ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ದರ್ಶನ್, ಮಂಗಳೂರು ನಗರಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ 100 ಇಲೆಕ್ಟ್ರಿಕ್ ಸರ್ಕಾರಿ ಬಸ್ಸುಗಳು ಮಂಜೂರಾಗಿವೆ. ಬಸ್ಸುಗಳ ಪೂರೈಕೆಗೆ ಟೆಂಡರ್ ಆಗಿದ್ದು, ಮುಂದಿನ ಮೇ ವೇಳೆಗೆ ಶೇ. 50ರಷ್ಟು ಬಸ್ಸುಗಳು ಪ್ರಥಮ ಹಂತದಲ್ಲಿ ನಗರಕ್ಕೆ ಬರಲಿದ್ದು, ಬಳಿಕ ಮತ್ತೆ 3 ತಿಂಗಳೊಳಗೆ ಎರಡನೆ ಹಂತದಲ್ಲಿ ಇನ್ನುಳಿದ ಬಸ್ಸುಗಳು ಪೂರೈಕೆಯಾಗಲಿವೆ. ಇವುಗಳ ನಿಲುಗಡೆಗೆ ಮುಡಿಪು ಸೇರಿ ಎರಡು ಕಡೆ ನಗರದಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ. ಹೆಚ್ಚುವರಿ ಬಸ್ಸು ಚಾಲಕರ ನೇಮಕಾತಿಯೂ ನಡೆದಿದ್ದು, ತರಬೇತಿ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.