

ಉಪ್ಪಿನಂಗಡಿ: ಬಾಲಕಿಯನ್ನು ಹಿಂಬಾಲಿಸಿ ಮನೆಗೆ ಬರುವಂತೆ ಮಾನಸಿಕ ಹಿಂಸೆ ನೀಡುತ್ತಿದ್ದ ಪ್ರಕರಣದ ಆರೋಪಿ ಉಪ್ಪಿನಂಗಡಿ ಗ್ರಾಮದ ಪೆರಿಯಡ್ಕ ನಿವಾಸಿ ಮುಹಮ್ಮದ್ ಮುಸ್ತಾಫಾ ಎಂಬಾತನನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.
ಕಳೆದೆರಡು ತಿಂಗಳಿಂದ 14ರ ಹರೆಯದ ಬಾಲಕಿಯನ್ನು ಹಿಂಬಾಲಿಸಿ ಬರುತ್ತಿದ್ದ 40ರ ಹರೆಯದ ಆರೋಪಿ ನ.29ರಂದು ಬಾಲಕಿಯನ್ನು ಆತನ ಮನೆಗೆ ಬರುವಂತೆ ಕರೆದಿದ್ದು, ಭಯಗೊಂಡ ಬಾಲಕಿ ಮನೆಯವರಿಗೆ ವಿಚಾರ ತಿಳಿಸಿದ್ದಳು. ಈ ಬಗ್ಗೆ ಬಾಲಕಿಯ ಸಹೋದರ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆರೋಪಿಯನ್ನು ಆರೋಪಿಯ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ತಿಂಗಳ ಹಿಂದೆಯೂ ಬಂಧನಕ್ಕೊಳಗಾಗಿದ್ದ
ಆರೋಪಿ ಮುಹಮ್ಮದ್ ಮುಸ್ತಾಫ ಕಳೆದ ತಿಂಗಳು ಉಪ್ಪಿನಂಗಡಿ ಕಾಲೇಜಿನ ವಿದ್ಯಾರ್ಥಿಗಳು ಗಾಯಾಳು ಸಹಪಾಠಿಯ ಆರೋಗ್ಯ ವಿಚಾರಿಸಲೆಂದು ಪೆರಿಯಡ್ಕಕ್ಕೆ ಹೋಗಿ ಹಿಂತಿರುಗುವ ವೇಳೆ ವಿದ್ಯಾರ್ಥಿಗಳ ತಂಡದಲ್ಲಿದ್ದ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರನ್ನು ಕರೆದೊಯ್ದಿರುವ ಬಗ್ಗೆ ಆಕ್ಷೇಪಿಸಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿ ಪೊಲೀಸ್ ವಶವಾಗಿದ್ದನು.