ಮಂಗಳೂರು: ನಗರದ್ಯಾಂತ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿ 50 ಲಕ್ಷ ರೂ. ಮೌಲ್ಯದ ಸುಮಾರು 517.76 ಗ್ರಾಂ ಎಂ.ಡಿ.ಎಂ.ಎ. ಮಾದಕ ದ್ರವ್ಯವನ್ನು ನಗರ ಅಪಾರಾಧ ಪತ್ತೆದಳ ಪೊಲೀಸರು ಶನಿವಾರ ವಶಪಡಿಸಿಕೊಂಡಿದ್ದಾರೆ.
ಮಂಗಳೂರು ಸಿ.ಸಿ.ಬಿ. ಘಟಕದ ಎ.ಸಿ.ಪಿ. ಮನೋಜ್ ಕುಮಾರ್ ನಾಯ್ಕ ಅವರ ನೇತೃತ್ವದಲ್ಲಿ ಸಿ.ಸಿ.ಬಿ.ಯ ತಂಡವು ಖಚಿತ ಮಾಹಿತಿ ಸಂಗ್ರಹಿಸಿ ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿಯ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಸುಂದರಾಮ್ ಶೆಟ್ಟಿ ಕನ್ವೆನ್ಷನ್ ಹಾಲ್ ಬಳಿ ಒಂದು ಕಾರಿನಲ್ಲಿ ಮಾದಕ ವಸ್ತುವನ್ನು ಮಾರಾಟ ಮಾಡಲು ಹೊಂಚು ಹಾಕುತ್ತಿದ್ದ ವೇಳೆ ದಾಳಿ ನಡೆಸಿ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.
ಅವರ ಬಳಿ ಇದ್ದ ಸುಮಾರು 50ಲಕ್ಷ ರೂ. ಮೌಲ್ಯದ ಸುಮಾರು 517.76 ಗ್ರಾಂ ಎಂ.ಡಿ.ಎಂ.ಎ. ಎಂಬ ಮಾದಕ ವಸ್ತುವನ್ನು ಹಾಗೂ ಕೃತ್ಯಕ್ಕೆ ಬಳಸಿದ 10 ಲಕ್ಷ ಮೌಲ್ಯದ ನೀಲಿ ಬಣ್ಣದ ಮಾರುತಿ ಕಂಪನಿಯ ಕಾರು ಹಾಗೂ 5 ಮೊಬೈಲ್ ಪೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ನೈಜೀರಿಯಾ ಪ್ರಜೆಯಿಂದ ಪಡೆದಿದ್ದರು: ಮಾದಕ ವಸ್ತುವನ್ನು ಆರೋಪಿತರು ಬೆಂಗಳೂರಿನಲ್ಲಿ ಒಬ್ಬ ನೈಜೀರಿಯಾ ದೇಶದ ವ್ಯಕ್ತಿಯಿಂದ ತಂದು ಮಂಗಳೂರು ನಗರದ್ಯಾಂತ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅಕ್ರಮವಾಗಿ ಪೂರೈಕೆ ಮಾಡಿ ಹಣ ಗಳಿಸುವ ಉದ್ದೇಶ ಹೊಂದಿರುವುದು ವಿಚಾರಣೆಯಿಂದ ಬಂದಿರುತ್ತದೆ. ಆರೋಪಿತರ ವಿರುದ್ದ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್. ಹಾಗೂ ಬಿ.ಎನ್.ಎಸ್. ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.