ಕೇಸು ಮುಂದುವರಿಸಲು ಆಸಕ್ತಿ ಇಲ್ಲ PUTTUR

ಮುಬಾಶಿರಾ ಮಂಗಳೂರಿನಲ್ಲಿ ಪ್ರತಿಕ್ರಿಯೆ
ಮುಬಾಶಿರಾ ಮಂಗಳೂರಿನಲ್ಲಿ ಪ್ರತಿಕ್ರಿಯೆ
Published on

ಪ್ರಮುಖ ಮುಖ್ಯಾಂಶಗಳು

  • ದರ್ಬೆ ಗಲಾಟೆ ಪ್ರಕರಣದ ದೂರುದಾರ ಮಹಿಳೆ ಪ್ರತಿಕ್ರಿಯೆ
ಪುತ್ತೂರು: ದರ್ಬೆ ಜೆರಾಕ್ಸ್ ಅಂಗಡಿಯಲ್ಲಿ ನಡೆದ ಗಲಾಟೆಗೂ ನಮಗೂ ಸಂಬಂಧವೇ ಇಲ್ಲ. ನಾವು ಹೋದ ಬಳಿಕ ಯಾರು ಗಲಾಟೆ ಮಾಡಿದ್ದಾರೆ ಎಂದು ಗೊತ್ತಿಲ್ಲ. ನಾವು ಇದರಲ್ಲಿ ರಾಜಕೀಯ, ಹಿಂದೂ-ಮುಸ್ಲಿಂ ಗಲಾಟೆ ಮಾಡುವುದಕ್ಕೆ ಹೋಗಿಲ್ಲ ಎಂದು ಪ್ರಕರಣದ ದೂರುದಾರ ಮಹಿಳೆ ಮುಬಾಶಿರ್ ಪ್ರತಿಕ್ರಿಯಿಸಿದ್ದಾರೆ.
ಮಾಧ್ಯಮದ ಜತೆ ಮಾತನಾಡಿದ ಅವರು, ಮಗುವಿನ ಜನನ ಪ್ರಮಾಣಪತ್ರ ಜೆರಾಕ್ಸ್ ಮಾಡಿಸಲು ಕೊಟ್ಟಿದ್ದೆವು. ಸಿಬ್ಬಂದಿ ಜೆರಾಕ್ಸ್ ಮಾಡುತ್ತಿದ್ದಾಗಲೇ ಅದು ಒಳಗೆ ಸಿಕ್ಕಿ ಹಾಕಿಕೊಂಡಿತ್ತು. ಹೊರತೆಗೆಯಲು ಸಾಧ್ಯವಾದಿದ್ದಾಗ ಅಂಗಡಿ ಮಾಲಕಿಯನ್ನು ಕರೆಸಿ ಹೊಸತು ಮಾಡಿಕೊಡುವಂತೆ ಕೇಳಿದೆವು. ಅವರು ಸಾಧ್ಯವಿಲ್ಲ ಎಂದರು. ನಮಗೆ ತುರ್ತು ಇದ್ದುದರಿಂದ ಬೇರೆಯವರಲ್ಲಿ ಕೇಳಿದಾಗ ೩೦೦ ರೂ. ಆಗುತ್ತದೆ ಎಂದಿದ್ದಕ್ಕೆ ಅದರ ಶುಲ್ಕ ಕೊಡುವಂತೆ ಅಂಗಡಿಯವರಲ್ಲಿ ಕೇಳಿದೆವು. ಅಂಗಡಿ ಮಾಲಕಿ ಅದಕ್ಕೂ ಒಪ್ಪಲಿಲ್ಲ. ಈ ವೇಳೆ ವಾದಿಸಿದ್ದಕ್ಕೆ ಮಾಡಿಕೊಡುವುದಿಲ್ಲ ಏನು ಬೇಕಾದರೂ ಮಾಡಿ ಎಂದು ಹೇಳಿದರು. ಈ ವೇಳೆ ನನ್ನ ಅಣ್ಣ ಮೊಬೈಲಿನಲ್ಲಿ ವಿಡಿಯೋ ಮಾಡಿದ್ದಕ್ಕೆ ಅಂಗಡಿ ಮಾಲಕಿ ಪುತ್ರ ಸುದರ್ಶನ್ ಪೈ ಹಲ್ಲೆ ಮಾಡಿದ್ದು, ಬಿಡಿಸಲು ಹೋದ ನಮ್ಮ ಮೇಲೂ ಹಲ್ಲೆ ಮಾಡಿದರು. ಬಳಿಕ ಅಲ್ಲಿಂದ ನಾವು ತೆರಳಿದ್ದು, ನಂತರ ಯಾರು ಬಂದಿದ್ದಾರೆ, ಯಾರು ಗಲಾಟೆ ಮಾಡಿದ್ದಾರೆಂದು ನಮಗೆ ಗೊತ್ತಿಲ್ಲ ಎಂದರು.

ಪೊಲೀಸರು ಉತ್ತರಿಸಿದ್ದಾರೆ:

ನಾವು ಸುಳ್ಯದವರಾಗಿದ್ದು ಪುತ್ತೂರಿನಲ್ಲಿ ಯಾರೂ ಪರಿಚಯದವರಿಲ್ಲ. ಅಂಗಡಿಯವರೂ ಪರಿಚಯದವರಲ್ಲ. ನಮಗೆ ರಾಜಕೀಯ ಮಾಡುವುದಕ್ಕಾಗಲಿ, ಕೇಸು ಮುಂದುವರಿಕ್ಕಾಗಲಿ ಆಸಕ್ತಿ ಇಲ್ಲ. ಅಣ್ಣ ಆಸ್ಪತ್ರೆಗೆ ದಾಖಲಾಗಿ ೧೫ ಸಾವಿರ ರೂ. ಖರ್ಚು ಆಗಿದೆ. ಅದನ್ನು ಕೊಟ್ಟರೆ ಕೇಸು ಹಿಂಪಡೆಯುತ್ತೇವೆ. ಹಲ್ಲೆ ಮಾಡಿದ್ದಕ್ಕೆ ಪೊಲೀಸರು ಬಂಧಿಸಿ ಜೈಲಿಗೆ ಹಾಕಿದ್ದಾರೆ. ಮಹಿಳೆ ಮೇಲೆ ಕೈಮಾಡಲು ಧೈರ್ಯ ಮಾಡಿದ್ದಕ್ಕೆ ಪೊಲೀಸರು ಉತ್ತರ ಕೊಟ್ಟಿದ್ದಾರೆ ಎಂದು ಮುಬಾಶಿರಾ ಮಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net