9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊಲೆ ಆರೋಪಿಯ ಬಂಧನ

ಸೂಫಿಯಾನ  ಕೊಟ್ರೇಶಿ
ಸೂಫಿಯಾನ ಕೊಟ್ರೇಶಿ
Published on
ಮಂಗಳೂರು: ನಗರ ಪೊಲೀಸ್ ಕಮಿಷನರೇಟ್ ನ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2017 ನೇ ಇಸವಿಯಲ್ಲಿ ಲೆಪ್ಪಿ ಸಹ್ವಾನ್ ಎಂಬಾತನನ್ನು ಅಪಹರಿಸಿ ಕೊಲೆ ಮಾಡಿದ ಪ್ರಕರಣದಲ್ಲಿ 9 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬೆಂಗಳೂರಿನ ಡಿ.ಜೆ.ಹಳ್ಳಿಯ ಶ್ಯಾಮ್ ಪುರ್ ರೈಲ್ವೇ ಗೇಟ್ ಬಳಿ ಬಂಧಿಸಿದ್ದಾರೆ.
ಮೂಲತಃ ಬಳ್ಳಾರಿಯವನಾಗಿದ್ದು, ಪ್ರಸ್ತುತ ಬೆಂಗಳೂರು ಶ್ಯಾಮಪುರ ಬಳಿ ವಾಸವಿದ್ದ ಸೂಫಿಯಾನ ಕೊಟ್ರೇಶಿ (31) ಬಂಧಿತ ಆರೋಪಿ.
ಈತನು ಕುಖ್ಯಾತ ರೌಡಿಶೀಟರ್ ಸಫಾನ್ ಹುಸೈನ್ ನ ಸಹಚರನಾಗಿದ್ದು, 2017 ರಲ್ಲಿ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಫ್ಘಾನ್ ಹುಸೈನ್ ಹಾಗೂ ಆತನ ಸಹಚರರೊಂದಿಗೆ ಸೇರಿಕೊಂಡು ಲೆಪ್ಪಿ ಸಹ್ವಾನ್ ಎಂಬಾತನನ್ನು ಅಪಹರಿಸಿ ಹಲ್ಲೆ ನಡೆಸಿ, ಕೊಲೆ ಮಾಡಿ ಆಗುಂಬೆ ಘಾಟಿಯಲ್ಲಿ ಎಸೆದ ಪ್ರಕರಣದಲ್ಲಿ ನೇರ ಭಾಗಿಯಾಗಿದ್ದ. ಬಳಿಕ ಪೊಲೀಸರಿಗೆ ಸಿಗದೇ ತಲೆಮರೆಸಿಕೊಂಡಿದ್ದನು. ಗುಲ್ಬರ್ಗಾ, ಬಳ್ಳಾರಿ, ಮುಂಬೈ ಹಾಗೂ ಆಂದ್ರಪ್ರದೇಶದ ರಾಯ್ ಚೋಟಿ ಪ್ರದೇಶದಲ್ಲಿ ತಲೆಮರೆಸಿಕೊಂಡು ಬಳಿಕ ಬೆಂಗಳೂರಿನಲ್ಲಿ ತನ್ನ ಸೂಪಿಯಾನ್ ಎಂಬ ಹೆಸರನ್ನು ಮೊಹಮ್ಮದ್ ಹುಸೈನ್ ಎಂದು ಬದಲಿಸಿ, ಆಧಾರ್ ಕಾರ್ಡ್, ಪಾಸ್ ಪೋರ್ಟ್,ಡೈವಿಂಗ್ ಲೈಸನ್ಸ್ ಮಾಡಿಸಿಕೊಂಡು ಬೆಂಗಳೂರಿನ ಯುವತಿಯನ್ನು ವಿವಾಹವಾಗಿ ಜೀವನ ನಡೆಸುತ್ತಿದ್ದನು.
ಈತನು 2012ನೇ ಇಸವಿಯಲ್ಲಿ ಬಳ್ಳಾರಿ ಜಿಲ್ಲೆಯ ಬ್ರೂಸ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಬ್ಬ ವೃದ್ಧೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಎಳೆದ ಸಮಯ ತನ್ನ ಗುರುತು ವೃದ್ಧೆಗೆ ಸಿಕ್ಕಿತೆಂದು ತಿಳಿದು ಆಕೆಯ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದ. ಈ ಪ್ರಕರಣದಲ್ಲಿ ದಸ್ತಗಿರಿಯಾಗಿ 4 ವರ್ಷಗಳ ಕಾಲ ಬಳ್ಳಾರಿ ಜೈಲ್ ನಲ್ಲಿದ್ದು, ಆ ಸಮಯ ಸಫಾನ್ ಹುಸೈನ್ ಮತ್ತು ಆತನ ಸಹಚರರ ಪರಿಚಯವಾಗಿ ಅವರ ಸಹಾಯದಿಂದ ಜಾಮೀನು ಪಡೆದುಕೊಂಡು ನಂತರ ಹಿಂದೂ ಧರ್ಮದಿಂದ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ತನ್ನ ಕೊಟ್ರೇಸಿ ಎಂಬ ಹೆಸರನ್ನು ಸೂಫಿಯಾನ ಎಂದು ಬದಲಾಯಿಸಿಕೊಂಡು ಸಫ್ಘಾನ್ ಹುಸೈನ್ ನ ಜೊತೆಯಲ್ಲಿ ಮಂಗಳೂರಿಗೆ ಬಂದು ಅವರ ಗ್ಯಾಂಗ್ ನಲ್ಲಿದ್ದನು.
ನಂತರ ಸಫ್ಘಾನ್ ಹುಸೈನ್ ಮತ್ತು ಸಹಚರರ ಗ್ಯಾಂಗ್ ನಲ್ಲಿ ಸೇರಿಕೊಂಡು 2017ನೇ ಇಸವಿಯಲ್ಲಿ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರಿಗೆ ಬೆದರಿಸಿ ಹಣ ವಸೂಲಿ ಮಾಡಿದ ಪ್ರಕರಣದಲ್ಲಿ ಭಾಗಿಯಾಗಿ ಈ ಪ್ರಕರಣದಲ್ಲಿ ಕೂಡ ದಸ್ತಗಿರಿಯಾಗದೇ ತಲೆಮರೆಸಿಕೊಂಡಿದ್ದನು. ಈತನ ವಿರುದ್ಧ ಬಳ್ಳಾರಿಯ ಹೊಸಪೇಟೆ ಠಾಣಾ ವ್ಯಾಪ್ತಿಯಲ್ಲಿ ನಡೆದ ಬೈಕ್ ಕಳ್ಳತನ ಪ್ರಕರಣದಲ್ಲಿ ಸಹ ಭಾಗಿಯಾಗಿದ್ದ.
ಆರೋಪಿ ಸೂಫಿಯಾನ ಕೊಟ್ರೇಶಿ ಎಂಬಾತನ ವಿರುದ್ಧ ಒಟ್ಟು 4 ಪ್ರಕರಣಗಳು ದಾಖಲಾಗಿದ್ದು, ಸುರತ್ಕಲ್ ನ ಲೆಫ್ಟಿ ಸಫ್ಘಾನ್ ನ ಕೊಲೆ ಪ್ರಕರಣ. ಬಳ್ಳಾರಿ ಬ್ರೂಸ್ ಪೇಟ್ ಠಾಣಾ ವ್ಯಾಪ್ತಿಯ ವೃದ್ಧೆಯ ಕೊಲೆ ಪ್ರಕರಣ, ಹೊಸಪೇಟೆಯಲ್ಲಿ ಬೈಕ್ ಕಳ್ಳತನ, ಬಜಪೆ ಪೊಲೀಸ್ ಠಾಣೆಯಲ್ಲಿ ಬಲವಂತದಿಂದ ಹಣ ಸುಲಿಗೆ ಮಾಡಿದ ಪ್ರಕರಣ ದಾಖಲಾಗಿವೆ. ಈತನನ್ನು ಮುಂದಿನ ಕ್ರಮಕ್ಕಾಗಿ ಸುರತ್ಕಲ್ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದು. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿ ಪಡೆದುಕೊಂಡು ತನಿಖೆಗೆ ಒಳಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net