ಮುಂಬೈ ವಿಮಾನ ಪ್ರಯಾಣಿಕ ಮಂಗಳೂರು ಹೊಟೇಲ್‌ನಲ್ಲಿ ಮೃತ್ಯು

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಮಂಗಳೂರು: ಮಂಗಳೂರು ನಗರದಿಂದ ಮುಂಬೈಗೆ ಪ್ರಯಾಣಿಸಬೇಕಿದ್ದ ವಿಮಾನ ಪ್ರಯಾಣಿಕರೊಬ್ಬರು ಹೊಟೇಲ್ ರೂಂನಲ್ಲಿ ಮೃತಪಟ್ಟಿರುವುದು ಭಾನುವಾರ ಬೆಳಗ್ಗೆ ಬೆಳಕಿಗೆ ಬಂದಿದೆ.

ಮುಂಬೈ ನಿವಾಸಿ ಸುಶಾಂತ್ ಮೃತಪಟ್ಟವರು. ವಿಮಾನ ಸಂಪರ್ಕ ತಪ್ಪಿದ ಹಿನ್ನೆಲೆಯಲ್ಲಿ ವಿಮಾನಯಾನ ಸಂಸ್ಥೆಯಿಂದ ಶನಿವಾರ ರಾತ್ರಿ ಸುರತ್ಕಲ್‌ನ ಹೋಟೆಲ್‌ವೊಂದರಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಬೆಳಗ್ಗೆ ವಿಮಾನ ಯಾನ ಸಂಸ್ಥೆಯವರು ಅವರನ್ನು ಕರೆಯಲು ಹೋದಾಗ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಪರಿಶೀಲಿಸಿದಾಗ ಅವರು ಮಲಗಿದಲ್ಲೇ ಮೃತಪಟ್ಟಿರುವುದು ಕಂಡು ಬಂದಿದೆ. ಈ ಬಗ್ಗೆ ಸುರತ್ಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೃದಯಾಘಾತದಿಂದ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ನಮ್ಮ ಪ್ರಯಾಣಿಕರೊಬ್ಬರ ನಿಧನದಿಂದ ನಾವು ತೀವ್ರ ದುಃಖ ವ್ಯಕ್ತಪಡಿಸುತ್ತೇವೆ. ಮೃತರ ಕುಟುಂಬಕ್ಕೆ ಸಂತಾಪಗಳನ್ನು ಸಲ್ಲಿಸುತ್ತೇವೆ. ಕುಟುಂಬಕ್ಕೆ ಸಾಧ್ಯವಿರುವ ಎಲ್ಲಾ ನೆರವನ್ನು ನೀಡಲಿದ್ದು, ಸ್ಥಳೀಯ ಅಧಿಕಾರಿಗಳೊಂದಿಗೆ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ವಿಮಾನ ಯಾನ ಸಂಸ್ಥೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net