ಎಂಡೋಪೀಡಿತರ ಮನೆ ದಾರಿಗೆ ಅಡ್ಡಿ Public Road Close

ಅಧಿಕಾರಿಗಳ ಸೂಚನೆಯಂತೆ ಸಂಪರ್ಕ ರಸ್ತೆಗೆ ಅಡ್ಡಲಾಗಿ ಕಟ್ಟಿರುವ ಕಲ್ಲುಗಳನ್ನು ಯಂತ್ರದ ಮೂಲಕ ತೆರವು ಮಾಡಲಾಯಿತು.
ಅಧಿಕಾರಿಗಳ ಸೂಚನೆಯಂತೆ ಸಂಪರ್ಕ ರಸ್ತೆಗೆ ಅಡ್ಡಲಾಗಿ ಕಟ್ಟಿರುವ ಕಲ್ಲುಗಳನ್ನು ಯಂತ್ರದ ಮೂಲಕ ತೆರವು ಮಾಡಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ತೆರವುಗೊಳಿಸುವಂತೆ ಅಧಿಕಾರಿಗಳಿಗೆ ದೂರು
ಪುತ್ತೂರು: ಕೊಡಿಪ್ಪಾಡಿ ಬಾಯಂಬೆಯಲ್ಲಿ ೨೫ ವರ್ಷಗಳಿಂದ ಬಳಕೆಯಲ್ಲಿದ್ದ ಸಾರ್ವಜನಿಕ ಸಂಪರ್ಕ ರಸ್ತೆಯನ್ನು ಏಕಾಏಕಿ ಮುಚ್ಚುವ ಮೂಲಕ ಎಂಡೋಪೀಡಿತ ಸಹಿತ ಹಲವು ಮನೆಯ ಮಂದಿ ಸುತ್ತು ಬಳಸಿಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದ್ದು, ಸ್ಥಳೀಯರು ಈ ಬಗ್ಗೆ ಕಂದಾಯ, ಪೊಲೀಸ್ ಇಲಾಖೆ ಸೇರಿ ನಗರಸಭೆಗೆ ದೂರು ನೀಡಿದ್ದಾರೆ.
ಖಾಸಗೀ ವ್ಯಕ್ತಿಯೊಬ್ಬರು ವರ್ಗ ಜಾಗವನ್ನು ತುಂಡರಿಸಿ ಹಲವು ವ್ಯಕ್ತಿಗಳಿಗೆ ಮಾರಾಟ ಮಾಡಿದ್ದು, ಈ ಸಂದರ್ಭ ಚಾಲ್ತಿಯಲ್ಲಿದ್ದ ಸಂಪರ್ಕ ರಸ್ತೆಯನ್ನು ಮುಚ್ಚಿದ್ದಾರೆ. ಜತೆಗೆ ಮಳೆನೀರು ಹರಿಯುವ ಕಣಿಯ ಮೋರಿಗಳನ್ನು ತೆಗೆದು ಮಣ್ಣು ತುಂಬಿಸಿ ಮುಚ್ಚಿದ್ದಾರೆಂಬ ಆರೋಪ ಸ್ಥಳೀಯರಿಂದ ಕೇಳಿಬಂದಿದೆ. ಲೇಔಟ್‌ನ ನಿವೇಶನ ಪಡೆದುಕೊಂಡವರು ಸಂಪರ್ಕ ರಸ್ತೆಯಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. 
ನಗರಸಭೆಯಿಂದ ಬಯಂಬೆ ಅಡ್ಡ ರಸ್ತೆ ಫಲಕವನ್ನು ಅಳವಡಿಸಿದ್ದಲ್ಲದೆ ಇಂಟರ್‌ಲಾಕ್ ಅಳವಡಿಸುವ ಕಾರ್ಯವನ್ನು ಮಾಡಲಾಗಿತ್ತು. ಸುಮಾರು ಒಂದು ಕಿ.ಮೀ ದೂರದಲ್ಲಿ ಹೋಗುವ ರಸ್ತೆಗೂ ಇಂಟರ್‌ಲಾಕನ್ನು ನಗರಸಭೆಯಿಂದ ಅಳವಡಿಸಲಾಗಿತ್ತು. ನಿವೇಶನಗಳ ಭೂಪರಿವರ್ತನೆಯ ಸಮಯದಲ್ಲಿ ಸಾರ್ವಜನಿಕ ರಸ್ತೆಯೆಂದು ತೋರಿಸಿರುವುದನ್ನೇ ಈಗ ಮುಚ್ಚಲಾಗಿದೆ ಎಂದು ನಗರ ಸಭೆ, ಕಂದಾಯ ಇಲಾಖೆಗೆ ಸ್ಥಳೀಯ ನಿವಾಸಿಗಳು ದೂರು ನೀಡಿದ್ದಾರೆ.

ಸ್ಥಳ ಪರಿಶೀಲನೆ:

ದೂರಿನ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯಿಂದ ಕಂದಾಯ ನಿರೀಕ್ಷಕ ಚಂದ್ರ ನಾಯ್ಕ, ಕೊಡಿಪ್ಪಾಡಿ ಗ್ರಾಮಕರಣಿಕ ಹಕೀಬ್, ಸಹಾಯಕ ಪುಷ್ಪರಾಜ್, ಕಬಕ ಗ್ರಾಮ ಸಹಾಯಕ ಮನೋಹರ್ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು. ಸರ್ಕಾರಿ ವ್ಯವಸ್ಥೆಯಲ್ಲಿ ರಸ್ತೆಯೆಂದು ಕಾಣುತ್ತಿರುವ ಕಾರಣ ರಸ್ತೆ ಮುಚ್ಚಿರುವುದನ್ನು ಮಾತುಕತೆ ಮಾಡಿ ತೆಗೆಸುವ ಕಾರ್ಯ ಮಾಡಿದ್ದಾರೆ. ನಗರಸಭೆಯ ಇಂಜಿನಿಯರ್ ಕೃಷ್ಣಮೂರ್ತಿ ರೆಡ್ಡಿ ಅವರ ತಂಡ ಸ್ಥಳ ಪರಿಶೀಲನೆ ನಡೆಸಿ, ಅಗತ್ಯ ಕ್ರಮಕ್ಕೆ ಮುಂದಾಗಿದ್ದಾರೆ.

ಕೊಳವೆ, ಬೀದಿ ದೀಪ

ಮುಚ್ಚಿದ ರಸ್ತೆಯ ತಳಭಾಗದಲ್ಲಿ ನಗರಸಭೆಗೆ ಸೇರಿದ ನೀರಿನ ಕೊಳವೆಯನ್ನು ಅಳವಡಿಸಲಾಗಿದೆ. ಸಾರ್ವಜನಿಕರ ಅನುಕೂಲಕ್ಕೆ ಬೀದಿದೀಪಗಳನ್ನು ಹಾಕಲಾಗಿದೆ. ಇಷ್ಟೆಲ್ಲಾ ಇದ್ದರೂ, ರಸ್ತೆಯನ್ನು ಮುಚ್ಚುವ ಮೂಲಕ ಕಾನೂನು ಗಾಳಿಗೆ ತೋರಲಾಗಿದೆ ಎಂಬ ಆರೋಪವಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net