4ರಂದು ಕದ್ರಿಯಲ್ಲಿ ರಾಷ್ಟೀಯ ಮಕ್ಕಳ ಉತ್ಸವ, ಶ್ರೀ ಕೃಷ್ಣ ವೇಷ ಸ್ಪರ್ಧೆ

 ಸ್ಕಾೃನರ್
ಸ್ಕಾೃನರ್
Published on

ಮಂಗಳೂರು: ಕಲ್ಕೂರ ಪ್ರತಿಷ್ಠಾನದಿಂದ ರಾಷ್ಟ್ರೀಯ ಮಕ್ಕಳ ಉತ್ಸವ ಶ್ರೀಕೃಷ್ಣ ವೇಷ ಸ್ಪರ್ಧೆಯು ಕದ್ರಿಯ ಶ್ರೀ ಕ್ಷೇತ್ರ ಮಂಜುನಾಥ ದೇವಸ್ಥಾನದ ಆವರಣದಲ್ಲಿ ಸೆ.4ರಂದು ನಡೆಯಲಿದೆ.

ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಬೆಳೆಸುವ ಪ್ರಯತ್ನವಾಗಿ ಮತ್ತು ಅವರಲ್ಲಿನ ಪ್ರತಿಭೆಯನ್ನು ಗುರುತಿಸಿ ಬೆಳೆಸುವ ಸದುದ್ದೇಶದಿಂದ ಕಳೆದ ನಾಲ್ಕು ದಶಕಗಳಿಂದ (44ವರ್ಷ) ಕಲ್ಕೂರ ಪ್ರತಿಷ್ಠಾನ ನಡೆಸಿಕೊಂಡು ಬಂದಿರುವ ರಾಷ್ಟ್ರಮಟ್ಟದ ಮಕ್ಕಳ ಉತ್ಸವ ಶ್ರೀಕೃಷ್ಣ ವೇಷ ಸ್ಪರ್ಧೆಯನ್ನು 44 ವಿಭಾಗಗಳಲ್ಲಿ 12 ವೇದಿಕೆಗಳಲ್ಲಿ ಕೃಷ್ಣಾಷ್ಟಮಿಯಂದು ಏಕಕಾಲದಲ್ಲಿ ನಡೆಸಲಾಗುತ್ತಿದೆ ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೆಳಗ್ಗೆ 9 ರಿಂದ ಶ್ರೀ ಕೃಷ್ಣ ವರ್ಣ ವೈಭವ, ಬೆಳಗ್ಗೆ 10.30ರಿಂದ ಮಹಿಳೆಯರು ಸಾಮೂಹಿಕವಾಗಿ ಸಾಂಪ್ರದಾಯಿಕವಾಗಿ ಹಾಡು ಹಾಡುತ್ತಾ ಕಡೆಗೋಲಿನಿಂದ ಮೊಸರು ಕಡೆದು ಬೆಣ್ಣೆ ತೆಗೆಯುವುದು. 12ರಿಂದ ಸಾಂಸ್ಕೃತಿಕ ಕಾರ್ಯಕ್ರಮ, 1 ಗಂಟೆಗೆ ಶ್ರೀ ಕೃಷ್ಣ ಜನ್ಮ ಮಹೋತ್ಸವ ನಂದಗೋಕುಲ ವೇದಿಕೆಯಲ್ಲಿ ಗಣ್ಯರು, ಪುಟಾಣಿಕೃಷ್ಣರು ಮತ್ತು ಮಾತೆಯರ ಸಮ್ಮುಖದಲ್ಲಿ ದೀಪ ಪ್ರಜ್ವಲನೆದೊಂದಿಗೆ ಶ್ರೀ ಕೃಷ್ಣ ವೇಷ ಸ್ಪರ್ಧೆ ಉದ್ಘಾಟನೆಗೊಳ್ಳಲಿದೆ. ರಾತ್ರಿ 12ಕ್ಕೆ ಅರ್ಘ್ಯ ಪ್ರದಾನ - ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ ಎಂದರು.
ಮೂರು ಸಾವಿರಕ್ಕೂ ಹೆಚ್ಚು ಸ್ಪರ್ಧಿಗಳ ನಿರೀಕ್ಷೆ: ಈ ಬಾರಿಯ ಸ್ಪರ್ಧೆಗೆ ಸುಮಾರು ಮೂರು ಸಾವಿರಕ್ಕೂ ಅಧಿಕ ಮಕ್ಕಳು ಭಾಗವಹಿಸುವ ನಿರೀಕ್ಷೆಯಿದೆ. ಶ್ರೀಕೃಷ್ಣ ರಸಪ್ರಶ್ನೆ-ಬಾಲಕೃಷ್ಣ ರಸಪ್ರಶ್ನೆ ಸ್ಪರ್ಧಾಳುಗಳಿಗೆ ಬಹುಮಾನವಾಗಿ ಸುಮಾರು 200ಕ್ಕೂ ಮಿಕ್ಕಿ ನಿತ್ಯ ಪೂಜಾ ಅಥವಾ ಸಾಂಸ್ಕೃತಿಕ ಪರಿಕರಗಳನ್ನು ನೀಡಲಾಗುತ್ತದೆ. 6 ತಿಂಗಳ ಶಿಶುವಿನಿಂದ ಹಿಡಿದು ಅಬಾಲವೃದ್ಧರ ವರೆಗೂ ವಿವಿಧ ಬಗೆಯ ಕೃಷ್ಣ ವೇಷ ಸ್ಪರ್ಧೆಗಳು ನಡೆಯಲಿದೆ. ಸ್ಪರ್ಧಾ ಸ್ಥಳದಲ್ಲೇ ಹೆಸರು ನೊಂದಾಯಿಸಲು ಅವಕಾಶವಿದೆ. ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. ಭಾಗವಹಿಸಿದವರೆಲ್ಲರಿಗೂ ಉಡುಪಿ ಕಡೆಗೋಲು ಕೃಷ್ಣನ ಪಂಚಲೋಹದ ವಿಗ್ರಹ, ಪ್ರಶಂಸನಾಪತ್ರ ಹಾಗೂ ಇತರ ಉಡುಗೊರೆ ನೀಡಲಾಗುವುದು ಎಂದರು.
ಆನ್‌ಲೈನ್ ನೋಂದಣಿ: ಸ್ಪರ್ಧೆಯಲ್ಲಿ ಭಾಗವಹಿಸಲು ಕ್ಯೂಆರ್ ಕೋಡ್ ಸ್ಕಾೃನ್ ಮಾಡಿ ಆನ್‌ಲೈನ್ ಮೂಲಕ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಫಲಿತಾಂಶವನ್ನೂ ಇಲ್ಲಿಯೇ ನೋಡಬಹುದು. ಸ್ಪರ್ಧಾ ಸ್ಥಳದಲ್ಲಿಯೂ ಹೆಸರು ನೊಂದಾಯಿಸಲು ಅವಕಾಶವಿದೆ. ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ ಎಂದು ಕಲ್ಕೂರ ವಿವರಿಸಿದರು.
ಕದ್ರಿ ನವನೀತ್ ಶೆಟ್ಟಿ, ಪ್ರಭಾಕರ ರಾವ್, ಸುಧಾಕರ ರಾವ್, ಬಿ.ವಿಜಯಲಕ್ಷ್ಮೀ ಶೆಟ್ಟಿ, ಮಂಜುಳಾ ಶೆಟ್ಟಿ, ದಯಾನಂದ ಕಟೀಲ್, ಜಿ.ಕೆ.ಭಟ್ ಸೇರಾಜೆ, ಪೂರ್ಣಿಮಾ ರಾವ್, ಡಾ.ಎಂ.ಪ್ರಭಾಕರ ಜೋಶಿ, ಪ್ರಕಾಶ್ ನಾಯಕ್, ತಾರಾನಾಥ ಶೆಟ್ಟಿ ಬೋಳಾರ, ಶಿವಪ್ರಸಾದ್ ಪ್ರಭು ಮೊದಲಾದವರಿದ್ದರು.
ಸ್ಪರ್ಧಾ ವಿಭಾಗಗಳು
ತೊಟ್ಟಿಲ ಕೃಷ್ಣ, ಕಂದ ಕೃಷ್ಣ, ಮುದ್ದು ಕೃಷ್ಣ, ತುಂಟ ಕೃಷ್ಣ, ಬಾಲಕೃಷ್ಣ, ಕಿಶೋರ ಕೃಷ್ಣ, ಶ್ರೀ ಕೃಷ್ಣ, ಗೀತ ಕೃಷ್ಣ, ಶಂಖನಾದ, ಶಂಖ ಉದ್ಘೋಷ, ರಾಧಾಕೃಷ್ಣ, ರಾಧಾ ಮಾಧವ, ಯಶೋಧ ಕೃಷ್ಣ, ದೇವಕಿ ಕೃಷ್ಣ, ವಸುದೇವ ಕೃಷ್ಣ (ಮುಕ್ತ ವಿಭಾಗ), ಯಕ್ಷ ಕೃಷ್ಣ, ಕೃಷ್ಣ-ಕುಚೇಲ, ನಂದ ಗೋಕುಲ (ಸಮೂಹ ವಿಭಾಗ), ಛಾಯಾಕೃಷ್ಣ, ಶ್ರೀ ಕೃಷ್ಣ ವರ್ಣ ವೈಭವ ಚಿತ್ರಕಲೆ, ಅಚ್ಚುತ ರಸಪ್ರಶ್ನೆ ಲಿಖಿತ, ಮಾಧವ ರಸಪ್ರಶ್ನೆ ಲಿಖಿತ, ಕೇಶವ ರಸಪ್ರಶ್ನೆ ಲಿಖಿತ, ಪಂಡರಾಪುರ ವಿಠಲ (ನೃತ್ಯ ಭಜನಾ ಸ್ಪರ್ಧೆ), ಆ.30ರಂದು ಪೂರ್ವಭಾವಿ ಸ್ಪರ್ಧೆಳಾದ ಶ್ರೀಕೃಷ್ಣ ಗಾನ ವೈಭವ, ರಂಗೋಲಿಯಲ್ಲಿ ಶ್ರೀಕೃಷ್ಣ, ಕೃಷ್ಣ ಕಥಾ ಬೆಳಗ್ಗೆ 9ರಿಂದ ಕೊಡಿಯಾಲಬೈಲ್ ಶಾರದಾ ವಿದ್ಯಾಲಯ ನಡೆಯಲಿದೆ. ಅಂತಾರಾಷ್ಟ್ರೀಯ ಸ್ಪರ್ಧಾಳುಗಳಿಗೆ ಆನ್‌ಲೈನ್ ವಿಭಾಗದಲ್ಲಿ ವೃಕ್ಷ ಕೃಷ್ಣ, ಗೋಪಾಲಕೃಷ್ಣ, ಕೃಷ್ಣ ಲೀಲ್ಸ್ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಎಸ್. ಪ್ರದೀಪ್ ಕುಮಾರ್ ಕಲ್ಕೂರ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net