

ಗುರುಪುರ: ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ವಿದ್ಯಾರ್ಥಿಗಳಿಗೆ ಗ್ರಾಮೀಣ ಕೃಷಿ ಜೀವನದ ನೈಜ ಅನುಭವ ನೀಡುವ ಉದ್ದೇಶದಿಂದ ಬುಧವಾರ ಪಿಲಿಕುಳ ಗುತ್ತುಮನೆಯ ಎದುರಿನ ಬಾಕಿಮಾರು ಗದ್ದೆಯಲ್ಲಿ ಸಾಂಪ್ರದಾಯಿಕ ಭತ್ತದ ಕಟಾವು(ಕೊಯ್ಲು) ಪ್ರಾತ್ಯಕ್ಷಿಕೆ ನಡೆಯಿತು. ಕಾರ್ಯಕ್ರಮದಲ್ಲಿ ಕೆನರಾ ಕಾಲೇಜಿನ ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಮಕ್ಕಳು ಪಾಲ್ಗೊಂಡಿದ್ದರು.
ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ.ಅರುಣ್ ಕುಮಾರ್ ಶೆಟ್ಟಿ ಮಾತನಾಡಿ, ಪರಿಸರ, ಸಂಸ್ಕೃತಿ, ಸಂರಕ್ಷಣೆ ಮತ್ತು ಶಿಕ್ಷಣ ಕ್ಷೇತ್ರಗಳಿಗೆ ಸಂಬಂಧಿಸಿ ಪಿಲಿಕುಳದಲ್ಲಿ ನಡೆಯುತ್ತಿರುವ ಕಾರ್ಯಕ್ರಮ ವಿವರಿಸುತ್ತಾ, ಯುವ ಪೀಳಿಗೆಗೆ ಕೃಷಿ ಬಗ್ಗೆ ಮಾಹಿತಿ ಸಿಗಬೇಕು. ವಿದ್ಯಾರ್ಥಿಗಳು ಭತ್ತದ ಬೇಸಾಯದ ಹಿಂದಿನ ಕಷ್ಟ ತಿಳಿದುಕೊಳ್ಳಬೇಕು ಎಂದರು.
ಔಷಧೀಯ ವನದ ಮೇಲ್ವಿಚಾರಕ ಉದಯ ಕುಮಾರ್ ಶೆಟ್ಟಿ ಮಾತನಾಡಿ, ಭತ್ತದ ಬೇಸಾಯದ ಪರಂಪರಾಗತ ವಿಧಾನಗಳು, ಮಳೆಗಾಲದ ಅವಲಂಬನೆ, ಗದ್ದೆಯಲ್ಲಿ ಸಿದ್ಧತೆ, ನೀರಾವರಿ ಮತ್ತು ಕೊಯ್ಲಿನ ವಿಧಾನ ವಿವರಿಸಿದರು.
ಪಿಲಿಕುಳ ಸಂಸ್ಕೃತಿ ಗ್ರಾಮದ ಯೋಜನಾಧಿಕಾರಿ ಡಾ.ನಿತಿನ್ ಎನ್.ಕೆ, ಸಸ್ಯಶಾಸ್ತ್ರ ವಿಭಾಗದ ವೈಜ್ಞಾನಿಕ ಅಧಿಕಾರಿ ರಾಮಕೃಷ್ಣ ಮರಾಟಿ, ರೋಶನ್, ರವಿ ಸಹಕರಿಸಿದರು. ಕೆನರಾ ಕಾಲೇಜಿನ ವಿದ್ಯಾರ್ಥಿಗಳು ಬಾಕಿಮಾರು ಗದ್ದೆಗಿಳಿದು ಕತ್ತಿಯಿಂದ ಭತ್ತ ಕಟಾವು ಮಾಡಿ ಭತ್ತದ ಕೊಯ್ಲಿನ ನೈಜ ಅನುಭವ ಪಡೆದುಕೊಂಡರು.