

ವಿಜಯವಾಣಿ ಸುದ್ದಿಜಾಲ ಗುರುಪುರ
ಎಂಎಸ್‌ಇಜಡ್ ವ್ಯಾಪ್ತಿಯಲ್ಲಿರುವ ಬೃಹತ್ ರಾಸಾಯನಿಕ ಕಂಪನಿಗಳಿಂದ ಸ್ಥಳೀಯ ವಸತಿ ಪ್ರದೇಶದಲ್ಲಿ ಉಂಟಾಗುತ್ತಿರುವ ಶಬ್ದ ಮಾಲಿನ್ಯ, ಹೊಗೆ ಮಾಲಿನ್ಯ ಸಮಸ್ಯೆ ಕುರಿತು ಮಂಗಳವಾರ ಬಜ್ಪೆ ಪ.ಪಂ ಅಧ್ಯಕ್ಷ ಲೋಕೇಶ್ ಪೂಜಾರಿ ಅಧ್ಯಕ್ಷತೆಯಲ್ಲಿ ಕಂಪನಿ ಪ್ರತಿನಿಧಿಗಳು ಮತ್ತು ಸ್ಥಳೀಯ ನಿವಾಸಿಗರ ಸಮಕ್ಷಮದಲ್ಲಿ ಮಹತ್ವದ ಸಭೆ ನಡೆಯಿತು.
ವಿಸ್ತರಣೆಗೊಳ್ಳುತ್ತಿರುವ ಸೆಝ್ ವ್ಯಾಪ್ತಿಯ ಜಿಎಂಪಿಎಲ್ ಮತ್ತಿತರ ರಾಸಾಯನಿಕ ಉತ್ಪಾದನಾ ಘಟಕಗಳಿಂದ ಆಗಾಗ್ಗೆ ಹೊರಸೂಸುವ ಭಾರಿ ಪ್ರಮಾಣದ ಸ್ಫೋಟ ಶಬ್ದದಿಂದ ಒಡ್ಡಿದಕಲ, ಶಾಂತಿಗುಡ್ಡೆ, ಧೂಮಾವತಿಧಾಮ ಪ್ರದೇಶದ ನಿವಾಸಿಗರು ನಿದ್ದೆ ಇಲ್ಲದೆ ರಾತ್ರಿ ಕಳೆಯುವಂತಾಗಿದೆ. ರಾಸಾಯನಿಕ ಸೋರಿಕೆಯಿಂದ ಮಕ್ಕಳು, ವಯೋವೃದ್ಧರ ಸಹಿತ ಎಲ್ಲರೂ ಉಸಿರಾಟದ ಸಮಸ್ಯೆ ಎದುರಿಸುವಂತಾಗಿದೆ ಎಂಬಿತ್ಯಾದಿ ದೂರು ಪಟ್ಟಣ ಪಂಚಾಯಿತಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಕರೆಯಲಾದ ತುರ್ತು ಸಭೆಗೆ ಸೆಝ್ ವ್ಯಾಪ್ತಿಯ ಕಂಪನಿಗಳಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಅಧ್ಯಕ್ಷರು ಬೇಸರ ವ್ಯಕ್ತಪಡಿಸಿದರು.
ಸಭೆಯಲ್ಲಿ ಜಿಎಂಪಿಎಲ್, ಉಲ್ಕಾ ಕಂಪನಿ, ಸೆಝ್ ಪ್ರತಿನಿಧಿಗಳು ಮಾತ್ರ ಹಾಜರಿದ್ದರು. ಸೆಝ್ ವ್ಯಾಪ್ತಿಯಲ್ಲಿ ಹಲವು ರಾಸಾಯನಿಕ ಕಂಪನಿಗಳಿದ್ದು, ಅವೆಲ್ಲ ಕಂಪನಿ ಘಟಕಗಳಿಂದ ರಾಸಾಯನಿಕ ಸೋರಿಕೆ ಭೀತಿ, ಶಬ್ದಮಾಲಿನ್ಯ ತಪ್ಪಿದ್ದಲ್ಲ ಎಂಬ ದೂರುಗಳು ಬಂದಿವೆ ಎಂದು ಜಿಎಂಪಿಎಲ್ ಕಂಪನಿ ಅಧಿಕಾರಿಗಳಿಗೆ ಪಪಂ ಅಧ್ಯಕ್ಷ, ಸ್ಥಾಯಿ ಸಮಿತಿ ಅಧ್ಯಕ್ಷ ರಿತೇಶ್ ಶೆಟ್ಟಿ ಮನವರಿಕೆ ಮಾಡಿದರು.
ಪ.ಪಂನಿಂದ ಇಲಾಖೆಗೆ ಒಡ್ಡಿದಕಲ ನಿವಾಸಿಗರಿಂದ ಬಂದ ದೂರುಗಳ ಪರಿಶೀಲನೆ ನಡೆಸಿದಾಗ ಸೆಝ್ ವ್ಯಾಪ್ತಿಯ ಜಿಎಂಪಿಎಲ್ ಕಂಪನಿ ಘಟಕದಿಂದ ಶಬ್ದಮಾಲಿನ್ಯ, ಗ್ಯಾಸ್ ಸೋರಿಕೆ ದೃಢಪಟ್ಟಿದ್ದು, ಕಂಪನಿ ಮುಚ್ಚಲು ಅರ್ಹವಾಗಿದೆ ಎಂದು ಮೇಲಧಿಕಾರಿಗಳಿಗೆ ವರದಿ ಮಾಡಿದ್ದೇವೆ. ಪರಿಸರಕ್ಕೆ ಸಂಬಂಧಿಸಿದ ಮೇಲಧಿಕಾರಿಗಳು, ‘ನಿಮ್ಮ ಕಂಪನಿ ಮುಚ್ಚಬಾರದೇಕೆ?’ ಎಂದು ಕಂಪನಿಗೆ ಶೋಕಾಸ್ ನೋಟಿಸ್ ರವಾನಿಸಿದ್ದಾರೆ ಎಂದು ಮಂಗಳೂರು ಪರಿಸರ ಉಪಅಧಿಕಾರಿ ಪ್ರಮೀಳಾ ಹೇಳಿದರು.
ಪ್ರಸಕ್ತ ಸಭೆಯಲ್ಲಿ ಸೆಝ್ ವ್ಯಾಪ್ತಿಯ ಎಲ್ಲ ಕಂಪನಿಗಳ ಪ್ರತಿನಿಧಿಗಳು ಬಾರದ ಹಿನ್ನೆಲೆಯಲ್ಲಿ 15 ದಿನದೊಳಗೆ ಮತ್ತೊಂದು ಸಭೆ ಕರೆದು ಚರ್ಚೆ ನಡೆಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು.
ಪ.ಪಂ ಅಧ್ಯಕ್ಷ ಲೋಕೇಶ್ ಪೂಜಾರಿ, ಉಪಾಧ್ಯಕ್ಷೆ ಶರ್ಮಿಳಾ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ರಿತೇಶ್ ಶೆಟ್ಟಿ, ಪ.ಪಂ ಮುಖ್ಯಾಧಿಕಾರಿ ರತ್ನಪ್ರಸಾದ್, ಪರಿಸರ ಅಧಿಕಾರಿ ಪ್ರಮೀಳಾ, ಸೆಝ್ ಪ್ರತಿನಿಧಿ ವಿನಯ್ ಕುಮಾರ್(ಪರಿಸರ ಉಪ-ಪ್ರಬಂಧಕ), ಜಿಎಂಪಿಎಲ್ ಪಿಟಿಎ ಪ್ರಾಜೆಕ್ಟ್ ಜನರಲ್ ಮ್ಯಾನೇಜರ್ ಪುಗಾಜಂತಿ, ಉಲ್ಕಾ ಕಂಪನಿ ಪ್ರತಿನಿಧಿ, ಒಡ್ಡಿದಕಲ ನಿವಾಸಿಗರು ಉಪಸ್ಥಿತರಿದ್ದರು.
ಸೆಝ್ ಪ್ರದೇಶದ ಕೆಳಭಾಗದಲ್ಲಿ ಜಿಎಂಪಿಎಲ್ ಕಂಪನಿ ಇದ್ದರೆ ಮೇಲ್ಭಾಗದಲ್ಲಿ ಹಲವು ಮನೆಗಳಿವೆ. ಕಂಪನಿಯಿಂದ ನಿರಂತರ ಶಬ್ದಮಾಲಿನ್ಯ ಉಂಟಾಗುತ್ತಿದ್ದರೆ, 15 ದಿನಗಳ ಹಿಂದೆ ಇಲ್ಲಿ ರಾಸಾಯನಿಕ ಸೋರಿಕೆಯಾಗಿ ಹಲವರು ಅಸ್ವಸ್ಥಗೊಂಡಿದ್ದರು ಎಂದು ಸಭೆಯಲ್ಲಿ ಒಡ್ಡಿದಕಲ ನಿವಾಸಿಗರಾದ ರತೇಶ್, ವೇದಾವತಿ ದೂರಿದರು.