ಕಡ್ಡಾಯವಾಗಲಿ ಸಾರ್ವಜನಿಕ ವಿಮೆ PUTTUR

Published on: 

ಪುತ್ತೂರು: ಸಾರ್ವಜನಿಕ ಸಮಾರಂಭಗಳು, ಉತ್ಸವಗಳು, ಧಾರ್ಮಿಕ ಸಭೆಗಳು ಹಾಗೂ ಶೈಕ್ಷಣಿಕ ಮತ್ತು ವಸತಿನಿಲಯಗಳಲ್ಲಿ ನಡೆಯುವ ಆಕಸ್ಮಿಕ ಅವಘಡಗಳು ಮತ್ತು ಮಾನವ ನಿರ್ಮಿತ ದುರಂತಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಸಂತ್ರಸ್ತರಿಗೆ ಸೂಕ್ತ ಆರೋಗ್ಯ ಮತ್ತು ಆರ್ಥಿಕ ಭದ್ರತೆ ಒದಗಿಸಲು ಸಾರ್ವಜನಿಕ ಹೊಣೆಗಾರಿಕೆ ವಿಮೆಯನ್ನು ಕಡ್ಡಾಯಗೊಳಿಸಬೇಕೆಂಬ ಬಲವಾದ ಆಗ್ರಹ ಪುತ್ತೂರಿನಿಂದ ಕೇಳಿಬಂದಿದೆ.

*ಸಾರ್ವಜನಿಕರ ಜೀವಕ್ಕಿಲ್ಲ ಭದ್ರತೆ: ಸಂಭ್ರಮಕ್ಕಾಗಿ ಆಯೋಜಿಸುವ ಕಾರ್ಯಕ್ರಮಗಳಲ್ಲಿ ಅವಘಡಗಳು ಸಂಭವಿಸಿದಾಗ ಸಂತ್ರಸ್ತ ಕುಟುಂಬಗಳಿಗೆ ಸರಿಯಾದ ನ್ಯಾಯ ಸಿಗುತ್ತಿಲ್ಲ. ಆಯೋಜಕರು ಅಲಂಕಾರ ಮತ್ತು ಆಡಂಬರಕ್ಕಾಗಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡುತ್ತಾರಾದರೂ, ಭಾಗವಹಿಸುವ ನಾಗರಿಕರ ಸುgಕ್ಷೆಗೆ ಸಣ್ಣ ಮೊತ್ತವನ್ನೂ ಕಾಯ್ದಿರಿಸುವುದಿಲ್ಲ. ಕಾರ್ಯಕ್ರಮದ ಆಯೋಜಕರೇ ವಿಮಾ ಪ್ರೀಮಿಯಂ ಪಾವತಿಸಿ, ಸಾರ್ವಜನಿಕರ ಜೀವ ರಕ್ಷಣೆಯ ಜವಾಬ್ದಾರಿಯನ್ನು ಹೊರಬೇಕಾದ ಅನಿವಾರ್ಯತೆ ಇದೆ. ರಾಷ್ಟ್ರೀಯ ಮಟ್ಟದಲ್ಲಿ ಸಮಗ್ರ ‘ಟಾರ್ಟ್ ಲಾ’ ಕಾಯ್ದೆ ರೂಪಿಸುವುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದ್ದರೂ, ರಾಜ್ಯ ಸರ್ಕಾರ ತನ್ನ ವ್ಯಾಪ್ತಿಯಲ್ಲಿ ಜನಸಾಮಾನ್ಯರ ಜೀವ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

*ಆಸ್ಪತ್ರೆ ಖರ್ಚಿಗೂ ಅಲೆದಾಟ: ಸಾವಿರಾರು ಸಂಖ್ಯೆಯಲ್ಲಿ ಸೇರುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಬಹುತೇಕ ಜನರು ಆರ್ಥಿಕವಾಗಿ ಸಬಲರಾಗಿರುವುದಿಲ್ಲ. ಅವಘಡಗಳು ಸಂಭವಿಸಿದಾಗ ಆಡಳಿತ ವ್ಯವಸ್ಥೆಯು ಕೇವಲ ಸಾಂಪ್ರದಾಯಿಕ ಸಂತಾಪ ಸೂಚಿಸಿ, ಸಣ್ಣ ಮೊತ್ತದ ಪರಿಹಾರ ಘೋಷಿಸಿ ಕೈತೊಳೆದುಕೊಳ್ಳುತ್ತದೆ. ಈ ಪರಿಹಾರ ಪಡೆದುಕೊಳ್ಳಲು ಸಂತ್ರಸ್ತರು ತಿಂಗಳುಗಟ್ಟಲೆ ಆಸ್ಪತ್ರೆ ಮತ್ತು ಸರ್ಕಾರಿ ಕಚೇರಿಗಳಿಗೆ ಅಲೆಯಬೇಕಾದ ಪರಿಸ್ಥಿತಿ ಇದೆ. ಇದನ್ನು ತಪ್ಪಿಸಲು ಕೋಷ್ಟಕ ಆಧಾರಿತ ಮತ್ತು ಕ್ಷಿಪ್ರ ಪರಿಹಾರ ಕ್ರಮಗಳನ್ನು ಜಾರಿಗೊಳಿಸಬೇಕಿದೆ.

ಆಯೋಜಕರ ಹೊಣೆಗಾರಿಕೆ ಹೆಚ್ಚಳ

ಸಮಾವೇಶ ಅಥವಾ ಕಾರ್ಯಕ್ರಮಗಳಿಗೆ ವಿಮೆ ಮಾಡಿಸುವ ಸಂದರ್ಭದಲ್ಲಿ ಸ್ಥಳಾವಕಾಶದ ನಕ್ಷೆ, ನಿರೀಕ್ಷಿತ ಜನ ಸೇರುವ ವಿವರ, ಸ್ಥಳಕ್ಕೆ ಆಗಮಿಸುವ ರಸ್ತೆಗಳು ಮತ್ತು ತುರ್ತು ನಿರ್ಗಮನ ದಾರಿಗಳ ಮಾಹಿತಿಯನ್ನು ಕಡ್ಡಾಯವಾಗಿ ನೀಡಬೇಕಾಗುತ್ತದೆ. ಇದರಿಂದ ಆಯೋಜಕರಲ್ಲಿ ಜವಾಬ್ದಾರಿ ಹೆಚ್ಚಾಗುವುದಲ್ಲದೆ, ಯಾವುದೇ ರೀತಿಯ ಅನಾಹುತ ಸಂಭವಿಸಿದಲ್ಲಿ ತ್ವರಿತವಾಗಿ ಪರಿಹಾರ ಕ್ರಮ ಕೈಗೊಳ್ಳಲು ಸಹಕಾರಿಯಾಗುತ್ತದೆ.

ಅನಿರೀಕ್ಷಿತ ಆಪತ್ತು ಅಪಾಯ

ಕುದ್ಮಾರು ಸಮೀಪದ ಕಿರಿದಾದ ಪ್ರದೇಶದಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚಿನ ಜನರು ಸೇರಿದ ಕಾರಣ ಹಲವರ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಪುತ್ತೂರಿನಲ್ಲಿ ನಡೆದ ಜನಮನ ಕಾರ್ಯಕ್ರಮದ ವೇಳೆ ಅಕಾಲಿಕ ಮಳೆಯಿಂದಾಗಿ ಉಂಟಾದ ಕೆಸರಿನಲ್ಲಿ ಜನರು ನಡೆದಾಡಲಾಗದೆ, ನೂಕುನುಗ್ಗಲು ಉಂಟಾಗಿ ಕೆಲವರಿಗೆ ಉಸಿರಾಟದ ತೊಂದರೆ ಎದುರಾಗಿತ್ತು. ಮಹಾಲಿಂಗೇಶ್ವರ ದೇವಳ ಜಾತ್ರೋತ್ಸವದ ವೇಳೆ ಪಟಾಕಿ ಅವಘಡ ಸಂಭವಿಸಿ ಹಲವರು ಗಾಯಗೊಂಡಿದ್ದರು. ಇಂತಹ ಸಾಲು ಸಾಲು ಘಟನೆಗಳು ಸಾರ್ವಜನಿಕ ಸಮಾರಂಭಗಳ ಸುರಕ್ಷತೆಯ ಮೇಲಿನ ಪ್ರಶ್ನೆಗಳನ್ನು ಎತ್ತಿವೆ.

ಸಭೆ ಸಮಾರಂಭದಲ್ಲಿ ನಡೆಯುವ ಅವಘಡಗಳಲ್ಲಿ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸಲು ವಿಫಲವಾಗಿದೆ. ಇದಕ್ಕೆ ತಾರ್ಕಿಕ ಹಾಗೂ ತುರ್ತು ಪರಿಹಾರ ಸಿಗಬೇಕಾಗಿದೆ. ಪುತ್ತೂರಿನಲ್ಲಿ ನಡೆಯುವ ದೊಡ್ಡಮಟ್ಟದ ಕಾರ್ಯಕ್ರಮಗಳಿಗೆ ಸಾರ್ವಜನಿಕ ಹೊಣೆಗಾರಿಕೆ ವಿಮೆಯನ್ನು ಮಾಡುವ ಮೂಲಕ ಎಲ್ಲ ಕಡೆಗೆ ಮಾದರಿಯಾಗಬೇಕೆಂಬ ನಿಟ್ಟಿನಲ್ಲಿ ಶಾಸಕರಿಗೆ ಮನವಿಯನ್ನು ಸಲ್ಲಿಸಲಾಗಿದೆ.
ದಿನೇಶ್ ಕೆ.ಭಟ್, ಸಾಮಾಜಿಕ ಹೋರಾಟಗಾರರು
ದೊಡ್ಡಮಟ್ಟದಲ್ಲಿ ಜನ ಸೇರುವ ಕಾರ್ಯಕ್ರಮದಲ್ಲಿ ಎಲ್ಲರ ಹಿತಕ್ಕಾಗಿ ವಿಮೆ ಮಾಡಿಸುವ ಯೋಜನೆ ಉತ್ತಮ ವಿಚಾರವಾಗಿದೆ. ಇದರ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ವಿಮೆ ಕಂಪನಿಗಳಲ್ಲಿ ಈ ರೀತಿಯ ಸವಲತ್ತುಗಳು ಇರುವ ಬಗ್ಗೆ ಮಾಹಿತಿ ಪಡೆದು, ಪ್ರಸ್ತಾವನೆಯನ್ನು ಪಡೆದುಕೊಂಡು ಪರಿಶೀಲನೆ ನಡೆಸಲಾಗುವುದು.
ಅಶೋಕ್ ಕುಮಾರ್ ರೈ, ಶಾಸಕ