21ರಂದು ಎಂಪಿಸಿ ರೋಟರಿ ಕೋಸ್ಟಲ್ ಎಂಎಸ್‌ಎಂಇ ಸ್ಟಾರ್ಟ್‌ಅಪ್ ಸಮಾವೇಶ

ಸುದ್ದಿಗೋಷ್ಠಿ
ಸುದ್ದಿಗೋಷ್ಠಿ
Published on

ಪ್ರಮುಖ ಮುಖ್ಯಾಂಶಗಳು

  • ಸಮಾವೇಶದ ನಿರ್ದೇಶಕ ಸಿಎ ಎಸ್.ಎಸ್. ನಾಯಕ್ ಅವರಿಂದ ಸುದ್ದಿಗೋಷ್ಠಿ
ಮಂಗಳೂರು: ಕರಾವಳಿ ಕರ್ನಾಟಕದ ಸಣ್ಣ ಮತ್ತು ಮಧ್ಯಮ ಉದ್ಯಮಗಳು (ಎಂಎಸ್‌ಎಂಇ) ಹಾಗೂ ಸ್ಟಾರ್ಟ್‌ಅಪ್‌ಗಳಿಗೆ ಹೊಸ ఉత్తೇಜನ ನೀಡುವ ಉದ್ದೇಶದಿಂದ ಮಂಗಳೂರು ಪ್ರೊಡಕ್ಟಿವಿಟಿ ಕೌನ್ಸಿಲ್ (ಎಂಪಿಸಿ)- ರೋಟರಿ ಕೋಸ್ಟಲ್ ಎಂಎಸ್‌ಎಂಇ & ಸ್ಟಾರ್ಟ್‌ಅಪ್ ಕಾನ್‌ಕ್ಲೇವ್-2026 ಎಂಬ ಒಂದು ದಿನದ ಬೃಹತ್ ಸಮಾವೇಶವನ್ನು ಆ. 21ರಂದು ಮಂಗಳೂರಿನ ಓಲ್ಡ್ ಪೋರ್ಟ್ ರಸ್ತೆಯ ತಾಜ್ ವಿವಾಂತ ಹೋಟೆಲ್ ಎದುರಿನ ರೆಡ್‌ಕ್ರಾಸ್ ಭವನದ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಸಮಾವೇಶದ ನಿರ್ದೇಶಕ ಸಿಎ ಎಸ್.ಎಸ್. ನಾಯಕ್ ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಈ ಬಾರಿಯ ಸಮಾವೇಶದಲ್ಲಿ ಪ್ರಮುಖ ಉದ್ಯಮಿಗಳು, ನವೋದ್ಯಮಿಗಳು ಸೇರಿದಂತೆ 400ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ತಂತ್ರಜ್ಞಾನ ವಲಯ, ವ್ಯಾಪಾರ, ವಾಣಿಜ್ಯ, ಪ್ರವಾಸೋದ್ಯಮ, ಉತ್ಪಾದನೆ, ಸೇವಾ ವಲಯ ಮತ್ತು ಆರೋಗ್ಯ ಕ್ಷೇತ್ರದ ಪ್ರಮುಖರು, ಹೂಡಿಕೆದಾರರು, ಕೈಗಾರಿಕಾ ಮುಖಂಡರು, ನೀತಿ ನಿರೂಪಕರು ಹಾಗೂ ಬ್ಯಾಂಕಿಂಗ್ ಕ್ಷೇತ್ರದ ಪಾಲುದಾರರನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು.
ಉದ್ಯಮಗಳ ಬೆಳವಣಿಗೆಗೆ ಬ್ಯಾಂಕಿಂಗ್ ವ್ಯವಸ್ಥೆಯ ಬೆಂಬಲ ಅತ್ಯಗತ್ಯವಾಗಿದ್ದು, ಈ ಸಮಾವೇಶಕ್ಕೆ ಕರಾವಳಿಯ ಪ್ರಮುಖ ಬ್ಯಾಂಕ್‌ಗಳು ಹಾಗೂ ಸಂಸ್ಥೆಗಳು ಸಕ್ರಿಯ ಪ್ರಾಯೋಜಕತ್ವ ಮತ್ತು ಬೆಂಬಲವನ್ನು ನೀಡಿವೆ. ಆ. 21ರಂದು ಬೆಳಿಗ್ಗೆ 9.15ಕ್ಕೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಎಂಎಸ್‌ಎಂಇಗಳಿಗೆ ಲಭ್ಯವಿರುವ ವಿವಿಧ ಬ್ಯಾಂಕಿಂಗ್ ಸಾಲ ಸೌಲಭ್ಯಗಳು, ಸಿಬಿಲ್ ಸ್ಕೋರ್ ಸಂಬಂಧಿತ ಸಮಸ್ಯೆಗಳು ಮತ್ತು ಪರಿಹಾರಗಳು, ಕೃಷಿ ಉದ್ಯಮ, ಆಹಾರ ಸಂಸ್ಕರಣೆ ಹಾಗೂ ತಂತ್ರಜ್ಞಾನ ವಲಯಗಳಿಗೆ ಸಂಬಂಧಿಸಿದ ವಿಶೇಷ ಮಾಹಿತಿಯನ್ನು ಅಧಿವೇಶನದಲ್ಲಿ ನೀಡಲಾಗುತ್ತದೆ ಎಂದವರು ವಿವರಿಸಿದರು.
ಮಂಗಳೂರು ಪ್ರೊಡಕ್ಟಿವಿಟಿ ಕೌನ್ಸಿಲ್ ಕಾರ್ಯದರ್ಶಿ ಡಾ. ಪಿ.ಜಿ. ಮಹೇಶ್, ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಅಧ್ಯಕ್ಷ ರವೀಂದ್ರ ಬಿ.ಎನ್., ಕಾರ್ಯದರ್ಶಿ ಜಾಕ್ಸನ್ ಸಲ್ದಾನ, ಕಾರ್ಯಕ್ರಮ ಸಂಯೋಜಕ ಡ್ಯಾರಿಲ್ ಡಿಸೋಜ, ರೋಟರಿ ಕ್ಲಬ್‌ನ ಡಾ. ದೇವದಾಸ್ ರೈ, ಜಿಲ್ಲಾ ಸಂಪನ್ಮೂಲ ವ್ಯಕ್ತಿ ಸತೀಶ್ ಮಾಬೆನ್ ಅವರು ಸುದ್ದಿಗೋಷ್ಠಿಯಲ್ಲಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net