ಸುಲಿಗೆ ಪ್ರಕರಣದಲ್ಲಿ ತಲೆ ಮರೆಸಿಕೊಂಡ ಆರೋಪಿ ಬಂಧನ

ಚಂದು ಹಾರಿಸ್
ಚಂದು ಹಾರಿಸ್
Published on
ಮಂಗಳೂರು: ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಕಸಬ ಬೆಂಗ್ರೆ ಬಳಿ ಪ್ರವಾಸಿಗರನ್ನು ಸುಲಿಗೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕಸಬ ಬೆಂಗ್ರೆಯ ಚಂದು ಹಾರಿಸ್ (33) ಬಂಧಿತ ಆರೋಪಿ. ಕೃತ್ಯದಲ್ಲಿ ಭಾಗಿಯಾದ ಇನ್ನಿಬ್ಬರು ಆರೋಪಿಗಳಾದ ಕಸಬ ಬೆಂಗ್ರೆಯ ಮೊಹಮ್ಮದ್ ಸಿನಾನ್ (24) ಹಾಗೂ ಝಹೀರ್ ನಿಸಾರ್ (22) ಎಂಬವರನ್ನು ಕೃತ್ಯ ನಡೆದ ದಿನದಂದೇ ಬಂಧಿಸಲಾಗಿತ್ತು.
* ಪ್ರಕರಣದ ವಿವರ: ಏ.13ರಂದು ಸೋಮವಾರ ಪೇಟೆಯ ಅಜಯ್ ಅವರು ತನ್ನ ಸ್ನೇಹಿತರಾದ ರಮೇಶ್ ಹಾಗೂ ರಫೀಕ್ ಅವರ ಜತೆ ಕಾರಿನಲ್ಲಿ ತಣ್ಣೀರುಬಾವಿ ಬೀಚಿಗೆ ತನ್ನ ಹುಟ್ಟುಹಬ್ಬವನ್ನು ಆಚರಿಸುವ ಬಗ್ಗೆ ನಿರ್ಧರಿಸಿ ಬಂದಿದ್ದರು. ಬೆಳಗಿನ ಜಾವ ಸುಮಾರು 2.30 ಗಂಟೆಯ ಸುಮಾರಿಗೆ ತಣ್ಣೀರುಬಾವಿ ಬೀಚ್ ಸಮೀಪ ಬಂದು ಸ್ವಲ್ಪ ಮುಂದಕ್ಕೆ ದಾರಿ ತಪ್ಪಿ ಕಸಬಾ ಬೆಂಗ್ರೆ ಕಡೆ ಹೋಗಿದ್ದರು. ರಸ್ತೆಯ ಬದಿಯಲ್ಲಿ ಇಬ್ಬರು ಯುವಕರು ನಡೆದುಕೊಂಡು ಹೋಗುತ್ತಿದ್ದವರನ್ನು ಕಂಡು ಅಜಯ್ ಅವರು ಕಾರನ್ನು ನಿಲ್ಲಿಸಿ ಅವರಲ್ಲಿ ವಿಳಾಸ ಕೇಳುವ ಸಲುವಾಗಿ ಅವರನ್ನು ಮಾತನಾಡಿಸಿದ್ದರು. ಆ ಸಮಯ ಅವರುಗಳು ವಿಳಾಸವನ್ನು ತೋರಿಸುವುದಾಗಿ ಹೇಳಿ ಕಾರಿನ ಹಿಂಬದಿಯಲ್ಲಿ ಕುಳಿತು ಕಾರನ್ನು ಚಲಾಯಿಸಲು ಅಜಯ್ ಅವರಿಗೆ ಹೇಳಿ ಸ್ವಲ್ಪ ಮುಂದಕ್ಕೆ ಹೋದ ನಂತರ ಕಾರನ್ನು ನಿಲ್ಲಿಸಿ ಇಬ್ಬರು ಆರೋಪಿಗಳು ತಮ್ಮ ಬಳಿ ಇದ್ದ ಸ್ಕ್ರೂ ಡ್ರೈವರನ್ನು ತೆಗೆದು ಅಜಯ್ ಮತ್ತು ಸ್ನೇಹಿತರಿಗೆ ಚುಚ್ಚುವುದಾಗಿ ಬೆದರಿಸಿ, ಕಾರಿನ ಮುಂಭಾಗದ ಗ್ಲಾಸನ್ನು ಸ್ಕ್ರೂ ಡ್ರೈವರ ಹಿಡಿಯಿಂದ ಗುದ್ದಿ ಹಾನಿ ಮಾಡಿ ಸುಮಾರು 9,000 ರೂ. ಮೌಲ್ಯದ ಟೈಟಾನ್ ವಾಚ್, ಸುಮಾರು 3,000 ರೂ. ಮೌಲ್ಯದ ಪಾಸ್ಟ್ ಟ್ರಾಕ್ ಕಂಪೆನಿಯ ವಾಚ್ ಮತ್ತು 2,000 ರೂ. , ಕ್ಯಾಮಾರಕ್ಕೆ ಅಳವಡಿಸುವ ಸುಮಾರು 8,000 ರೂ. ಮೌಲ್ಯದ ಗಿಂಬಲ್, ಸುಮಾರು 2,000 ರೂ. ಮೌಲ್ಯದ ಪವರ್ ಬ್ಯಾಂಕ್ ಮತ್ತು ಸುಮಾರು 500 ರೂ. ಮೌಲ್ಯದ ರೋಲ್ಡ್ ಗೋಲ್ಡ್ ಬ್ರಾಸ್ಲೈಟ್ ಸೇರಿ ಸುಮಾರು 24,500 ರೂ. ಮೌಲ್ಯದ ಸೊತ್ತುಗಳನ್ನು ಕಿತ್ತುಕೊಂಡಿರುತ್ತಾರೆ. ಹಾಗೂ ಕೃತ್ಯ ನಡೆದ ಸ್ಥಳಕ್ಕೆ ಬೈಕಿನಲ್ಲಿ ಬಂದ ಆರೋಪಿಗಳ ಇನ್ನೊಬ್ಬ ಸ್ನೇಹಿತ ಆರೋಪಿಗಳು ಕಿತ್ತುಕೊಂಡ ವಸ್ತುಗಳನ್ನು ಪಡೆದು ಇಬ್ಬರು ಆರೋಪಿಗಳನ್ನು ಕರೆದುಕೊಂಡು ಹೋಗಿರುತ್ತಾನೆ. ಕಾರಿನ ಗ್ಲಾಸಿಗೆ ಆದ ಹಾನಿಯಿಂದ ಅಂದಾಜು ಮೌಲ್ಯ 8,000 ರೂ. ನಷ್ಟ ಆಗಿರುತ್ತದೆ. ದೂರುದಾರರಿಂದ ಕಿತ್ತುಕೊಂಡ ಸೊತ್ತುಗಳ ಹಾಗೂ ಕಾರಿನ ಗ್ಲಾಸಿಗೆ ಹಾನಿ ಪಡಿಸಿದರ ಒಟ್ಟು ಅಂದಾಜು ಮೌಲ್ಯ 32,500 ರೂ. ಆಗಿದೆ. ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net