ಕುಡುಪು ಶ್ರೀ ಕ್ಷೇತ್ರದಲ್ಲಿ ಸಂಭ್ರಮದ ಪಂಚಮಿ ಉತ್ಸವ

ಕುಡುಪು ಶ್ರೀ ಅನಂತಪದ್ಮನಾಭ
ಕುಡುಪು ಶ್ರೀ ಅನಂತಪದ್ಮನಾಭ
Published on
ಮಂಗಳೂರು: ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಮಂಗಳವಾರ ಪಂಚಮಿ ಮಹಾ ಉತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ಜರಗಿತು
ಮುಂಜಾನೆ ಅಂಗ ಪ್ರದಕ್ಷಿಣೆ ಸೇವೆ, ಶ್ರೀ ಅನಂತ ಪದ್ಮನಾಭ ದೇವರಿಗೆ ಬೆಳಗಿನ ಉಷಾ ಕಾಲ ಪೂಜೆ ಆದ ಬಳಿಕ ನಾಗಬನದಲ್ಲಿ ನಾಗದೇವರಿಗೆ ವಿಶೇಷ ಪಂಚಾಮೃತ ಅಭಿಷೇಕ, ಅಷ್ಟೋತ್ತರ ಅರ್ಚನೆ, ಸಹಸ್ರನಾಮಾರ್ಚನೆ ಹಾಗೂ ಮಹಾತಂಬಿಲ ಸೇವೆ ನಡೆಯಿತು. ಬಳಿಕ ಶ್ರೀ ದೇವರಿಗೆ ನವಕಕಲಶಾಭಿಷೇಕ, ನವಕ ಪ್ರಧಾನ ಹೋಮ ನಡೆದು ಶ್ರೀ ದೇವರನ್ನು ಸರ್ವ ಆಭರಣಗಳಿಂದ ಫಲ ಪುಷ್ಪಾದಿಗಳಿಂದ ಅಲಂಕರಿಸಿ ಪಂಚಮಿಯ ವಿಶೇಷ ಮಹಾಪೂಜೆ ನಡೆಯಿತು. ಪಂಚಮಿಯ ಅನ್ನದಾನ ಮಹಾ ಕಾರ್ಯಕ್ರಮ ನಡೆಯಿತು. ಸುಮಾರು 20 ಸಾವಿರ ಭಕ್ತರು ಶ್ರೀ ದೇವರ ಅನ್ನಪ್ರಸಾದ ಸ್ವೀಕರಿಸಿದರು.
ಪಂಚಮಿಯ ವಿಶೇಷ ದಿನ ಸುಮಾರು 10 ಸಹಸ್ರದಷ್ಟು ತಂಬಿಲ ಸೇವೆ, 4 ಸಹಸ್ರದಷ್ಟು ಪಂಚಾಮೃತ ಅಭಿಷೇಕ ಹಾಗೂ ಸುಮಾರು 15 ಸಹಸ್ರದಷ್ಟು ಸಿಯಾಳ ಅರ್ಪಣೆಗೊಂಡವು. ಕ್ಷೇತ್ರದ ಉತ್ತರ ದಿಕ್ಕಿನ ಗೋಪುರದಲ್ಲಿ ಶ್ರೀ ಅನಂತಪದ್ಮನಾಭ ದೇವರಿಗೆ ವಿಶೇಷವಾದ ಶಾಸ್ತ್ರೀಯ ಸಂಗೀತದ ಗಾನಾರ್ಚನೆಯ ಕಾರ್ಯಕ್ರಮ ಅರ್ಪಣೆಗೊಂಡಿತು. ರಾತ್ರಿ ಶ್ರೀ ದೇವರ ಬಲಿ ಹೊರಟು ಸವಾರಿ, ಬಲಿ ಕಟ್ಟೆ ಪೂಜೆಗಳು ನಡೆದು ಶ್ರೀ ದೇವರು ಪವಿತ್ರ ಭದ್ರಾ ಸರಸ್ವತಿ ತೀರ್ಥ ಸರೋವರ ಕೆರೆಗೆ ಆಗಮಿಸಿದರು. ಅಲ್ಲಿ ವಿಶೇಷವಾದ ಎರಡು ದೋಣಿಯ ಮೇಲೆ ಹೂವಿನ ಅಲಂಕೃತ ಮಂಟಪದಲ್ಲಿ ಗರುಡವಾಹನ ಯುಕ್ತ ಶ್ರೀ ದೇವರು ಆರೂಢರಾಗಿ ತೆಪ್ಪೋತ್ಸವ ವಿಶೇಷವಾಗಿ ಜರಗಿತು. ಶ್ರೀ ದೇವರಿಗೆ ಮಹಾ ನೈವೇದ್ಯ, ರಾತ್ರಿಯ ಮಹಾಪೂಜೆ, ಅರ್ಪಣೆಗೊಂಡಿತು.
ಬಳಿಕ ಪಂಚಮಿಯ ಎರಡನೇ ಬಲಿ ಶ್ರೀ ಪದ್ಮನಾಭ ದೇವರ ಬಲಿಹೊರಟು ವಿಶೇಷ ಉತ್ಸವಾರ್ಪಣೆಗೊಂಡಿತು. ಉಡುಕೆ ಸುತ್ತು ವಿಶೇಷ ಚೆಂಡೆ ಬಲಿಯ ಸುತ್ತು ಆದ ಬಳಿಕ ಶ್ರೀ ದೇವರು ಅಶ್ವವಾಹನ ಯುಕ್ತ ಬಂಡಿ ರಥಯಲ್ಲಿ ಆರೂಢರಾಗಿ ಮಹಾ ಮಂಗಳಾರತಿಯಾಗಿ ಅಶ್ವ ವಾಹನ ಉತ್ಸವ ನಡೆಯಿತು. ಶ್ರೀ ದೇವರಿಗೆ ಚಂದ್ರಮಂಡಲ ಉತ್ಸವ ನಡೆಯಿತು. ನಂತರ ಶ್ರೀ ದೇವರಿಗೆ ರಾಜಾಂಗಣದಲ್ಲಿ ವಿವಿಧ ವಾದ್ಯ ವೃಂದದವರಿಂದ ಮೂರು ಸುತ್ತುಗಳ ಪಲ್ಲಕ್ಕಿ ಸೇವೆ ಅರ್ಪಣೆಗೊಂಡಿತು. ಬಳಿಕ ಪಂಚಮಿಯ ರಾಜಾಂಗಣ ಪ್ರಸಾದವನ್ನು ಭಕ್ತರಿಗೆ ವಿತರಿಸಲಾಯಿತು.
ಕ್ಷೇತ್ರದ ಆಡಳಿತ ಮುಕ್ತೆಸರರು ಹಾಗೂ ಅನುವಂಶಿಕ ಮುಕ್ತೇಸರರಾದ ಕೆ. ನರಸಿಂಹ ತಂತ್ರಿ, ಅನುವಂಶಿಕ ಮುಕ್ತೇಸರರು ಹಾಗೂ ಅನುವಂಶಿಕ ಅರ್ಚಕರಾದ ಕೆ. ಮನೋಹರ ಭಟ್, ಅನುವಂಶಿಕ ಮುಕ್ತೇಸರರು ಹಾಗೂ ಅನುವಂಶಿಕ ಪವಿತ್ರ ಪಾಣಿ ಕೆ.ಬಾಲಕೃಷ್ಣ ಕಾರಂತ, ಮುಕ್ತೇಸರರಾದ ಭಾಸ್ಕರ ಕೆ., ಕಾರ್ಯನಿರ್ವಹಣಾಧಿಕಾರಿ ಪ್ರವೀಣ್, ಪ್ರಮುಖರಾದ ಸುಜನ್ ದಾಸ್ ಕುಡುಪು, ಉದಯಕುಮಾರ್ ಕುಡುಪು, ಕೆ. ಕೃಷ್ಣರಾಜ ತಂತ್ರಿ ಹಾಗೂ ಊರ ಹತ್ತು ಸಮಸ್ತರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net