

ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಹೆರಿಗೆ ಬಳಿಕ ವಿಶ್ರಾಂತಿಯಲ್ಲಿದ್ದ ಬಾಣಂತಿಯ ಖಾಸಗಿ ದೃಶ್ಯಗಳನ್ನು ರಹಸ್ಯವಾಗಿ ಚಿತ್ರೀಕರಿಸಿ ವಾಟ್ಸಾಪ್ ಮೂಲಕ ಹಲವರಿಗೆ ಹಂಚಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ನಗರ ಠಾಣೆ ಪೊಲೀಸರು ಕರ್ನಾಟಕ ಮೂಲದ ಸುಲೇಖಾ ರಾಸಿಯಾ(25)ಎಂಬಾಕೆಯನ್ನು ಬಂಧಿಸಿದ್ದಾರೆ.
ಕಾಸರಗೋಡು ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿರುವ 27ರ ಹರೆಯದ ಬಾಣಂತಿ ನೀಡಿದ ದೂರಿನನ್ವಯ ಈ ಬಂಧನ ನಡೆದಿದೆ. ತನ್ನ ಎರಡನೇ ಹೆರಿಗೆ ಸಂದರ್ಭ ಆರೈಕೆಗಾಗಿ ಸುಲೇಖಾ ಮನೆಗೆ ಬಂದಿದ್ದು, ಸೆಪ್ಟೆಂಬರ್ 7ರಿಂದ 20ರ ನಡುವಿನ ಕಾಲಾವಧಿಯಲ್ಲಿ ಆರೈಕೆಯ ನೆಪದಲ್ಲಿ ರಹಸ್ಯ ಕ್ಯಾಮೆರಾ ಬಳಸಿ ಬಾಣಂತಿಯ ಖಾಸಗಿ ದೃಶ್ಯ ಹಾಗೂ ಫೋಟೋಗಳನ್ನು ಸೆರೆಹಿಡಿದು ಹಲವರಿಗೆ ವಾಟ್ಸಾಪ್ ಮೂಲಕ ಕಳುಹಿಸಿಕೊಡಲಾಗಿದೆ. ದೃಶ್ಯಗಳನ್ನು ಪಡೆದವರ ಪೈಕಿ ಆರೋಪಿಯ ಪತಿಯೂ ಒಳಗೊಂಡಿರುವುದಾಗಿ ಮಾಹಿತಿಯಿದೆ.
ಆರೋಪಿ ಮಹಿಳೆಯ ಮೊಬೈಲ್ ಫೋನನ್ನು, ಬಾಣಂತಿ ಆಕಸ್ಮಿಕವಾಗಿ ಪರಿಶೀಲಿಸಿದಾಗ ತನ್ನ ಖಾಸಗಿ ದೃಶ್ಯಗಳನ್ನು ಚಿತ್ರೀಕರಿಸಿ ಹಂಚಿಕೊಂಡಿರುವ ವಿಚಾರ ಬೆಳಕಿಗೆ ಬಂದಿತ್ತು. ಈ ಬಗ್ಗೆ ಕುಟುಂಬಸ್ಥರಿಗೆ ಮಾಹಿತಿ ನೀಡಿ ಪೊಲೀಸರಿಗೆ ದೂರು ನೀಡಲಾಗಿದೆ. ಆರೋಪಿಯು ತನ್ನ ಪತಿಯೊಂದಿಗೆ ಸೇರಿ ಯುವತಿಯನ್ನು ಬ್ಲ್ಯಾಕ್‌ಮೇಲ್ ಮಾಡುವ ಉದ್ದೇಶದಿಂದ ಈ ಕೃತ್ಯ ಎಸಗಿರುವ ಸಾಧ್ಯತೆಯಿದ್ದು, ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪ್ರಕರಣದ ಕುರಿತು ಕಾಸರಗೋಡು ನಗರ ಠಾಣೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ದೃಶ್ಯಗಳ ಹಂಚಿಕೆ ಹಾಗೂ ಪ್ರಕರಣದಲ್ಲಿ ಇತರರ ಪಾತ್ರದ ಬಗ್ಗೆಯೂ ತನಿಖೆ ಮುಂದುವರಿಸಿದ್ದಾರೆ.