ಅಧಿಕಾರಿಗಳ ಮನೆಮುಂದೆಯೇ ತ್ಯಾಜ್ಯ Puttur

ದರ್ಭೆ ಸಮೀಪದಲ್ಲಿರುವ ಸರ್ಕಾರಿ ಅಧಿಕಾರಿಗಳ ವಸತಿ ನಿಲಯಗಳ ಮುಂಭಾಗದ ಚರಂಡಿಯಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲು ತುಂಬಿರುವುದು.
ದರ್ಭೆ ಸಮೀಪದಲ್ಲಿರುವ ಸರ್ಕಾರಿ ಅಧಿಕಾರಿಗಳ ವಸತಿ ನಿಲಯಗಳ ಮುಂಭಾಗದ ಚರಂಡಿಯಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲು ತುಂಬಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಚರಂಡಿ ಮುಚ್ಚಿ ನೀರು ನುಗ್ಗಿದರೂ ಡೋಂಟ್‌ಕೇರ್
  • ಸಮಸ್ಯೆ ಬಗೆಹರಿಸಲು ನಿರುತ್ಸಾಹ
ಪುತ್ತೂರು: ಉಪವಿಭಾಗ ಅಧಿಕಾರಿ ಸೇರಿ ಸರ್ಕಾರಿ ಅಧಿಕಾರಿಗಳ ವಸತಿ ನಿಲಯಗಳಿರುವ ಪ್ರದೇಶದಲ್ಲಿ ಪ್ಲಾಸ್ಟಿಕ್ ಕಸ, ಚರಂಡಿ ಮುಚ್ಚಿ ನೀರು ರಸ್ತೆಗೆ ನುಗ್ಗುವ ಸಮಸ್ಯೆಗಳಿದ್ದರೂ ಕೇಳುವವರಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಪೇಟೆಯ ಹೃದಯ ಭಾಗದಲ್ಲಿರುವ ಸಮಸ್ಯೆಯನ್ನು ಸರಿಪಡಿಸಲಾಗದವರಿಂದ ಗ್ರಾಮೀಣ ಭಾಗದಲ್ಲಿ ಏನನ್ನು ನಿರೀಕ್ಷಿಸಬಹುದೆಂಬ ಪ್ರಶ್ನೆ ಸಾರ್ವಜನಿಕರಿಂದ ಕೇಳಿ ಬಂದಿದೆ.
ದರ್ಬೆ ಫಿಲೋಮಿನಾ ಕಾಲೇಜು ಸಮೀಪದಿಂದ ಕೃಷಿ ಇಲಾಖೆಯಾಗಿ ಪರ್ಲಡ್ಕ ಸಂಪರ್ಕಿಸುವ ಒಳ ರಸ್ತೆಯಲ್ಲಿ ಸರ್ಕಾರಿ ಅಧಿಕಾರಿಗಳ ವಸತಿ ನಿಲಯವಿದೆ. ನಿತ್ಯ ಬೆಳಗೆದ್ದು ಪರಿಸರವನ್ನು ಗಮನಿಸಿದರೆ ಚರಂಡಿಯಲ್ಲಿ ಹೂಳು ತುಂಬಿರುವುದು, ಪ್ಲಾಸ್ಟಿಕ್ ನೀರಿನ ಬಾಟಲಿ ಎಸೆದಿರುವುದು ಕಣ್ಣಿಗೆ ಬೀಳುತ್ತದೆ. ಮಳೆಯಾದರೆ ನೀರು ಸಂಪೂರ್ಣ ರಸ್ತೆಯಲ್ಲೇ ಹರಿದು ಮುಖ್ಯ ರಸ್ತೆಯನ್ನು ಸೇರುತ್ತಿದ್ದರೂ ಇದಕ್ಕೆ ಪರಿಹಾರ ಲಭಿಸಿಲ್ಲ.
ಪರ್ಲಡ್ಕ ಶಾಲಾ ರಸ್ತೆಯ ಪ್ರಾರಂಭದಲ್ಲಿ ಸರ್ಕಾರಿ ಬಹುಮಹಡಿ ಕಟ್ಟಡ ನಿರ್ಮಾಣದ ಕಾಮಗಾರಿ ಕೆಲವು ವರ್ಷದಿಂದ ಬಾಕಿಯಾಗಿ ಈಗ ಎರಡು ಮೂರು ವರ್ಷದಿಂದ ಭರದಿಂದ ಸಾಗಿದೆ. ೨೦೨೩ ಮಾರ್ಚ್ ಮೊದಲೇ ಚರಂಡಿಗಳನ್ನು ಮುಚ್ಚಲಾಗಿದ್ದು, ಕಾಂಕ್ರೀಟ್ ಚರಂಡಿಗಳು ನಿರುಪಯುಕ್ತವಾಗಿವೆ. ಮಳೆಗಾಲದಲ್ಲೂ ಇದರ ದುರಸ್ತಿಗೆ ಅಧಿಕಾರಿಗಳು ಮುಂದಾಗದಿರುವುದು ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತದೆ.

ಶಾಸಕರೇ ಸೂಚನೆ ನೀಡಬೇಕು

ಪುತ್ತೂರು ಪೇಟೆಯ ಆಸುಪಾಸಿನಲ್ಲಿ ನಿತ್ಯ ಸಮಸ್ಯೆಗಳ ಸರಮಾಲೆಯ ದೂರುಗಳು ಬಂದರೂ, ಇದಕ್ಕೆ ಅಧಿಕಾರಿಗಳಿಂದ ಸಮರ್ಪಕ ಸ್ಪಂದನೆ ಲಭಿಸುತ್ತಿಲ್ಲ. ಸಮಸ್ಯೆಗಳು ನಿತ್ಯ ಇರುವುದು, ಪ್ರಾಣ ಹಾನಿಯಾಗುವ ತನಕ ಅದಕ್ಕೂ ನಮಗೂ ಸಂಬಂಧವೇ ಇಲ್ಲ, ತಿಂಗಳ ವೇತನ ಕೈಸೇರಿದರೆ ಸಾಕೆಂಬ ಮನೋಭಾವ ಹೆಚ್ಚಾಗುತ್ತಿದೆ. ಪ್ರತಿಯೊಂದು ವಿಚಾರ ಶಾಸಕರ, ಜನಪ್ರತಿನಿಧಿಗಳಿಂದ ಸೂಚನೆ ಬರಬೇಕೆಂಬ ನಿರೀಕ್ಷೆಯನ್ನಿಟ್ಟಿರುವಂತೆ ಕಾಣುತ್ತಿದೆ.
ಸಹಾಯಕ ಆಯುಕ್ತರ ಮನೆಯ ಬದಿಯಲ್ಲಿರುವ ಮಳೆನೀರಿನ ಕಾಂಗ್ರೀಟ್ ಚರಂಡಿ ಮಣ್ಣು, ಕಸದಿಂದ ತುಂಬಿ ಮುಚ್ಚಿಹೋಗಿರುವುದು.

ಸ್ವಚ್ಛ ಪುತ್ತೂರು ಭಾಷಣಕ್ಕೆ ಸೀಮಿತ

ನಗರಸಭೆಯಲ್ಲಿ ಕೆಲವು ದಿನಗಳ ಹಿಂದೆ ಸ್ವಚ್ಛ ಪುತ್ತೂರು ವಿಚಾರದಲ್ಲಿ ಪ್ರತಿಯೊಬ್ಬರಿಂದ ಒಟಿಪಿ ಸಂಗ್ರಹಿಸುವ ಕಾರ್ಯವಾಗಿದೆ. ಇದರಲ್ಲಿ ಯಾರೊಬ್ಬರೂ ಏನೂ ಅಭಿಪ್ರಾಯ ತಿಳಿಸುವುದು ಬೇಡ ಅದನ್ನು ನಾವೇ ಭರಿಸಿಕೊಳ್ಳುತ್ತೇವೆಂಬ ಮಾತನ್ನೂ ಹೇಳಿಕೊಂಡಿದ್ದರು. ಕೆಲವು ಅಧಿಕಾರಿಗಳು, ಜನಪ್ರತಿನಿಧಿಗಳು ಸ್ವಚ್ಛ ಪುತ್ತೂರು ಮಾಡಬೇಕೆಂಬ ಭಾಷಣ ಮಾಡಿ ಅಲ್ಲಿಗೇ ವಿಚಾರ ಬಿಡುತ್ತಿದ್ದಾರೆ. ಸಹಾಯಕ ಆಯುಕ್ತರ ಮನೆ ಮುಂಭಾಗದಲ್ಲಿನ ಚರಂಡಿಯಲ್ಲಿರುವ ಪ್ಲಾಸ್ಟಿಕ್ ಬಾಟಲ್ ರಾಶಿ ಸ್ವಚ್ಛ ಪುತ್ತೂರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದೆ.

ತಾಲೂಕು ಪಂಚಾಯಿತಿಯಿಂದ ಕ್ಲೀನಿಂಗ್

ತಾಲೂಕು ಪಂಚಾಯಿತಿ ಕಚೇರಿಯ ಕಟ್ಟಡ ಕಾಮಗಾರಿ ಭರದಿಂದ ಸಾಗುತ್ತಿದ್ದು, ಸುತ್ತ ಇರುವ ಚರಂಡಿಗಳಿಗೆ ಕಾಮಗಾರಿ ಮಣ್ಣು ತುಂಬಿಕೊಂಡಿತ್ತು. ಅಕಾಲಿಕ ಮಳೆ ಪ್ರಾರಂಭವಾಗುತ್ತಿದ್ದಂತೆ ಗುತ್ತಿಗೆದಾರ ಚರಂಡಿ ಮಣ್ಣು ತೆರವು ಮಾಡಿ ಸ್ವಚ್ಛ ಮಾಡಿದ್ದಲ್ಲದೆ, ಸೂಕ್ತ ರೀತಿಯಲ್ಲಿ ನೀರು ಹರಿಯುವಂತೆ ಮಾಡಿ ಕೊಟ್ಟಿದ್ದಾರೆ.
"

ಸಹಾಯಕ ಆಯುಕ್ತರ ನಿವಾಸದ ಪಕ್ಕದಲ್ಲೇ ಸರ್ಕಾರಿ ಕಟ್ಟಡ ನಿರ್ಮಾಣ ನಡೆಯುತ್ತಿದ್ದು, ಮೂರು ವರ್ಷಗಳಿಂದ ಚರಂಡಿ ಮಣ್ಣಿನಿಂದ ತುಂಬಿಕೊಂಡಿದೆ. ಇದನ್ನು ಗಮನಿಸಿ ಸರಿಪಡಿಸುವ ಕಾರ್ಯಕ್ಕೆ ಮುಂದಾಗದ ಅಧಿಕಾರಿ ವರ್ಗದಿಂದ ಯಾವ ರೀತಿಯಲ್ಲಿ ಅಭಿವೃದ್ಧಿಯನ್ನು ನಿರೀಕ್ಷಿಸಬಹುದು.

— ವೆಂಕಟ್ರಮಣ ಸಾಮಾಜಿಕ ಹೋರಾಟಗಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net