ರಾಷ್ಟ್ರೀಯ ಹುಲಿ ಗಣತಿ ಸಮೀಕ್ಷೆ

ರಾಷ್ಟ್ರೀಯ ಹುಲಿ ಗಣತಿಯನ್ವಯ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಹುಲಿ ಸಮೀಕ್ಷೆ ಕಾರ್ಯದಲ್ಲಿ ಅರಣ್ಯಾಧಿಕಾರಿಗಳು ಪಾಲ್ಗೊಂಡಿದ್ದರು.
ರಾಷ್ಟ್ರೀಯ ಹುಲಿ ಗಣತಿಯನ್ವಯ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಹುಲಿ ಸಮೀಕ್ಷೆ ಕಾರ್ಯದಲ್ಲಿ ಅರಣ್ಯಾಧಿಕಾರಿಗಳು ಪಾಲ್ಗೊಂಡಿದ್ದರು.
Published on

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ಕೇರಳದ ಅರಣ್ಯ ಪ್ರದೇಶದ 684 ಬ್ಲಾಕ್‌ಗಳಲ್ಲಿ ರಾಷ್ಟ್ರೀಯ ಹುಲಿ ಗಣತಿ ನಡೆಸಲಾಗುತ್ತಿದ್ದು, ಕಾಸರಗೋಡು ಜಿಲ್ಲೆಯ ಆರು ಬ್ಲಾಕ್‌ಗಳಲ್ಲಿ ಎಂಟು ದೈನಂದಿನ ಪ್ರೋಟೋಕಾಲ್ ಪ್ರಕಾರ ಎಣಿಕೆ ನಡೆಸಲಾಗಿದೆ.

ಮೊದಲ ಮೂರು ದಿನದವರೆಗೆ ನಿರ್ದಿಷ್ಟ ಬ್ಲಾಕ್‌ಗಳಲ್ಲಿ ಸಸ್ಯಾಹಾರಿಗಳು, ಮಾಂಸಾಹಾರಿಗಳ ಉಪಸ್ಥಿತಿ ಮತ್ತು ಅವುಗಳ ಹೆಜ್ಜೆ ಗುರುತುಗಳ ಪರಿಶೀಲನೆ, ಹುಲಿಗಳ ಮಲ, ಹೆಜ್ಜೆ ಗುರುತಿನ ಜಾಡು, ಮರಗಳ ಮೇಲೆ ಹುಲಿ ಉಗುರಿನ ಗುರುತು, ಮರಗಳ ಮೇಲಿನ ಪ್ರಾಣಿಗಳ ಉಜ್ಜುವ ಗುರುತು, ಕೂಗುವ ಸೂಚನೆ, ನೇರ ವೀಕ್ಷಣೆ ಆಧರಿಸಿ ಮೊದಲ ಮೂರು ದಿನಗಳಲ್ಲಿ ಸಮೀಕ್ಷೆ ನಡೆಸಲಾಗಿದೆ.

ನಂತರದ ದಿನಗಳಲ್ಲಿ ಗೊತ್ತುಪಡಿಸಿದ ಬ್ಲಾಕ್‌ನೊಳಗೆ ಎರಡು ಕಿ.ಮೀ.ವರೆಗೆ ನೇರ ವೀಕ್ಷಣೆ ಪೂರ್ಣಗೊಳಿಸಿ, ವನ್ಯಜೀವಿಗಳು, ಅವುಗಳ ಗುಂಪನ್ನು ಬೆಳಗ್ಗಿನ ಜಾವ ವೈಯಕ್ತಿಕವಾಗಿ ವೀಕ್ಷಿಸಿ ಎರಡು ಕಿ.ಮೀ. ಒಳಗಿರುವ ಪ್ರತಿ ಹದಿನೈದು ಮೀ. ವ್ಯಾಪ್ತಿಯೊಳಗೆ ಎರಡು ಮೀಟರ್‌ಗಳಿಗಿಂತ ಹೆಚ್ಚು ಎತ್ತರಕ್ಕೆ ಬೆಳೆಯುವ ಸಸ್ಯದ ಜಾತಿ, ಪ್ರಕಾರವನ್ನು ದಾಖಲಿಸಲಾಗುತ್ತದೆ ಎಂದು ಕಾಸರಗೋಡು ಅರಣ್ಯ ವಿಭಾಗೀಯ ಅಧಿಕಾರಿ ಜೋಸ್ ಮ್ಯಾಥ್ಯೂ ತಿಳಿಸಿದ್ದಾರೆ.

ಕಾಸರಗೋಡು ಜಿಲ್ಲೆಯ ಮುಳಿಯಾರ್, ಕಾರಡ್ಕ, ಪರಪ್ಪ, ಅಡೂರ್, ಮಂಡೆಕ್ಕೋಲು, ಪನತ್ತಡಿ ಅರಣ್ಯ ಪ್ರದೇಶದಲ್ಲಿ ರಾಷ್ಟ್ರೀಯ ಹುಲಿ ಗಣತಿ ನಡೆಸಲಾಗುತ್ತಿದೆ. ಕಾಞಂಗಾಡ್ ವಲಯ ಅರಣ್ಯ ಅಧಿಕಾರಿ, ಜಿಲ್ಲಾ ಸಂಯೋಜಕ ಸಿ.ವಿ.ವಿನೋದ್ ಕುಮಾರ್ ಜಿಲ್ಲೆಯ ಸಮೀಕ್ಷಾ ಚಟುವಟಿಕೆಗಳ ಉಸ್ತುವಾರಿ ವಹಿಸಿಕೊಂಡಿದ್ದಾರೆ.

ವಲಯ ಅರಣ್ಯಾಧಿಕಾರಿ ಕೆ.ರಾಹುಲ್, ಉಪ ವಲಯ ಅರಣ್ಯಾಧಿಕಾರಿ ಎನ್.ವಿ.ಸತ್ಯನ್, ವಿಭಾಗ ಅರಣ್ಯ ಅಧಿಕಾರಿಗಳಾದ ಕೆ.ಎ.ಬಾಬು, ಬಿ.ಸೇಸಪ್ಪ, ಬಿ.ಎಸ್.ವಿನೋದ್ ಕುಮಾರ್, ಎಂ.ಪಿ.ರಾಜು, ಎಂ.ಚಂದ್ರನ್ ನೇತೃತ್ವ ವಹಿಸಿದ್ದರು. ವಿವಿಧ ಬ್ಲಾಕ್‌ಗಳ ಉಸ್ತುವಾರಿ ಬೀಟ್ ಅರಣ್ಯಾಧಿಕಾರಿಗಳು, ಕಾಸರಗೋಡು ಸರ್ಕಾರಿ ಕಾಲೇಜಿನ ಪ್ರಾಣಿಶಾಸ್ತ್ರ ವಿದ್ಯಾರ್ಥಿಗಳು, ವಿವಿಧ ಬೀಟ್‌ಗಳ ಅರಣ್ಯಾಧಿಕಾರಿಗಳು, ಫಾರೆಸ್ಟ್ ಬೀಟ್ ಸಹಾಯಕರು, ತಾತ್ಕಾಲಿಕ ಅರಣ್ಯ ನೌಕರರು, ಅರಣ್ಯ ಸಂರಕ್ಷಣಾ ಸಮಿತಿ ಸದಸ್ಯರು, ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳು ಮೊದಲಾದವರು ಹುಲಿ ಗಣತಿ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net