಾಹೀರಾತು ಫಲಕಗಳಿಗೆ ತೆರಿಗೆ ಹೆಚ್ಚಳ ಮಾಡುವ ಜತೆಗೆ ಕಚೇರಿ ಹಾಗೂ ದಾರಿ ದೀಪವನ್ನು ಸೋಲಾರ್ ವ್ಯವಸ್ಥೆಗೆ ಪರಿವರ್ತಿಸುವ ಕಾರ್ಯವಾಗಲಿ. ಬಾಡಿಗೆ ಅಂಗಡಿಗಳಿಗೆ ಪರವಾನಗಿ ನೀಡುವ ಸಂದರ್ಭ ಪದೇ ಪದೇ ದಾಖಲೆ ಕೇಳಬಾರದು. ಈಗ ಎಲ್ಲವೂ ಡಿಜಿಟಲೀಕರಣವಾಗಿರುವ ಕಾರಣ ಕೆಲವು ವ್ಯವಸ್ಥೆಯನ್ನು ಇನ್ನಷ್ಟು ಸರಳೀಕರಣ ಮಾಡಬಹುದು. ತೆರಿಗೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಜಾಗೃತಿ ಮೂಡಿಸಿದಲ್ಲಿ ಸಕಾಲಕ್ಕೆ ತೆರಿಗೆ ಪಾವತಿಯಾಗುವ ಸಾಧ್ಯತೆಯಿದೆ ಎಂಬ ಸಲಹೆಗಳು ವ್ಯಕ್ತವಾದವು.
ಸ್ವಚ್ಛತೆಗೆ ಆದ್ಯತೆ ನೀಡಿ: ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಸ್ವಚ್ಛತೆಗೆ ಹೆಚ್ಚಿನ ಮಹತ್ವ ನೀಡಬೇಕು. ಬೇಸಿಗೆಯಲ್ಲೂ ತೋಡುಗಳಲ್ಲಿ ತ್ಯಾಜ್ಯ ನೀರು ಹರಿಯುತ್ತಿದ್ದು, ಸಭಾಂಗಣ ಹಾಗೂ ಹೋಟೆಲ್ ತ್ಯಾಜ್ಯವನ್ನು ಗುಂಡಿಗಳಿಗೆ ಬಿಡಲು ವ್ಯವಸ್ಥೆ ಮಾಡಬೇಕು. ನೆಹರುನಗರದಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಓಡಾಟ ಹೆಚ್ಚಿರುವ ಕಾರಣ ಸಾರ್ವಜನಿಕ ಶೌಚಗೃಹದ ಅಗತ್ಯವಿದೆ. ಬೀದಿನಾಯಿಗಳ ಹಾವಳಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.
ಪೌರಾಯುಕ್ತೆ ವಿದ್ಯಾ ಎಂ.ಕಾಳೆ ಸಲಹೆಗಳನ್ನು ಆಲಿಸಿದರು. ಸಾರ್ವಜನಿಕರ ಪರವಾಗಿ ರವಿಕೃಷ್ಣ ಕಲ್ಲಾಜೆ, ಉಲ್ಲಾಸ್ ಪೈ, ಗಣೇಶ್ ರಾವ್, ನಾರಾಯಣ ನಾಯ್ಕ, ಯೂಸೂಫ್, ಈಶ್ವರ ನಾಯ್ಕ, ಅಬ್ದುಲ್ ರಹಿಮಾನ್ ಆಜಾದ್ ಮಾತನಾಡಿದರು. ಲೆಕ್ಕಾಧೀಕ್ಷಕ ರಾಮಚಂದ್ರ ಸಭೆ ನಿರ್ವಹಿಸಿದರು.
ಬೆರಳೆಣಿಕೆ ಮಂದಿ ಭಾಗಿ!
ಸಂಘ ಸಂಸ್ಥೆಗಳಿಂದ ಕೇವಲ ನಾಲ್ಕು ಐದು ಮಂದಿ ಭಾಗವಹಿಸಿದ್ದು, ಖಾಲಿ ಖುರ್ಚಿಯನ್ನು ಭರ್ತಿ ಮಾಡುವ ಉದ್ದೇಶದಿಂದ ಕಚೇರಿ ಸಿಬ್ಬಂದಿಯನ್ನೇ ಕೂರಿಸಲಾಗಿತ್ತು. ಮೂರು ವರ್ಷದಿಂದ ಸಲಹೆಗಳನ್ನು ನೀಡಿದರೂ ಸಭೆಯಲ್ಲಿ ಸ್ವೀಕರಿಸುವುದಿಲ್ಲ. ಆದ್ದರಿಂದ ಸಭೆಗೆ ಹೋಗುವುದೇ ಬೇಡ ಎಂಬ ನಿರ್ಧಾರಕ್ಕೆ ಸಾರ್ವಜನಿಕರು ಬಂದಿದ್ದಾರೆಂಬ ಮಾತು ಕೇಳಿಬಂತು. ನಗರಸಭೆಯಲ್ಲಿ ಸಂಘಸಂಸ್ಥೆಗಳ ಪಟ್ಟಿ ಇದ್ದು, ಪ್ರತಿಯೊಬ್ಬರಿಗೂ ಪತ್ರ ನೀಡಿ ಪ್ರತಿನಿಽಗಳನ್ನು ಬಜೆಟ್ ಪೂರ್ವಸಭೆಗೆ ಆಹ್ವಾನಿಸಿದಲ್ಲಿ ಹೆಚ್ಚಿನ ಜನ ಬರಬಹುದೆಂಬ ಸಲಹೆಯೂ ವ್ಯಕ್ತವಾಯಿತು.
ಶಾಶ್ವತ ಆದಾಯಕ್ಕೆ ಒತ್ತು ನೀಡಿ!
ನಗರಸಭೆಗೆ ಶಾಶ್ವತ ಆದಾಯ ಬರುವಂತೆ ಮಾರುಕಟ್ಟೆ ರಚನೆ ಮಾಡಬೇಕು. ಖಾಸಗಿ ಬಸ್ ನಿಲ್ದಾಣದ ಕೊಠಡಿಗಳನ್ನು ಸೂಕ್ತ ರೀತಿಯಲ್ಲಿ ಬಳಕೆ ಮಾಡುವ ಕಾರ್ಯವಾಗಬೇಕು. ಇದರ ಜತೆಗೆ ನಗರಸಭೆಯ ವಾಣಿಜ್ಯ ಕಟ್ಟಡಗಳು ಸೂಕ್ತವಾಗಿ ಬಳಸಿಕೊಂಡದಲ್ಲಿ ಆದಾಯ ಕ್ರೋಡೀಕರಣ ಮಾಡಬಹುದು. ಜನಾಕರ್ಷಕ ಯೋಜನೆಗಳನ್ನು ನಗರಸಭೆ ಜಾರಿಗೆ ತರಬೇಕೆಂಬ ಅಭಿಪ್ರಾಯ ವ್ಯಕ್ತವಾಯಿತು.
"

ನಗರಸಭೆಯ ವಾಣಿಜ್ಯ ಕಟ್ಟಡಗಳ ಬಳಕೆಗೆ ಈಗಾಗಲೇ ಜಿಲ್ಲಾಧಿಕಾರಿಗಳಿಂದ ಒಪ್ಪಿಗೆ ಪಡೆಯಲಾಗಿದೆ. ತೋಡುಗಳನ್ನು ಸ್ವಚ್ಛ ಮಾಡುವ ನಿಟ್ಟಿನಲ್ಲಿ ಟೆಂಡರ್ ಕರೆಯಲಾಗುತ್ತಿದೆ. ಫುಟ್‌ಪಾತ್‌ನಲ್ಲಿ ವಾಹನ ನಿಲುಗಡೆ ಮಾಡದಂತೆ ಕ್ರಮ ಕೈಗೊಳ್ಳಲು ಸಂಚಾರ ಠಾಣೆಗೆ ಸೂಚಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net