ಲವ್‌ಜಿಹಾದ್ ಎಸ್‌ಡಿಪಿಐ ಕೈವಾಡ ಪೋಷಕರ ಆರೋಪ

ಯುವತಿಯ ತಂದೆ ವಿಶ್ವನಾಥ್ ಹಾಗೂ ತಾಯಿ ಲತಾ
ಯುವತಿಯ ತಂದೆ ವಿಶ್ವನಾಥ್ ಹಾಗೂ ತಾಯಿ ಲತಾ
Published on
ಮಂಗಳೂರು: ಪುತ್ರಿ ಅನ್ಯಕೋಮಿನ ಯುವಕನ ಜತೆ ತೆರಳುವಲ್ಲಿ ಎಸ್‌ಡಿಪಿಐ ಕೈವಾಡವಿದೆ. ಇಲ್ಲಿ ಲವ್ ಜಿಹಾದ್ ನಡೆದಿದೆ. ನಮಗೆ ನ್ಯಾಯ ಬೇಕು. ಕೇರಳ ಪೊಲೀಸರಿಂದ ನ್ಯಾಯ ಸಿಗುವ ಭರವಸೆ ಇಲ್ಲ ಎಂದು ಯುವತಿಯ ಪೋಷಕರು ಆರೋಪಿಸಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯುವತಿಯ ತಂದೆ ವಿಶ್ವನಾಥ್ ಹಾಗೂ ತಾಯಿ ಲತಾ, ವಯನಾಡ್ ಪೊಲೀಸ್ ಠಾಣೆಯಲ್ಲಿ ಪೊಲೀಸರು ಸರಿಯಾಗಿ ಸ್ಪಂದಿಸಿಲ್ಲ. ಪುತ್ರಿಯ ಜತೆ 5 ನಿಮಿಷವಷ್ಟೇ ಮಾತನಾಡಲು ಅವಕಾಶ ಕಲ್ಪಿಸಿದ್ದಾರೆ. ಈ ಸಂದರ್ಭ ಆಕೆ ನಮ್ಮೊಂದಿಗೆ ಮನೆಗೆ ಬರುವುದಾಗಿ ಹೇಳಿ ಬರೆದು ಕೊಟ್ಟಿದ್ದಾಳೆ. ಕೆಲವೇ ಕ್ಷಣಗಳಲ್ಲಿ ಅಲ್ಲಿನ ಪೊಲೀಸರು ಹಾಗೂ ಅಲ್ಲಿದ್ದ ಯುವಕನ ಕಡೆಯ ಎಸ್‌ಡಿಪಿಐನವರು ಆಕೆಯ ಮೇಲೆ ಒತ್ತಡ ಹೇರಿ ಹುಡುಗನ ಜತೆ ಹೋಗುವುದಾಗಿ ಬರೆಯಿಸಿಕೊಂಡು ನಮ್ಮನ್ನು ಅಲ್ಲಿಂದ ಕಳುಹಿಸಿದ್ದಾರೆ. ಮಂಗಳೂರು ಪೊಲೀಸರು ನಮಗೆ ನ್ಯಾಯ ಒದಗಿಸಿಕೊಡಬೇಕು ಎಂದು ಮನವಿ ಮಾಡಿದರು.
ಮನಸ್ಸು ಬದಲಾಯಿಸಿ ನಮ್ಮ ಮನೆಗೆ ಬರಬೇಕು ಎಂಬುದು ನಮ್ಮ ಆಸೆ. ಆಕೆಗೆ ನಾವು ಏನೂ ಕಮ್ಮಿ ಮಾಡಿಲ್ಲ. ಬ್ಲಾೃಕ್‌ಮೇಲ್ ಮಾಡಿ ಆಕೆಯನ್ನು ಕರೆದೊಯ್ದಿರುವ ಶಂಕೆ ಇದೆ. ಸುರತ್ಕಲ್‌ನ ಪಿಜಿಯಲ್ಲಿ ಹುಡುಗಿಯರ ಜತೆ ಹುಡುಗರು ಕೂಡಾ ವಾಸ ಇದ್ದು, ಮೊನ್ನೆ ಅಲ್ಲಿ ಹೋಗುವಾದ ಗಮನಕ್ಕೆ ಬಂದಿದೆ. ಅಲ್ಲಿ ಏನೆಲ್ಲಾ ವ್ಯವಹಾರಗಳು ನಡೆಯುತ್ತಿವೆ ಎಂಬುದರ ಬಗ್ಗೆಯೂ ಪೊಲೀಸರು ತನಿಖೆ ನಡೆಸಬೇಕು ಎಂದವರು ಒತ್ತಾಯಿಸಿದರು.
ಸಮಾಜದ ಸಾಮರಸ್ಯಕ್ಕೆ ಧಕ್ಕೆ
ನಿರಂತರವಾಗಿ ಹಿಂದೂ ಸಮಾಜದ ಹದಿ ಹರೆಯದ ಯುವತಿಯರನ್ನು ಪ್ರೀತಿಯ ಬಲೆಗೆ ಸಿಲುಕಿಸಿ, ಲವ್ ಜಿಹಾದ್ ಮಾಡುತ್ತಿರುವುದು ಹೆಚ್ಚುತ್ತಿದೆ. ಮತಾಂತರ ಆದ ಹುಡುಗಿ ಸುಖೀ ಜೀವನ ನಡೆಸಿದ ಉದಾಹರಣೆ ಇಲ್ಲ. ಸುರತ್ಕಲ್ ಭಾಗದಲ್ಲಿ ಡ್ರಗ್ಸ್ ಮಾಫಿಯಾ, ಲವ್‌ಜಿಹಾದ್ ಹೆಚ್ಚಿದೆ. ಸರ್ಕಾರ ಗಂಭೀರವಾಗಿ ಪರಿಗಣಿಸಿ ವಿಶೇಷ ಕಾನೂನು ರೂಪಿಸಬೇಕು ಎಂದು ಹಿಂದೂ ಜಾಗರಣ ವೇದಿಕೆ ಮುಖಂಡ ನರಸಿಂಹ ಮಾಣಿ ಆಗ್ರಹಿಸಿದರು.
ಶಿಕ್ಷಣ ಸಂಸ್ಥೆ, ಪಿಜಿ ಮಾಲೀಕರು ಇಂತಹ ಕಾನೂನು ಬಾಹಿರ ಚಟುವಟಿಕೆಗಳ ಮೇಲೆ ನಿಗಾ ಇಡುವುದು ಜವಾಬ್ದಾರಿಯಾಗಿದೆ. ಇದು ಸಮಾಜದ ಸಾಮರಸ್ಯಕ್ಕೆ ಧಕ್ಕೆ ಉಂಟು ಮಾಡುತ್ತಿದೆ. ಈ ಪ್ರಕರಣದಲ್ಲಿ ಕೇರಳ ಪೊಲೀಸರ ನಡೆ ಖಂಡನೀಯ. ಅಲ್ಲಿನ ಸರ್ಕಾರ ಇಂತಹ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿರುವ ಶಂಕೆ ವ್ಯಕ್ತವಾಗಿದೆ ಎಂದವರು ಹೇಳಿದರು.
ಹಿಂದು ಜಾಗರಣ ವೇದಿಕೆ ಪದಾಧಿಕಾರಿಗಳಾದ ಅಮಿತ್ ಗುಂಡಳಿಕೆ, ಲಿಖಿತ್‌ರಾಜ್ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net