ನಾಳೆ ಹೊರಗುತ್ತಿಗೆ ಸಿಬ್ಬಂದಿಯಿಂದ ಪ್ರತಿಭಟನೆ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಬಂಟ್ವಾಳ ಪುರಸಭೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ 2 ತಿಂಗಳಿನಿಂದ ವೇತನ ಪಾವತಿಯಾಗದೆ ಇದ್ದು, ಇದೀಗ ವೇತನ ನೀಡುವುದಕ್ಕೆ ಆಗ್ರಹಿಸಿ ಜ.7ರಂದು ಹೊರಗುತ್ತಿಗೆ ಸಿಬ್ಬಂದಿ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಹೊರಗುತ್ತಿಗೆ ನೇಮಕ ಹಾಗೂ ವೇತನದ ಟೆಂಡರ್ ಪ್ರಕ್ರಿಯೆಯೇ ನಡೆದಿಲ್ಲ ಎಂಬ ಕಾರಣಕ್ಕೆ ಮುಖ್ಯಾಧಿಕಾರಿಗಳು ವೇತನ ಪಾವತಿಗೆ ಅನುಮತಿ ನೀಡಿಲ್ಲ ಎನ್ನಲಾಗಿದೆ.
ಬಂಟ್ವಾಳ ಪುರಸಭೆಯ ಕಚೇರಿ ಹಾಗೂ ಕುಡಿಯುವ ನೀರಿನ ಪೂರೈಕೆ ಹಿನ್ನೆಲೆಯಲ್ಲಿ 58 ಮಂದಿ ಹೊರಗುತ್ತಿಗೆಯಲ್ಲಿ ಕೆಲಸ ಮಾಡುತ್ತಿದ್ದು, ಪಂಪ್ ಆಪರೇಟರ್, ದ್ವಿತೀಯ ದರ್ಜೆ ಸಹಾಯಕರು, ಬಿಲ್ ಕಲೆಕ್ಟರ್, ಕಂಪ್ಯೂಟರ್ ಆಪರೇಟರ್, ವಾಲ್ವ್ ಮ್ಯಾನ್, ಗಾರ್ಡನರ್, ಅಕೌಂಟೆಂಟ್ ಮೊದಲಾದ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪುರಸಭೆಯಲ್ಲಿ ಕೆಲವೆ ಮಂದಿ ಕಾಯಂ ಸಿಬ್ಬಂದಿ ಇರುವುದರಿಂದ ಬಹುತೇಕ ಹುದ್ದೆಗಳು ಹೊರಗುತ್ತಿಗೆ ಸಿಬ್ಬಂದಿಯಿಂದ ತುಂಬಿವೆ. ಹೀಗಾಗಿ ಹೊರಗುತ್ತಿಗೆ ಸಿಬ್ಬಂದಿ ಇಲ್ಲದಿದ್ದರೆ ಪುರಸಭೆಯ ಕೆಲಸವೇ ನಿಂತು ಹೋಗುವ ಸಾಧ್ಯತೆ ಇದೆ.
ಹೊರಗುತ್ತಿಗೆ ಸಿಬ್ಬಂದಿಗೆ ನವೆಂಬರ್ ಹಾಗೂ ಡಿಸೆಂಬರ್ ತಿಂಗಳ ವೇತನ ಪಾವತಿ ಆಗದೆ ಅವರ ಜೀವನ ನಿರ್ವಹಣೆ, ಸಾಲದ ಕಂತು ಪಾವತಿ ಮೊದಲಾದ ಅಗತ್ಯಗಳನ್ನು ಪೂರೈಸಲಾಗದೆ ಕಂಗಾಲಾಗಿದ್ದಾರೆ. ಅವರ ನೇಮಕಾತಿ ಸರಿ ಇಲ್ಲದಿದ್ದರೆ ಪುರಸಭೆ ಇಷ್ಟು ಸಮಯ ದುಡಿಸಿರುವುದು ಅಪರಾಧವಾಗಿದ್ದು, ಅದಕ್ಕೆ ಆಡಳಿತ ಮಂಡಳಿ, ಅಧಿಕಾರಿಗಳೇ ನೇರ ಹೊಣೆ. ಹೀಗಾಗಿ ವೇತನಕ್ಕೆ ಆಗ್ರಹಿಸಿ ಜ.7ರಂದು ಬೆಳಗ್ಗೆ 10ಕ್ಕೆ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆಗೆ ಮುಂದಾಗಿದ್ದಾರೆ.

ಆಡಿಟ್ ವರದಿಗಳನ್ನು ಪರಿಶೀಲಿಸಿದ ಸಂದರ್ಭ ಹೊರಗುತ್ತಿಗೆ ಸಿಬ್ಬಂದಿಯ ನೇಮಕ, ವೇತನ ಪಾವತಿಯಲ್ಲಿ ಲೋಪಗಳು ಕಂಡುಬಂದಿದ್ದು, ಹೀಗಾಗಿ ವೇತನ ನೀಡಿಲ್ಲ. ಅದಕ್ಕೆ ಸಂಬಂಧಿಸಿ ಮೇಲಧಿಕಾರಿಗಳ ಗಮನಕ್ಕೆ ತಂದು ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತಿದೆ. 2029ರಲ್ಲಿ ಟೆಂಡರ್ ಕರೆಯದೆ ನೇಮಕಾತಿ ಮಾಡಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net