

ಕಾಸರಗೋಡು: ಜಿಲ್ಲೆ ಒಳಗೊಂಡಂತೆ ಕೇರಳಾದ್ಯಂತ ಮಾದಕದ್ರವ್ಯ ಎಂಡಿಎಂಎ ಪೂರೈಸುವ ಜಾಲದ ಪ್ರಧಾನ ಆರೋಪಿ ಐವರಿ ಕೋಸ್ಟ್ ಪ್ರಜೆ ಜಿನ್ ಪಿಯರ್ ಸೆ ಅಲಿಯಾಸ್ ಸ್ಯಾಮುವಲ್ ಒಪ್ಪಾನ (32) ಎಂಬಾತನನ್ನು ಉತ್ತರಪ್ರದೇಶ ನೋಯ್ಡದಲ್ಲಿ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಬಂಧಿತರ ಸಂಖ್ಯೆ 9ಕ್ಕೇರಿದೆ.
ಬಂಧಿತರಾಗಿರುವ ಆರೋಪಿಗಳ ಮೊಬೈಲ್ ಫೋನ್ ಪರಿಶೀಲಿಸಿದಾಗ ಸ್ಯಾಮುವಲ್ ಒಪ್ಪಾನ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಈತನ ಮೊಬೈಲ್ ಟ್ರೇಸ್ ಮಾಡಿದ ಕಾಸರಗೋಡು ವಿಶೇಷ ಪೊಲೀಸರ ತಂಡ ಉತ್ತರ ಪ್ರದೇಶದ ನೋಯ್ಡಕ್ಕೆ ತೆರಳಿ ಗುಪ್ತಸ್ಥಳವೊಂದರಲ್ಲಿ ಎಂಡಿಎಂಎ ತಯಾರಿಸುವ ಕೇಂದ್ರದಲ್ಲಿ ಆರೋಪಿಯನ್ನು ಬಂಧಿಸಿತು. ಬಂಧಿತನಿಂದ 12 ಎಟಿಎಂ ಕಾರ್ಡ್‌ಗಳು, ಐದು ಮೊಬೈಲ್ ಫೋನ್ ಹಾಗೂ 2.94 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ನಿತಿನ್‌ರಾಜ್ ಮಾರ್ಗದರ್ಶದಲ್ಲಿ ಹೊಸದುರ್ಗ ಡಿವೈಎಸ್ಪಿ ಎಂ.ವಿ.ಅನಿಲ್ ಕುಮಾರ್ ನೇತೃತ್ವದ ವಿಶೇಷ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದೆ. ಆ.9ರಂದು ಚಂದೇರ ಪೊಲೀಸರು ಕಾಲಿಕಡವಿನಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದಾಗ ಕಾರೊಂದರಲ್ಲಿ 139.29 ಗ್ರಾಂ ಎಂಡಿಎಂಎ ಪತ್ತೆಯಾಗಿತ್ತು.
ಕಾಸರಗೋಡು: ಪೋಕ್ಸೋ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿದ್ದ ಅಪರಾಧಿಗೆ, ಮತ್ತೊಂದು ಪೋಕ್ಸೋ ಪ್ರಕರಣದಲ್ಲಿ ನ್ಯಾಯಾಲಯ 46 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 62 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಹೊಸದುರ್ಗ ಪೂಂಜಾವಿ ನಿವಾಸಿ ಪಿ.ಎ.ಸಲೀಂ(37) ಎಂಬಾತನಿಗೆ ಹೊಸದುರ್ಗ ಕ್ಷಿಪ್ರ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಪಿ.ಎಂ.ಸುರೇಶ್ ವಿವಿಧ ಸೆಕ್ಷನ್‌ಗಳಲ್ಲಿ ಶಿಕ್ಷೆ ವಿಧಿಸಿದ್ದಾರೆ. ದಂಡ ಪಾವತಿಸದಿದ್ದರೆ ಒಂದು ವರ್ಷ ಎರಡು ತಿಂಗಳ ಹೆಚ್ಚಿನ ಜೈಲು ಶಿಕ್ಷೆ ಅನುಭವಿಸುವಂತೆ ತೀರ್ಪಿನಲ್ಲಿ ತಿಳಿಸಲಾಗಿದೆ.
ಮೂಲತಃ ಕೊಡಗು ನಾಪೋಕ್ಲು ನಿವಾಸಿಯಾಗಿರುವ ಸಲೀಂ 2022 ಜೂನ್ 20ರಂದು ವೆಳ್ಳರಿಕುಂಡ್ ಪೊಲೀಸ್ ಠಾಣೆ ವ್ಯಾಪ್ತಿಯ 14ರ ಹರೆಯದ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲಿ ಬೈಕ್‌ನಲ್ಲಿ ಅಡೂರು ಆಸುಪಾಸಿನ ಕಾಡಿಗೆ ಕರೆದೊಯ್ದು ಅನೇಕ ಬಾರಿ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಮೇಲ್ಪರಂಬ ಠಾಣೆ ಪೊಲೀಸರು ಪೋಕ್ಸೋ ೇಸು ದಾಖಲಿಸಿಕೊಂಡಿದ್ದರು. ಡಿವೈಎಸ್ಪಿ ಉತ್ತಮ್‌ದಾಸ್ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ 46 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದೆ.
2024 ಮೇ 15ರಂದು ಬೆಳಗ್ಗೆ ಮನೆಯಲ್ಲಿ ನಿದ್ರಿಸುತ್ತಿದ್ದ ಹೊಸದುರ್ಗ ಪರಿಸರದ 9ರ ಹರೆಯದ ಬಾಲಕಿಯನ್ನು ಮನೆ ಸಮೀಪದ ತೋಟವೊಂದಕ್ಕೆ ಎತ್ತಿಕೊಂಡು ಹೋಗಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲೂ ಸಲೀಂ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದ್ದು ಕಣ್ಣೂರಿನ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ.
ಕಾಸರಗೋಡು: ಸೀಮೆಎಣ್ಣೆ ಹೊಯ್ದು ಬೆಂಕಿ ಹಚ್ಚಿಕೊಂಡು ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಾಪಾರಿ, ಬೋವಿಕಾನ ಮುಂಡಕೈಯ ನಿವಾಸಿ ಬಾಲಕೃಷ್ಣನ್(57) ಮೃತಪಟ್ಟಿದ್ದಾರೆ. ಭಾನುವಾರ ಮನೆಯಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಗಂಭೀರ ಸುಟ್ಟಗಾಯಗಳಾಗಿದ್ದ ಅವರನ್ನು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ರಾತ್ರಿ ಮೃತಪಟ್ಟಿದ್ದಾರೆ. ಬೋವಿಕ್ಕಾನ ಸಮೀಪದ ಮುಂಡಕೈ ಮಳಿಕ್ಕಲ್‌ನಲ್ಲಿ ದಿನಸಿ ಅಂಗಡಿ ನಡೆಸುತ್ತಿದ್ದರು.