ಪ್ರಾಯೋಗಿಕ ಜ್ಞಾನ, ಸಂಶೋಧನಾ ಮನೋಭಾವ ಅವಶ್ಯ

ರಸಾಯನಶಾಸ್ತ್ರ ರಾಷ್ಟ್ರೀಯ ಸಮ್ಮೇಳನ
ಪ್ರಾಯೋಗಿಕ ಜ್ಞಾನ, ಸಂಶೋಧನಾ ಮನೋಭಾವ ಅವಶ್ಯ
Published on: 

ಬೆಳ್ತಂಗಡಿ: ಭವಿಷ್ಯದಲ್ಲಿ ತಂತ್ರಜ್ಞಾನವು ಅತ್ಯಂತ ವೇಗವಾಗಿ ಬೆಳವಣಿಗೆ ಹೊಂದಲಿದ್ದು, ವಿದ್ಯಾರ್ಥಿಗಳು ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ತಮ್ಮ ಜ್ಞಾನ ಮತ್ತು ಕೌಶಲ ಅಭಿವೃದ್ಧಿಪಡಿಸಿಕೊಳ್ಳಬೇಕು. ಸೈದ್ಧಾಂತಿಕ ಜ್ಞಾನಕ್ಕೆ ಸೀಮಿತವಾಗದೆ ಪ್ರಾಯೋಗಿಕ ಅನುಭವ ಹಾಗೂ ಸಂಶೋಧನಾ ಮನೋಭಾವ ಬೆಳೆಸಿಕೊಳ್ಳುವುದು ಅತ್ಯಗತ್ಯ ಎಂದು ಮೈಸೂರಿನ ಸಿಎಸ್‌ಐಆರ್ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ ಹಿರಿಯ ವಿಜ್ಞಾನಿ ಡಾ.ಸುಹಾಸ್ ಆರ್. ಹೇಳಿದರು.

ಎಸ್‌ಡಿಎಂ ಕಾಲೇಜು(ಸ್ವಾಯತ್ತ) ರಸಾಯನಶಾಸ್ತ್ರ ವಿಭಾಗದ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಪ್ರಾಂಶುಪಾಲ ಪ್ರೊ.ವಿಶ್ವನಾಥ ಪಿ. ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂತಹ ರಾಷ್ಟ್ರೀಯ ಸಮ್ಮೇಳನಗಳು ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಅಧ್ಯಾಪಕರಿಗೆ ತಮ್ಮ ವಿಚಾರಗಳನ್ನು ಹಂಚಿಕೊಳ್ಳಲು, ಹೊಸ ಸಂಶೋಧನೆಗಳ ಬಗ್ಗೆ ತಿಳಿಯಲು ಹಾಗೂ ಭವಿಷ್ಯದ ಶೈಕ್ಷಣಿಕ ಮತ್ತು ವೃತ್ತಿಪರ ಅವಕಾಶಗಳನ್ನು ಅನ್ವೇಷಿಸಲು ಉತ್ತಮ ವೇದಿಕೆ ಒದಗಿಸುತ್ತವೆ ಎಂದರು.

ಕಾಲೇಜಿನ ಆಡಳಿತ ಕುಲಸಚಿವ ಪ್ರೊ.ಶ್ರೀಧರ್ ಎನ್.ಭಟ್ಟ, ಪರೀಕ್ಷಾಂಗ ಕುಲಸಚಿವ ಗಣೇಶ್ ನಾಯಕ್, ಪಿಜಿ ವಿಭಾಗದ ಡೀನ್ ಡಾ.ಸೌಮ್ಯಾ ಬಿ.ಪಿ. ಮೊದಲಾದವರಿದ್ದರು.

ಸಮ್ಮೆಳನದ ಕೋ-ಕನ್ವೀನರ್ ಡಾ.ಗಾನವಿ ಸ್ವಾಗತಿಸಿದರು. ಸಮ್ಮೇಳನದ ಕನ್ವೀನರ್ ನಂದಾಕುಮಾರಿ ಕೆ.ಪಿ. ವಂದಿಸಿದರು. ಸಹಾಯಕ ಪ್ರಾಧ್ಯಾಪಕಿ ಸಂಗೀತಾ ಬಿ., ವಿದ್ಯಾರ್ಥಿನಿ ಅನ್ವಿತಾ ಸೆರಾವೊ ಕಾರ್ಯಕ್ರಮ ನಿರೂಪಿಸಿದರು. ಕೋ-ಕನ್ವೀನರ್ ದಿವ್ಯಾ ವಂದಿಸಿದರು.

ಅತ್ಯುತ್ತಮ ಪ್ರಬಂಧ ಮಂಡನೆಗೆ ಪ್ರಶಸ್ತಿ

ಅತ್ಯುತ್ತಮ ಪ್ರಬಂಧ ಮಂಡನೆ ಪ್ರಶಸ್ತಿಯನ್ನು ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯದ ಸೃಷ್ಟಿ ಜಿ. ಪಡೆದುಕೊಂಡರು. ವಿದ್ಯಾರ್ಥಿ ವಿಭಾಗದ ಅತ್ಯುತ್ತಮ ಪೋಸ್ಟರ್ ಪ್ರಸ್ತುತಿ ಪ್ರಶಸ್ತಿಯನ್ನು ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯದ ಸಿಪ್ರಾ ನಾಯಕ್, ಸಂಶೋಧನಾ ವಿದ್ಯಾರ್ಥಿ ಹಾಗೂ ಸಿಬ್ಬಂದಿ ವಿಭಾಗದ ಅತ್ಯುತ್ತಮ ಪೋಸ್ಟರ್ ಪ್ರಸ್ತುತಿ ಪ್ರಶಸ್ತಿಯನ್ನು ಮಣಿಪಾಲ ಮಾಹೆಯ ಯಶಸ್ವಿನಿ ರೆಡ್ಡಿ ಗಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net