

ಗುರುಪುರ: 5 ಲಕ್ಷದವರೆಗಿನ ಕಾಮಗಾರಿಗಳಿಗೆ ಇ-ಪ್ರೊಕ್ಯೂರ್‌ಮೆಂಟ್ ಟೆಂಡರ್ ಬದಲಾಗಿ ಹಳೆಯ ಮಾದರಿಯಂತೆ ಮ್ಯಾನ್ಯುವಲ್ ಟೆಂಡರ್ ಕರೆಯಲು ಸರ್ಕಾರಕ್ಕೆ ಅನುಮತಿ ಕೋರಿ ಪತ್ರ ಬರೆಯಲು ಬಜ್ಪೆ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಶನಿವಾರ ಅಧ್ಯಕ್ಷ ಲೋಕೇಶ್ ಪೂಜಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಯಿತು. ಇ-ಪ್ರೊಕ್ಯೂರ್‌ಮೆಂಟ್ ಪ್ರಕ್ರಿಯೆಯಿಂದಾಗಿ ಸಣ್ಣಪುಟ್ಟ ಅಭಿವೃದ್ಧಿ ಕಾಮಗಾರಿಗಳು ವಿಳಂಬವಾಗುತ್ತಿವೆ. ಹೀಗಾಗಿ 5 ಲಕ್ಷ ರೂ.ವರೆಗಿನ ಕಾಮಗಾರಿಗಳಿಗೆ ಹಿಂದಿನಂತೆಯೇ ಮ್ಯಾನ್ಯುವಲ್ ಟೆಂಡರ್ ಕರೆಯಲು ಅವಕಾಶ ನೀಡಬೇಕು ಎಂದು ಸದಸ್ಯರು ಆಗ್ರಹಿಸಿದರು.
ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಹಾಗೂ ಬೀದಿನಾಯಿಗಳ ಪುನರ್ವಸತಿ ಕೇಂದ್ರ ಸ್ಥಾಪನೆ ಮತ್ತು ನಿರ್ವಹಣೆಗೆ ಪ್ರತ್ಯೇಕ ಅನುದಾನ ನೀಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆಯಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಪಪಂ ಉಪಾಧ್ಯಕ್ಷೆ ಶರ್ಮಿಳಾ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ರಿತೇಶ್ ಶೆಟ್ಟಿ, ಕೌನ್ಸಿಲರ್‌ಗಳಾದ ರಾಜೇಶ್ ಅಮೀನ್ (ಆರ್.ಕೆ.), ಯಶೋದಾ, ಜಾಕೋಬ್ ಪಿರೇರ, ಗುಲ್ಶನ್ ಕರೀಂ, ಪದ್ಮನಾಭ ಪೂಜಾರಿ, ಸುಪ್ರಿತಾ ಶೆಟ್ಟಿ, ಹಾಜಾರ ಫರ್ಜಾನ, ವೀಣಾ ಡಿಸೋಜ, ಆಯಿಶಾ ಬಜ್ಪೆ, ಜಯಂತ್ ಎಸ್. ಪೂಜಾರಿ, ದಿನೇಶ್ ಶೆಟ್ಟಿ ಕೆಂಜಾರು, ಮಲ್ಲಿಕಾ ಸಿ., ಕಂದಾಯ ಅಧಿಕಾರಿ ರವಿ ಕೊಂಡಾಣ ಹಾಗೂ ಇಂಜಿನಿಯರ್ ನಳಿನ್ ಕುಮಾರ್ ಉಪಸ್ಥಿತರಿದ್ದರು. ಬಜ್ಪೆ ಎಸ್‌ಐ ಅಶೋಕ್, ಆರ್‌ಟಿಒ ಎಸ್‌ಐ ದಿಲೀಪ್ ಕುಮಾರ್ ಮತ್ತು ಭಾರತ್ ಜೋಡೋ ಯುವ ಸಂಘಗಳ ಸಂಯೋಜಕ ಸಚೇತ್ ಸುವರ್ಣ ಉಪಯುಕ್ತ ಮಾಹಿತಿ ಹಂಚಿಕೊಂಡರು. ಪ.ಪಂ ಮುಖ್ಯಾಧಿಕಾರಿ ರತ್ನಾಪ್ರಸಾದ್ ಕಾರ್ಯಕಲಾಪ ನಿರ್ವಹಿಸಿದರು.
ಪ.ಪಂ ವ್ಯಾಪ್ತಿಯ ಕಿನ್ನಿಪದವು ಜಂಕ್ಷನ್ ಅಭಿವೃದ್ಧಿಗೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ (ಮುಡಾ) 1.70 ಕೋಟಿ ರೂ. ವೆಚ್ಚದ ಕ್ರಿಯಾ ಯೋಜನೆ ಸಿದ್ಧವಾಗಿದೆ. ಸಂತೆ ಮಾರುಕಟ್ಟೆಯ ವರಿ ವಸೂಲಿಗೆ ಸಂಬಂಧಿಸಿದಂತೆ 30.27 ಲಕ್ಷ ರೂ. ಮೊತ್ತದ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಅಧ್ಯಕ್ಷ ಲೋಕೇಶ್ ಪೂಜಾರಿ ತಿಳಿಸಿದರು.