

ಬೆಳ್ತಂಗಡಿ: ಪರೀಕ ಸೌಖ್ಯವನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯ ಕ್ಷೇಮ ಹಾಲ್‌ನಲ್ಲಿ 8ನೇ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನ ಆಚರಿಸಲಾಯಿತು.
ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ಅಭಿದ್ ಗಡ್‌ಯಾಲ್ ಅಧ್ಯಕ್ಷತೆ ವಹಿಸಿ, ಪ್ರಸ್ತುತ ಸಮಾಜ ಎದುರಿಸುತ್ತಿರುವ ಕಲುಷಿತ ವಾತಾವರಣ ಮನುಷ್ಯನ ದೇಹ ಘಾಸಿಗೊಳಿಸುತ್ತಿದೆ. ಉತ್ತಮ ಜೀವನ ಶೈಲಿಗೆ ಪ್ರಕೃತಿ ಚಿಕಿತ್ಸೆ ಹೆಚ್ಚು ಫಲಕಾರಿ ಎಂದರು.
ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಪ್ರಕೃತಿ ಚಿಕಿತ್ಸೆ ಮೂಲಕ ಸಾಮಾಜಿಕ ಸ್ವಾಸ್ಥೃ ರಕ್ಷಣೆ ಮಾಡುತ್ತಿರುವ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಸಾಮಾಜಿಕ ಕಳಕಳಿ, ಸಮಾಜಮುಖಿ ಚಿಂತನೆಗಳು ಶ್ಲಾಘನೀಯ ಎಂದರು.
ಇನ್ನ ನಿಸರ್ಗಧಾಮದ ನಿರ್ದೇಶಕಿ ಡಾ.ಸವಿತಾ ಹರೀಶ್ ಪ್ರಕೃತಿ ಚಿಕಿತ್ಸೆ ಹಾಗೂ ಪಂಚಭೂತ ತತ್ವದ ಕುರಿತು ಮಾಹಿತಿ ನೀಡಿದರು.
ಸೌಖ್ಯವನದ ಮುಖ್ಯವೈದ್ಯಾಧಿಕಾರಿ ಡಾ.ಗೋಪಾಲ ಪೂಜಾರಿ, ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಬಿ.ಸೀತಾರಾಮ ತೋಳ್ಪಾಡಿತ್ತಾಯ ಮಾತನಾಡಿದರು.
ಅಪರ ಜಿಲ್ಲಾಧಿಕಾರಿ ಅಭಿದ್ ಗಡ್‌ಯಾಲ್ ಮತ್ತು ಶಾಸಕ ವೇದವ್ಯಾಸ ಕಾಮತ್ ಅವರನ್ನು ಗೌರವಿಸಲಾಯಿತು. ಆಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ ಡಾ.ಶೋಭಿತ್ ಶೆಟ್ಟಿ ಸ್ವಾಗತಿಸಿದರು. ಡಾ.ಅಜಿತ್ ಮತ್ತು ಕಿರಿಯ ವೈದ್ಯರ ತಂಡದಿಂದ ಯೋಗ ಪ್ರಾತ್ಯಕ್ಷಿಕೆ ಪ್ರದರ್ಶನಗೊಂಡಿತು. ವ್ಯವಸ್ಥಾಪಕ ಪ್ರವೀಣ್ ಕುಮಾರ್ ನಿರೂಪಿಸಿದರು. ಪಿಆರ್‌ಒ ಸುಷ್ಮಾ ಪುತ್ರನ್ ವಂದಿಸಿದರು.