ಪೊಲೀಸರಿಂದ ಪ್ಯಾನಿಕ್ ಬಟನ್ ತಪಾಸಣೆ, ಕಾರ್ಯನಿರ್ವಹಿಸದ ಸಾಧನ ಪತ್ತೆ

ಪೊಲೀಸ್ ಆಯುಕ್ತರ ಕಚೇರಿ ಆವರಣದಲ್ಲಿ ಪ್ಯಾನಿಕ್ ಬಟನ್ ಪರಿಶೀಲಿಸಿದರು.
ಪೊಲೀಸ್ ಆಯುಕ್ತರ ಕಚೇರಿ ಆವರಣದಲ್ಲಿ ಪ್ಯಾನಿಕ್ ಬಟನ್ ಪರಿಶೀಲಿಸಿದರು.
Published on

ಮಂಗಳೂರು: ಪ್ರಯಾಣಿಕರು ಹಾಗೂ ಚಾಲಕರ ಸುರಕ್ಷತೆಗಾಗಿ ಪ್ರವಾಸಿ ವಾಹನಗಳಲ್ಲಿ ಕಡ್ಡಾಯವಾಗಿ ಅಳವಡಿಸಲಾಗಿರುವ ಪ್ಯಾನಿಕ್ ಬಟನ್ ವ್ಯವಸ್ಥೆ ಕಾರ್ಯಾಚರಿಸದೆ ಇರುವುದು ಗುರುವಾರ ಪೊಲೀಸ್ ಪರಿಶೀಲನೆಯಲ್ಲಿ ಪತ್ತೆಯಾಗಿದೆ.

ರಾಜ್ಯ ಸರ್ಕಾರದ ಆದೇಶದಂತೆ ರಾಜ್ಯದ ಬಹುತೇಕ ಪ್ರವಾಸಿ ವಾಹನಗಳಲ್ಲಿ ಪ್ಯಾನಿಕ್ ಬಟನ್ ಅಳವಡಿಸಲಾಗಿದೆ. ಆದರೆ, ಸಾಧನ ಅಳವಡಿಸಿದ ಒಂದು ವರ್ಷದ ಬಳಿಕ ರೀಚಾರ್ಜ್ ಹಾಗೂ ಟಾಪ್-ಅಪ್ ಹೆಸರಿನಲ್ಲಿ ವಾಹನ ಮಾಲೀಕರು ಮತ್ತು ಚಾಲಕರಿಂದ ನಿಗದಿತ ಶುಲ್ಕಕ್ಕಿಂತ ಹೆಚ್ಚಿನ ಮೊತ್ತವನ್ನು ವಸೂಲಿ ಮಾಡಲಾಗುತ್ತಿದೆ ಎಂದು ಟ್ಯಾಕ್ಸಿಮೆನ್ ಆ್ಯಂಡ್ ಮ್ಯಾಕ್ಸಿಕ್ಯಾಬ್ ಅಸೋಸಿಯೇಶನ್ ಆರೋಪಿಸಿದೆ.
ಈ ಕುರಿತು ಸಂಘದ ಪದಾಧಿಕಾರಿಗಳು ಉಪ ಪೊಲೀಸ್ ಆಯುಕ್ತರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಏಜೆಂಟ್‌ಗಳು ಹಾಗೂ ಕೆಲವು ವಾಹನಗಳನ್ನು ಕರೆಸಿ ಸ್ಥಳದಲ್ಲೇ ಪರಿಶೀಲನೆ ನಡೆಸಲಾಯಿತು. ಪರಿಶೀಲನೆ ವೇಳೆ ಏಜೆಂಟ್‌ಗಳು ಪ್ಯಾನಿಕ್ ಬಟನ್ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಆದರೆ, ಉಪ ಪೊಲೀಸ್ ಆಯುಕ್ತರ ಸಮ್ಮುಖದಲ್ಲಿ ಪ್ಯಾನಿಕ್ ಬಟನ್ ಅನ್ನು ಹಲವು ಬಾರಿ ಒತ್ತಿದರೂ ಪೊಲೀಸ್ ಕಂಟ್ರೋಲ್ ರೂಮ್‌ಗೆ ಯಾವುದೇ ತುರ್ತು ಸಂದೇಶ ತಲುಪಲಿಲ್ಲ. ಅಲ್ಲದೆ, ವಾಹನ ಚಾಲಕರಿಗೂ ಯಾವುದೇ ಪ್ರತಿಕ್ರಿಯೆ ಅಥವಾ ದೃಢೀಕರಣ ಸಂದೇಶ ಬಂದಿರಲಿಲ್ಲ. ಇದರಿಂದ ಸುರಕ್ಷತೆಗಾಗಿ ಅಳವಡಿಸಲಾಗಿರುವ ಸಾಧನವೇ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಆರೋಪಕ್ಕೆ ಬಲ ದೊರೆತಿದೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಉಪ ಪೊಲೀಸ್ ಆಯುಕ್ತರು, ಸಂಬಂಧಪಟ್ಟ ಏಜೆಂಟ್‌ಗಳಿಂದ ಮಾಹಿತಿ ಪಡೆದು, ಈ ಕುರಿತು ಸಾರಿಗೆ ಇಲಾಖೆಗೆ ವರದಿ ಸಲ್ಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಪ್ಯಾನಿಕ್ ಬಟನ್ ವ್ಯವಸ್ಥೆಯಲ್ಲಿ ನಡೆಯುತ್ತಿರುವ ಅವ್ಯವಹಾರವನ್ನು ತನಿಖೆ ನಡೆಸಿ, ವಾಹನ ಮಾಲೀಕರು ಹಾಗೂ ಚಾಲಕರಿಂದ ಅಕ್ರಮವಾಗಿ ವಸೂಲಿ ಮಾಡಿರುವ ಹಣದ ಬಗ್ಗೆ ಸಮಗ್ರ ಪರಿಶೀಲನೆ ನಡೆಸುವಂತೆ ಸಂಘದ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net