ಭಾಷೆಗಿದೆ ಗಡಿಯನ್ನೂ ಮೀರಿ ಮನಸ್ಸು ಬೆಸೆಯುವ ಶಕ್ತಿ : ಲಕ್ಷ್ಮೀ ಕೆ.

ಕೇರಳ-ಕರ್ನಾಟಕ ಜಾನಪದ ಉತ್ಸವದ ಅಂಗವಾಗಿ ನಡೆದ ಬಹುಭಾಷಾ ಕವಿಗೋಷ್ಠಿಯಲ್ಲಿ ಕವಿಗಳನ್ನು ಗೌರವಿಸಲಾಯಿತು.
ಕೇರಳ-ಕರ್ನಾಟಕ ಜಾನಪದ ಉತ್ಸವದ ಅಂಗವಾಗಿ ನಡೆದ ಬಹುಭಾಷಾ ಕವಿಗೋಷ್ಠಿಯಲ್ಲಿ ಕವಿಗಳನ್ನು ಗೌರವಿಸಲಾಯಿತು.
Published on: 

ಕುಂಬಳೆ: ಭಾಷೆಗಳು ಮನುಷ್ಯರ ನಡುವೆ ಗೋಡೆ ಕಟ್ಟುವ ಬದಲು ಭಾವನೆಗಳ ಸೇತುವೆಯಾಗಬೇಕು. ವೈವಿಧ್ಯವೇ ನಮ್ಮ ಬಲವಾಗಿದ್ದು, ಬೇರೆ ಬೇರೆ ಭಾಷೆಗಳ ಮೂಲಕ ಹೊರಹೊಮ್ಮುವ ಕಾವ್ಯ ಗಡಿಗಳನ್ನು ಮೀರಿ ಜನಮನ ಬೆಸೆಯುವ ಅಪೂರ್ವ ಶಕ್ತಿ ಹೊಂದಿದೆ ಎಂದು ಕಾಸರಗೋಡು ಸರ್ಕಾರಿ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಲಕ್ಷ್ಮೀ ಕೆ. ಹೇಳಿದರು.

ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಭಾನುವಾರ ಕೊಚ್ಚಿಯ ಕಲೂರ್ ಗೋಕುಲಂ ಪಾರ್ಕ್ ಕನ್ವೆನ್ಶನ್ ಸೆಂಟರ್‌ನಲ್ಲಿ ‘ಕೇರಳ-ಕರ್ನಾಟಕ ಜಾನಪದ ಉತ್ಸವ’ದಂಗವಾಗಿ ನಡೆದ ಬಹುಭಾಷಾ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗೋಷ್ಠಿಯಲ್ಲಿ ವನಜಾಕ್ಷಿ ಚೆಂಬ್ರಕಾನ (ಕನ್ನಡ), ಡಾ.ಆಶಾಲತಾ ಚೇವಾರು (ತುಳು), ಉದಿನೂರು ಮೊಹಮ್ಮದ್ ಕುಂಞ (ಮಲೆಯಾಳಂ), ವಿಜಯ ಕಾನ (ಸಂಸ್ಕೃತ), ದಿವ್ಯಾ ಗಟ್ಟಿ ಪರಕ್ಕಿಲ (ಇಂಗ್ಲಿಷ್), ಸರ್ವಮಂಗಳಾ ರಾವ್ ಕೆ. (ಹಿಂದಿ), ಸಿಹಾನ (ಬ್ಯಾರಿ), ನಾರಾಯಣ ನಾಯ್ಕ (ಮರಾಠಿ), ಪ್ರಮೀಳಾ ಚುಳ್ಳಿಕ್ಕಾನ (ಹವ್ಯಕ), ಜ್ಯೋತ್ಸ್ನಾ ಎಂ. (ಕರ‌್ಹಾಡ) ಹಾಗೂ ವಕೀಲ ಥೋಮಸ್ ಡಿಸೋಜ (ಕೊಂಕಣಿ) ಸ್ವರಚಿತ ಕವಿತೆಗಳನ್ನು ವಾಚಿಸಿದರು. ಕವಿಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ, ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷ ಪ್ರೊ.ಎಚ್.ಸಿ.ಬೋರಲಿಂಗಯ್ಯ, ಕರ್ನಾಟಕ ಸರ್ಕಾರದ ಕನಿಷ್ಠ ವೇತನ ಆಯೋಗದ ಅಧ್ಯಕ್ಷ ಟಿ.ಎಂ.ಶಾಹಿದ್, ಕಸಾಪ ಕೇರಳ ಗಡಿನಾಡ ಘಟಕ ಅಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ, ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್.ಸುಬ್ಬಯ್ಯಕಟ್ಟೆ ಉಪಸ್ಥಿತರಿದ್ದರು. ಜಯ ಮಣಿಯಂಪಾರೆ ಸ್ವಾಗತಿಸಿದರು. ಪುರುಷೋತ್ತಮ ಭಟ್ ಕೆ. ವಂದಿಸಿದರು. ರವಿ ನಾಯ್ಕಪು ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net