ಮೂಲ್ಕಿಯ 9 ಕಟ್ಟಡಗಳಿಗೆ ನೋಟಿಸ್

ವಿಜಯವಾಣಿ ವರದಿ ಫಲಶೃತಿ
ಕೊಳಚೆ ನೀರು ಬಗ್ಗೆ ವಿಜಯವಾಣಿ ಅ.11ರಂದು ಪ್ರಕಟಿಸಿದ ವರದಿ.
ಕೊಳಚೆ ನೀರು ಬಗ್ಗೆ ವಿಜಯವಾಣಿ ಅ.11ರಂದು ಪ್ರಕಟಿಸಿದ ವರದಿ.
Published on: 

ಮೂಲ್ಕಿ: ಮೂಲ್ಕಿ ಪಟ್ಟಣ ವ್ಯಾಪ್ತಿಯ ಬೃಹತ್ ಕಟ್ಟಡಗಳಿಂದ ಸಂಸ್ಕರಿಸದ ಕೊಳಚೆ ನೀರನ್ನು ನೇರವಾಗಿ ಕೆರೆಗೆ ಹರಿಸುತ್ತಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮೂಲ್ಕಿ ನಗರ ಪಂಚಾಯಿತಿ, ಮೊದಲ ಹಂತವಾಗಿ 9 ಬೃಹತ್ ಕಟ್ಟಡಗಳ ಮಾಲೀಕರಿಗೆ ಅಧಿಕೃತ ನೋಟಿಸ್ ಜಾರಿ ಮಾಡಿದೆ.

ತ್ಯಾಜ್ಯ ನೀರು ಕೆರೆ ಸೇರುತ್ತಿರುವುದರಿಂದ ಪರಿಸರ ಮಾಲಿನ್ಯದ ಜತೆಗೆ ಸಾರ್ವಜನಿಕರಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಆವರಿಸಿರುವ ಬಗ್ಗೆ ವಿಜಯವಾಣಿಯ ಅಕ್ಟೋಬರ್ 11ರ ಸಂಚಿಕೆಯ ಅಯ್ಯೋ ಪ್ರಾಬ್ಲಮ್ ಕಣ್ರೀ ಅಂಕಣದಲ್ಲಿ ವಿಸ್ತೃತ ವರದಿ ಪ್ರಕಟಿಸಲಾಗಿತ್ತು. ಈ ವರದಿಗೆ ತಕ್ಷಣ ಸ್ಪಂದಿಸಿದ ಮುಖ್ಯಮಂತ್ರಿಗಳ ಸಚಿವಾಲಯವು, ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ಸ್ಥಳೀಯ ಆಡಳಿತಕ್ಕೆ ಕಟ್ಟುನಿಟ್ಟಿನ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಿದ ನಗರ ಪಂಚಾಯಿತಿ ಮುಖ್ಯಾಧಿಕಾರಿಗಳು, ಮಳೆನೀರು ಚರಂಡಿಗಳಿಗೆ ನೇರವಾಗಿ ಕಲುಷಿತ ನೀರು ಹರಿಸುತ್ತಿದ್ದ ಕಟ್ಟಡಗಳನ್ನು ಗುರುತಿಸಿ ನೋಟಿಸ್ ನೀಡಿದ್ದಾರೆ. ಮುಂದಿನ 15 ದಿನಗಳ ಒಳಗಾಗಿ ನಿಯಮಾನುಸಾರ ತ್ಯಾಜ್ಯ ನೀರು ಶುದ್ಧೀಕರಣ ಘಟಕ ಅಳವಡಿಸಬೇಕು ಹಾಗೂ ಕೇವಲ ಸಂಸ್ಕರಿಸಿದ ನೀರನ್ನು ಮಾತ್ರ ಹೊರಬಿಡಬೇಕು. ಈ ಆದೇಶ ಉಲ್ಲಂಘಿಸಿದಲ್ಲಿ ಪುರಸಭಾ ಕಾಯ್ದೆಯಡಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ನೋಟಿಸ್‌ನಲ್ಲಿ ಎಚ್ಚರಿಸಲಾಗಿದೆ.

ಮುಖ್ಯಮಂತ್ರಿಗಳ ಸಚಿವಾಲಯದ ನಿರ್ದೇಶನದಂತೆ ಸ್ಥಳ ಪರಿಶೀಲನೆ ಪೂರ್ಣಗೊಳಿಸಿ, ಮಳೆನೀರು ಚರಂಡಿಗೆ ಕೊಳಚೆ ನೀರು ಹರಿಸುತ್ತಿದ್ದ 9 ಕಟ್ಟಡಗಳ ಮಾಲೀಕರಿಗೆ ನೋಟಿಸ್ ನೀಡಲಾಗಿದೆ. ನಿಗದಿತ ಅವಧಿಯೊಳಗೆ ಎಸ್‌ಟಿಪಿ ಸ್ಥಾಪಿಸಿ, ಕೇವಲ ಶುದ್ಧೀಕರಿಸಿದ ನೀರನ್ನು ಮಾತ್ರ ಹೊರಬಿಡುವಂತೆ ಸ್ಪಷ್ಟ ಸೂಚನೆ ರವಾನಿಸಲಾಗಿದೆ.
ಮಧುಕರ್, ಮುಖ್ಯಾಧಿಕಾರಿ, ಮೂಲ್ಕಿ ನಗರ ಪಂಚಾಯಿತಿ