

ವಿಜಯವಾಣಿ ಸುದ್ದಿಜಾಲ ಬದಿಯಡ್ಕ
ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ಆವರಣಗಳು ಜಪ್ತಿ ಮಾಡಿದ ವಾಹನಗಳ ರಾಶಿಯಿಂದ ತುಂಬಿ ತುಳುಕುತ್ತಿವೆ. ಸರ್ಕಾರವು ಕಾಲಕಾಲಕ್ಕೆ ಇ-ಹರಾಜು ಪ್ರಕ್ರಿಯೆ ನಡೆಸುತ್ತಿದ್ದರೂ, ಠಾಣೆಗಳಲ್ಲಿ ಸಂಗ್ರಹವಾಗಿರುವ ವಾಹನಗಳ ಸಂಖ್ಯೆಯನ್ನು ಗಣನೀಯವಾಗಿ ಕಡಿಮೆ ಮಾಡಲು ಸಾಧ್ಯವಾಗುತ್ತಿಲ್ಲ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಈ ವಾಹನಗಳ ರಾಶಿಯಿಂದಾಗಿ ಪೋಲಿಸ್ ಠಾಣೆಗಳ ಆವರಣ ಗುಜರಿ ಅಂಗಡಿಯಂತೆ ಪರಿವರ್ತನೆಯಾಗುತ್ತಿದೆ.
ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ವಶಪಡಿಸಿಕೊಂಡ ದ್ವಿಚಕ್ರ ವಾಹನಗಳು, ಆಟೋರಿಕ್ಷಾಗಳು, ಕಾರುಗಳು ಹಾಗೂ ಪಿಕಪ್ ಸೇರಿದಂತೆ ನೂರಾರು ವಾಹನಗಳನ್ನು ಠಾಣೆಯ ಅಂಗಳದಲ್ಲೇ ನಿಲ್ಲಿಸಲಾಗಿದೆ. ಆದರೆ, ಇವುಗಳನ್ನು ಸುರಕ್ಷಿತವಾಗಿಡಲು ಸೂಕ್ತ ಸ್ಥಳಾವಕಾಶವಿಲ್ಲದೆ ಪೊಲೀಸರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ.
ಇ-ಹರಾಜು ನಡೆದರೂ ಬಗೆಹರಿಯದ ಸಮಸ್ಯೆ: 2026ರ ಸೆಪ್ಟೆಂಬರ್ನಲ್ಲಿ ರಾಜ್ಯ ಗೃಹ ಇಲಾಖೆಯ ‘ಸ್ಪೇಸ್’ ಯೋಜನೆಯಡಿ, ಮಾಲೀಕರಿಲ್ಲದ 484 ವಾಹನಗಳನ್ನು ಇ-ಹರಾಜಿಗೆ ಇಡಲಾಗಿತ್ತು. 2011ರ ಕೇರಳ ಪೊಲೀಸ್ ಕಾಯ್ದೆಯ ಸೆಕ್ಷನ್ 56ರ ಅನ್ವಯ ನಡೆದ ಹರಾಜು ಪ್ರಕ್ರಿಯಯಲ್ಲಿ ಕಾಸರಗೋಡು ಜಿಲ್ಲೆಯ ಕುಂಬಳೆ, ಕಾಸರಗೋಡು, ಬದಿಯಡ್ಕ, ವಿದ್ಯಾನಗರ, ಮಂಜೇಶ್ವರ, ಮೇಲ್ಪರಂಬ, ಬೇಕಲ, ಹೊಸದುರ್ಗ, ನೀಲೇಶ್ವರ ಮತ್ತು ಚಂದೇರ ಸೇರಿದಂತೆ ಹತ್ತು ಪೊಲೀಸ್ ಠಾಣೆಗಳ ವ್ಯಾಪ್ತಿಯ 454 ವಾಹನಗಳನ್ನು ಹರಾಜಿಗೆ ಇಡಲಾಗಿತ್ತು. ಆದರೆ ಹರಾಜು ಪ್ರಕ್ರಿಯೆ ನಡೆದರೂ ವರ್ಷಗಳಿಂದ ಠಾಣೆಯಲ್ಲಿ ಸಂಗ್ರಹವಾಗಿರುವ ವಾಹನಗಳ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ. ಪ್ರತಿದಿನ ಅನೇಕ ವಾಹನಗಳು ಜಪ್ತಿಯಾಗುತ್ತಿರುವುದರಿಂದ ಹಳೆಯ ವಾಹನಗಳನ್ನು ತೆರವುಗೊಳಿಸಿದರೂ ಮತ್ತೆ ಸ್ಥಳದ ಅಭಾವ ಎದುರಾಗುತ್ತಿದೆ.
ಪ್ರಕರಣಗಳ ಇತ್ಯರ್ಥ ವಿಳಂಬ ಕಾರಣ: ಮರಳು ಅಕ್ರಮ ಸಾಗಣೆ, ಮದ್ಯ ಹಾಗೂ ಮಾದಕ ವಸ್ತುಗಳ ಕಳ್ಳಸಾಗಣೆ, ಸಂಚಾರ ನಿಯಮ ಉಲ್ಲಂಘನೆ ಮತ್ತು ಗಂಭೀರ ರಸ್ತೆ ಅಪಘಾತಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಪೊಲೀಸರು ವಾಹನಗಳನ್ನು ವಶಪಡಿಸಿಕೊಳ್ಳುತ್ತಾರೆ. ಸಂಬಂಧಪಟ್ಟ ಪ್ರಕರಣಗಳು ನ್ಯಾಯಾಲಯದಲ್ಲಿ ಇತ್ಯರ್ಥವಾಗುವವರೆಗೆ ಈ ವಾಹನಗಳನ್ನು ಮಾಲೀಕರಿಗೆ ಹಿಂತಿರುಗಿಸಲು ಸಾಧ್ಯವಾಗುವುದಿಲ್ಲ. ನ್ಯಾಯಾಲಯಗಳಲ್ಲಿ ವಿಚಾರಣೆ ಮತ್ತು ತೀರ್ಪು ವಿಳಂಬವಾಗುವುದೇ ವಾಹನಗಳ ಸಂಖ್ಯೆ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ.
ವರ್ಷಗಟ್ಟಲೆ ಠಾಣೆಯ ಆವರಣದಲ್ಲಿ ಬಿಸಿಲು, ಮಳೆ ಮತ್ತು ತೇವಾಂಶಕ್ಕೆ ಸಿಲುಕುವ ವಾಹನಗಳು ಸಂಪೂರ್ಣವಾಗಿ ಹಾಳಾಗುತ್ತಿವೆ. ಹಲವು ವಾಹನಗಳು ತುಕ್ಕು ಹಿಡಿದು ಅನ್ಫಿಟ್ ಸ್ಥಿತಿ ತಲುಪುತ್ತಿದ್ದು ಇವುಗಳನ್ನು ಗುಜರಿಗೆ ಮಾರಾಟ ಮಾಡುವುದೂ ಕಷ್ಟಸಾಧ್ಯವಾಗಿದೆ.
ಪ್ರಕರಣಗಳು ಇತ್ಯರ್ಥವಾದ ಬಳಿಕವೂ ಕೆಲವು ಮಾಲೀಕರು ತಮ್ಮ ವಾಹನಗಳನ್ನು ಬಿಡಿಸಿಕೊಂಡು ಹೋಗಲು ಆಸಕ್ತಿ ತೋರುತ್ತಿಲ್ಲ. ವಾಹನವನ್ನು ಬಿಡಿಸಿಕೊಳ್ಳಲು ಪಾವತಿಸಬೇಕಾದ ದಂಡ ಮತ್ತು ಇತರ ವೆಚ್ಚಗಳು ವಾಹನದ ಹಾಲಿ ಮೌಲ್ಯಕ್ಕಿಂತ ಹೆಚ್ಚಿರುವುದೇ ಇದಕ್ಕೆ ಪ್ರಮುಖ ಕಾರಣ. ಇದರಿಂದಾಗಿ ವಾಹನಗಳು ಠಾಣೆಯ ಆವರಣದಲ್ಲೇ ನಿರುಪಯುಕ್ತವಾಗಿ ಉಳಿಯುತ್ತಿವೆ. ಕೆಲವು ಸಂದರ್ಭಗಳಲ್ಲಿ ಇಂತಹ ವಾಹನಗಳನ್ನು ಜೆಸಿಬಿ ಯಂತ್ರಗಳ ಸಹಾಯದಿಂದ ಒಂದೆಡೆಗೆ ತೆರವುಗೊಳಿಸಿ ರಾಶಿ ಹಾಕಲಾಗುತ್ತದೆ. ಹೀಗೆ ರಾಶಿ ಹಾಕಲಾದ ವಾಹನಗಳ ನಡುವೆ ಹಾವು, ಚೇಳುಗಳು ಸೇರಿದಂತೆ ವಿವಿಧ ವಿಷಜಂತುಗಳು ಆಶ್ರಯ ಪಡೆಯುತ್ತಿದ್ದು, ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ಅಪಾಯದ ಭೀತಿ ಎದುರಾಗಿದೆ.
ಪೋಲಿಸ್ ಠಾಣೆಗಳ ಆವರಣದಲ್ಲಿ ವರ್ಷಗಳಿಂದ ಬಿದ್ದಿರುವ ವಾಹನಗಳನ್ನು ತೆರವುಗೊಳಿಸಲು ಸರ್ಕಾರ ಸೂಕ್ತ ಹಾಗೂ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ. ನ್ಯಾಯಾಲಯದ ಪ್ರಕ್ರಿಯೆಗಳನ್ನು ತ್ವರಿತಗೊಳಿಸುವುದು, ಮಾಲೀಕರಿಲ್ಲದ ವಾಹನಗಳ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವುದು, ನಿಯಮಿತವಾಗಿ ಹರಾಜು ಪ್ರಕ್ರಿಯೆ ನಡೆಸುವುದು, ಜಪ್ತಿಯಾದ ವಾಹನಗಳನ್ನು ಇಡಲು ಪರ್ಯಾಯ ಸ್ಥಳ ಗುರುತಿಸುವುದು ಅತ್ಯಗತ್ಯವಾಗಿದೆ. ಇಲ್ಲದಿದ್ದರೆ ಪೊಲೀಸ್ ಠಾಣೆಗಳ ಆವರಣ ವಾಹನಗಳ ರಾಶಿಯಿಂದ ಮುಕ್ತವಾಗುವ ಬದಲು, ಹೊಸದಾಗಿ ಜಪ್ತಿಯಾಗುವ ವಾಹನಗಳಿಂದ ಮತ್ತಷ್ಟು ಕಿರಿದಾಗುವ ಆತಂಕ ಎದುರಾಗಿದೆ.