ಪಾಣೆಮಂಗಳೂರು ಉಕ್ಕಿನ ಸೇತುವೆಯಲ್ಲಿ ಸಿಲುಕಿದ ಮಿನಿ ಬಸ್

ತಡೆಗಂಬ ಮುರಿದಿರುವುದು ತಿಳಿಯದೆ ಸಂಚಾರ
ನೇತ್ರಾವತಿ ಉಕ್ಕಿನ ಸೇತುವೆಯಲ್ಲಿ ಸಿಲುಕಿದ ಮಿನಿ ಬಸ್.
ನೇತ್ರಾವತಿ ಉಕ್ಕಿನ ಸೇತುವೆಯಲ್ಲಿ ಸಿಲುಕಿದ ಮಿನಿ ಬಸ್.
Published on: 

ಬಂಟ್ವಾಳ: ವಾಹನ ಡಿಕ್ಕಿಯಾಗಿ ಮುರಿದು ಬಿದ್ದ ಒಂದು ಪಾರ್ಶ್ವದ ತಡೆಗಂಬವನ್ನು ಮರುಜೋಡಿಸದೆ ಬಂಟ್ವಾಳ ಪುರಸಭೆ ನಿರ್ಲಕ್ಷೃ ವಹಿಸಿದ ಕಾರಣ ಮಿನಿ ಬಸ್ಸೊಂದು ಪಾಣೆಮಂಗಳೂರು ಉಕ್ಕಿನ ಸೇತುವೆಯಲ್ಲಿ ಸಂಚರಿಸಿ ಬಳಿಕ ಇನ್ನೊಂದು ಭಾಗದ ತಡೆಗಂಬದಿಂದ ಮುಂದಕ್ಕೆ ಚಲಿಸಲಾಗದೆ ಹಿಮ್ಮುಖವಾಗಿ ಬರುವ ಸನ್ನಿವೇಶ ಸೋಮವಾರ ಸಂಜೆ ಪಾಣೆಮಂಗಳೂರಿನ ಹಳೆಯ ಉಕ್ಕಿನ ಸೇತುವೆಯಲ್ಲಿ ನಡೆಯಿತು.

ಶುಭ ಸಮಾರಂಭ ಮುಗಿಸಿ ವಾಪಸ್ ಬರುತ್ತಿದ್ದ ಮಿನಿ ಬಸ್ ಪಾಣೆಮಂಗಳೂರು ಉಕ್ಕಿನ ಸೇತುವೆಯ ಇನ್ನೊಂದು ಪಾರ್ಶ್ವದಲ್ಲಿ ತಡೆಗಂಬ ಇರುವ ಬಗ್ಗೆ ಅರಿವಿಲ್ಲದೆ ಸಂಚರಿಸಿದೆ. ಬಳಿಕ ಅಲ್ಲಿಂದ ಮುಂದೆ ಹೋಗಲು ಸಾಧ್ಯವಾಗದೆ ಹಿಮ್ಮುಖವಾಗಿ ಬಂದು ಚಾಲಕ ಸಹಿತ ಮಿನಿ ಬಸ್ಸಿನಲ್ಲಿದ್ದ ಪ್ರಯಾಣಿಕರು ಪರಿತಪಿಸುವ ಪರಿಸ್ಥಿತಿ ನಿರ್ಮಾಣವಾಯಿತು. ಇದರಿಂದಾಗಿ ಇತರ ಲಘುವಾಹನಗಳ ಸಂಚಾರಕ್ಕೂ ತೊಂದರೆ ಉಂಟಾಯಿತು.

ಭಾರಿ ವಾಹನಗಳ ಸಂಚಾರ ನಿಷೇಧ: 1914ರಲ್ಲಿ ಬ್ರಿಟಿಷರ ಕಾಲದಲ್ಲಿ ನಿರ್ಮಾಣಗೊಂಡಿದ್ದ ಪಾಣೆಮಂಗಳೂರು ಉಕ್ಕಿನ ಸೇತುವೆಯನ್ನು ಸ್ಮಾರಕವಾಗಿ ಸಂರಕ್ಷಿಸುವ ಉದ್ದೇಶದಿಂದ ಕೆಲವು ವರ್ಷಗಳ ಹಿಂದೆಯೇ ಭಾರಿ ವಾಹನಗಳ ಸಂಚಾರ ನಿಷೇಧಿಸಿ ದ.ಕ. ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಆದರೆ ಈ ಆದೇಶ ಪಾಲನೆಯಾಗದೆ ಕೇವಲ ಸೂಚನಾ ಫಲಕಕ್ಕೆ ಮಾತ್ರ ಸೀಮಿತವಾಗಿದೆ. ಆ ಬಳಿಕ ನೇತ್ರಾವತಿ ಸೇತುವೆಯಲ್ಲಿ ಬಿರುಕು ಎನ್ನುವ ಸುದ್ದಿ ಹರಡಿ ಭಾರಿ ವಾಹನಗಳ ಸಂಚಾರವನ್ನು ಕಟ್ಟುನಿಟ್ಟಾಗಿ ನಿಷೇಧಿಸುವ ಆದೇಶವನ್ನು ಅಂದಿನ ತಹಶೀಲ್ದಾರ್ ಅರ್ಚನಾ ಭಟ್ ಹೊರಡಿಸಿದ್ದರು. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಪರ ಹಾಗೂ ವಿರೋಧ ಅಭಿಪ್ರಾಯಗಳು ವ್ಯಕ್ತವಾದರೂ ಅಂತಿಮವಾಗಿ ಸೇತುವೆಯ ಎರಡೂ ಪಾರ್ಶ್ವಗಳಲ್ಲಿ ತಡೆಗಂಬವನ್ನು ಬಂಟ್ವಾಳ ಪುರಸಭೆ ನಿರ್ಮಿಸುವ ಮೂಲಕ ಭಾರಿ ವಾಹನಗಳ ಸಂಚಾರಕ್ಕೆ ಬ್ರೇಕ್ ಬಿದ್ದಿತ್ತು. ಆದರೆ ಕಳಪೆ ಗುಣಮಟ್ಟದ ತಡೆಗಂಬ ಅಳವಡಿಸಿದ ಪರಿಣಾಮ ಎರಡು ಬಾರಿ ಗೂಡ್ಸ್ ಟೆಂಪೂ ಡಿಕ್ಕಿಯಾಗಿ ತಡೆಗಂಬದ ಬೀಮ್ ಮುರಿದು ಬಿದ್ದಿದೆ. ಬಳಿಕ ಅದನ್ನು ಮರು ಜೋಡಿಸಲಾಗಿತ್ತು. ಆದರೆ ಮತ್ತೆ ಯಾವುದೋ ವಾಹನ ಡಿಕ್ಕಿಯಾಗಿ ಮುರಿದು ಬಿದ್ದಿದ್ದು ಮರು ಜೋಡಿಸುವ ಕಾರ್ಯ ಮಾಡಿಲ್ಲ.

*ಬಿಟಿಡಬ್ಲ್ಯು_ನ16_1ಎ, 1ಬಿ

ಮುರಿದು ಬಿದ್ದಿರುವ ತಡೆಗಂಬ.