ಚಂದ್ರಗಿರಿ ಸೇತುವೆಗೆ ರಕ್ಷಣಾ ಬೇಲಿ

ಹೆಚ್ಚುತ್ತಿರುವ ಆತ್ಮಹತ್ಯೆ ತಡೆಗೆ ಕಾಸರಗೋಡು ನಗರಸಭೆ ಯೋಜನೆ
 ಚಂದ್ರಗಿರಿ ಸೇತುವೆಗೆ ತಡೆಬೇಲಿ ನಿರ್ಮಾಣ ಮಾಡುತ್ತಿರುವುದು.
ಚಂದ್ರಗಿರಿ ಸೇತುವೆಗೆ ತಡೆಬೇಲಿ ನಿರ್ಮಾಣ ಮಾಡುತ್ತಿರುವುದು.
Published on: 

ಪುರುಷೋತ್ತಮ ಪೆರ್ಲ

ಚಂದ್ರಗಿರಿ ಸೇತುವೆಯ ಎರಡೂ ಪಾರ್ಶ್ವದಲ್ಲಿ ಸುಸಜ್ಜಿತ ರಕ್ಷಣಾ ತಡೆಗೋಡೆ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಕಾಸರಗೋಡಿನಿಂದ ಕಾಞಂಗಾಡಿಗೆ ಸಂಚರಿಸುವ ಕೆಎಸ್‌ಟಿಪಿ ರಸ್ತೆಗೆ ಅಡ್ಡ ನಿರ್ಮಿಸಲಾಗಿರುವ ಚಂದ್ರಗಿರಿ ಸೇತುವೆಯಿಂದ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಸಂಖ್ಯೆ ಹೆಚ್ಚುತ್ತಿರುವುದನ್ನು ಮನಗಂಡು ಕಾಸರಗೋಡು ನಗರಸಭೆ ರಕ್ಷಣಾ ತಡೆಗೋಡೆ ನಿರ್ಮಾಣಕ್ಕೆ ಮುಂದಾಗಿದೆ.

ಸುಸಜ್ಜಿತ ಕಬ್ಬಿಣದ ರಾಡ್‌ಗಳನ್ನು ಅಳವಡಿಸಿ, 8 ಲಕ್ಷ ರೂ. ವೆಚ್ಚದಲ್ಲಿ ಕಬ್ಬಿಣದ ತಡೆಬೇಲಿ ನಿರ್ಮಿಸಲಾಗುತ್ತಿದೆ. ತಡೆಗೋಡೆ ಇಲ್ಲದ ಈ ಸೇತುವೆಯಿಂದ ಹೊಳೆಗೆ ಹಾರಿ ಹಲವು ಮಂದಿ ಆತ್ಮಹತ್ಯೆಗೈದ ಪ್ರಕರಣಗಳು ನಡೆದಿವೆ. ನಗರಸಭೆ ಈ ಹಿಂದಿನ ಆಡಳಿತಾವಧಿಯಲ್ಲಿ ಯೋಜನೆ ಆರಂಭಿಸಿದ್ದರೂ, ಆಡಳಿತಾವಧಿ ಕೊನೆಗೊಂಡ ಹಿನ್ನೆಲೆಯಲ್ಲಿ ಕಾಮಗಾರಿ ವಿಳಂಬವಾಗಿತ್ತು. ಇದೀಗ ಹೊಸ ಆಡಳಿತ ಸಮಿತಿ ಯೋಜನೆ ಮುಂದುವರಿಸಿದೆ. ಒಂದು ಪಾರ್ಶ್ವದಲ್ಲಿ ತಡೆಬೇಲಿ ಕೆಲಸ ಆರಂಭಿಸಲಾಗಿದ್ದು ಅಗತ್ಯ ಅನುದಾನ ಬಿಡುಗಡೆ ಮಾಡಿದ ನಂತರ ಇನ್ನೊಂದು ಬದಿಯಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.

ತ್ಯಾಜ್ಯ ಎಸೆತಕ್ಕೂ ತಡೆ: ಕಳೆದ ಮೂರು ವರ್ಷಗಳಲ್ಲಿ ಚಂದ್ರಗಿರಿ ಸೇತುವೆಯಿಂದ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವ ಸಂಖ್ಯೆ ಹೆಚ್ಚಾಗುತ್ತಿರುವುದಲ್ಲದೆ, ರಾತ್ರಿ ವೇಳೆ ವಾಹನಗಳಲ್ಲಿ ಬರುವ ಜನರು ಅನಧಿಕೃತ ಕಸಾಯಿಖಾನೆಗಳ ತ್ಯಾಜ್ಯ ಹಾಗೂ ಇತರ ತ್ಯಾಜ್ಯಗಳನ್ನು ನೀರಿಗೆ ಎಸೆಯುತ್ತಿದ್ದರು. ತಡೆಬೇಲೆ ನಿರ್ಮಾಣದಿಂದ ಮುಂದೆ ಇಂಥ ಕೃತ್ಯಗಳಿಗೆ ಕಡಿವಾಣ ಬೀಳಲಿದೆ.

ಸೇತುವೆ ಒಳಗೊಂಡ ಪ್ರದೇಶ ಕಾಸರಗೋಡು ನಗರಸಭಾ ವ್ಯಾಪ್ತಿಯಲ್ಲಿದ್ದರೆ, ಮುಂದಿನ ಭಾಗ ಚೆಮ್ನಾಡ್ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರುತ್ತದೆ. ಚಂದ್ರಗಿರಿ ಸೇತುವೆಯ ಎರಡೂ ಪಾರ್ಶ್ವದಲ್ಲಿ ಸುಸಜ್ಜಿತ ತಡೆಬೇಲಿ ನಿರ್ಮಾಣ ಮಾಡುವಂತೆ ಸ್ಥಳೀಯರು ಮತ್ತು ಸ್ವಯಂಸೇವಾ ಸಂಸ್ಥೆಗಳು ನಗರಸಭೆಗೆ ಮನವಿ ಸಲ್ಲಿಸುವುದರ ಜತೆಗೆ ನಗರಸಭೆ ಎದುರು ಪ್ರತಿಭಟನೆಯನ್ನೂ ನಡೆಸಿದ್ದರು.

ಕಾಸರಗೋಡು ನಗರಸಭೆ ಈ ಹಿಂದಿನ ಆಡಳಿತಾವಧಿಯಲ್ಲೇ ಸೇತುವೆ ಯಎರಡೂ ಪಾರ್ಶ್ವದಲ್ಲಿ ತಡೆಬೇಲಿ ನಿರ್ಮಾಣಕ್ಕೆ ಯೋಜನೆ ರೂಪಿಸಿ ಅನುದಾನವನ್ನು ಮಂಜೂರುಗೊಳಿಸಲಾಗಿತ್ತು. ಆದರೆ ಅಂದಿನ ಆಡಳಿತ ಸಮಿತಿಯ ಆಡಳಿತಾವಧಿ ಕೊನೆಗೊಂಡ ಹಿನ್ನೆಲೆ ಯೋಜನೆ ಅರ್ಧಕ್ಕೆ ನಿಂತಿತ್ತು. ಹೊಸ ಆಡಳಿತಾವಧಿಯಲ್ಲಿ ಯೋಜನೆ ಕೈಗೆತ್ತಿಕೊಳ್ಳಲಾಗಿದೆ.
ಕೆ.ಎಂ.ಹನೀಫ್, ಉಪಾಧ್ಯಕ್ಷ ಕಾಸರಗೋಡು ನಗರಸಭೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net