‘ಎಂ.ಎನ್.ಆರ್. ಪ್ರೊಡಕ್ಷನ್’ ಸಂಸ್ಥೆಯಿಂದ ‘ವಾದಿರಾಜ ವಾಲಗ ಮಂಡಳಿ’ ಕನ್ನಡ ಚಿತ್ರ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ.ಎಂ.ಎನ್. ರಾಜೇಂದ್ರ ಕುಮಾರ್
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ.ಎಂ.ಎನ್. ರಾಜೇಂದ್ರ ಕುಮಾರ್
Published on

ಪ್ರಮುಖ ಮುಖ್ಯಾಂಶಗಳು

  • ‘ವಾದಿರಾಜ ವಾಲಗ ಮಂಡಳಿ’
  • ಉರ್ವಾ ಮಾರಿಯಮ್ಮನ ಸಾನಿಧ್ಯದಲ್ಲಿ ಮುಹೂರ್ತ
  • ‘ಎಂ.ಎನ್.ಆರ್. ಪ್ರೊಡಕ್ಷನ್’
ಮಂಗಳೂರು: ‘ಎಂ.ಎನ್.ಆರ್. ಪ್ರೊಡಕ್ಷನ್’ ಸಂಸ್ಥೆಯಡಿ ನಿರ್ಮಾಣಗೊಳ್ಳಲಿರುವ ‘ವಾದಿರಾಜ ವಾಲಗ ಮಂಡಳಿ’ ಕನ್ನಡ ಚಿತ್ರಕ್ಕೆ ನ.21ರಂದು ಬೆಳಗ್ಗೆ 9 ಗಂಟೆಗೆ ಉರ್ವಾ ಮಾರಿಯಮ್ಮನ ಸಾನಿಧ್ಯದಲ್ಲಿ ಮುಹೂರ್ತ ನಡೆಯಲಿದೆ ಎಂದು ಚಲನ ಚಿತ್ರ ನಿರ್ಮಾಪಕ ಡಾ.ಎಂ.ಎನ್. ರಾಜೇಂದ್ರ ಕುಮಾರ್ ತಿಳಿಸಿದರು.
ಎಸ್‌ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂ.ಎನ್.ಆರ್ ಪ್ರೊಡಕ್ಷನ್ ಸಂಸ್ಥೆಯು 2009ರಲ್ಲಿ ಆರಂಭಗೊಂಡಿದ್ದು, ‘ಜೋಗುಳ’ ಎಂಬ ಮೆಗಾ ಧಾರಾವಾಹಿಯನ್ನು ಕಿರುತೆರೆಗೆ ಅರ್ಪಿಸಿದೆ. ವಿನು ಬಳಂಜ ಅವರ ನಿರ್ದೇಶನದಲ್ಲಿ ಸುಮಾರು 600 ಕಂತುಗಳಲ್ಲಿ ‘ಜೀಕನ್ನಡ’ ವಾಹಿನಿಯಲ್ಲಿ ಪ್ರಸಾರಗೊಂಡ ಈ ಧಾರಾವಾಹಿಯು ಜನಮೆಚ್ಚುಗೆಯನ್ನು ಪಡೆದಿತ್ತು. ಪ್ರತಿಭಾವಂತ ನಿರ್ದೇಶಕ ಎಂ.ಡಿ.ಶ್ರೀಧರ ಅವರ ನಿರ್ದೇಶನದಲ್ಲಿ ‘ಗಲಾಟೆ’ ಎಂಬ ಸಿನಿಮಾ ನಟ ಪ್ರಜ್ವಲ್ ದೇವರಾಜ್ ಹಾಗೂ ಬಹುತಾರಾಗಣದಲ್ಲಿ ನಿರ್ಮಾಣವಾಗಿದ್ದು. ಇದು ಬಹುಪಾಲು ವಿದೇಶದಲ್ಲಿ ಚಿತ್ರೀಕರಣಗೊಂಡಿದೆ. ಈ ‘ಗಲಾಟೆ’ ಚಲನಚಿತ್ರ ‘ಎಂ.ಎನ್.ಆರ್ ಪ್ರೊಡಕ್ಷನ್’ ಸಂಸ್ಥೆಯ ಮೊದಲ ಚಲನಚಿತ್ರವಾಗಿದೆ ಎಂದವರು ತಿಳಿಸಿದರು.
‘ಎಂ.ಎನ್.ಆರ್ ಪ್ರೊಡಕ್ಷನ್’ ತುಳುನಾಡಿನ ಸಂಸ್ಥೆಯಾಗಿರುವುದರಿಂದ ತುಳುಭಾಷೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈಗಾಗಲೇ ವಿಜಯಕುಮಾರ್ ಕೊಡಿಯಾಲ್‌ಬೈಲ್ ನಿರ್ದೇಶನದ ‘ಡಾಕ್ಟ್ರಾ..ಭಟ್ರಾ?’ ಎನ್ನುವ ತುಳು ಸಿನಿಮಾ ಮುಹೂರ್ತ ಮಾಡಲಾಗಿದ್ದು. ಈ ಸಿನಿಮಾ ಮುಂದಿನ ವರ್ಷ ತೆರೆಕಾಣಲಿದೆ.
ಈ ಮಧ್ಯೆ ಯುವ ನಿರ್ದೇಶಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಯುವ ನಿರ್ದೇಶಕ, ಕಾಂತಾರ ಸಿನಿಮಾದ ‘ವರಾಹ ರೂಪಂ’ ‘ಕಾಂತಾರ-1’ ರ ‘ಗೊತ್ತಿಲ್ಲಾ ಶಿವನೇ ಭಕ್ತಿ ದಾರಿಯು’ ಹಾಡುಗಳನ್ನು ರಚಿಸಿರುವ ಶಶಿರಾಜ್ ರಾವ್ ಕಾವೂರು ರಚಿಸಿರುವ ಕಥೆ. ಚಿತ್ರಕಥೆ. ಸಂಭಾಷಣೆ, ನಿರ್ದೇಶನ ಇರುವ ‘ವಾದಿರಾಜ ವಾಲಗ ಮಂಡಳಿ’ ಎಂಬ ಕನ್ನಡ ಸಿನಿಮಾವನ್ನು ತೆರೆಗೆ ಸಿದ್ಧಪಡಿಸುತ್ತಿದ್ದೇವೆ ಎಂದು ಡಾ.ಎಂ.ಎನ್. ರಾಜೇಂದ್ರ ಕುಮಾರ್ ತಿಳಿಸಿದರು.
ಈ ಸಿನಿಮಾ ಉತ್ತಮ ಕಥಾ ಹಂದರದಿಂದ ಸಂಪೂರ್ಣ ಹಾಸ್ಯ ಪ್ರಧಾನವಾಗಿದ್ದು, ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ಕೂಡಾ ನೀಡುತ್ತದೆ. ಸಿನಿಮಾದಲ್ಲಿ ನವೀನ್ ಡಿ ಪಡೀಲ್, ಲಕ್ಷ್ಮಣ ಕುಮಾರ್ ಮಲ್ಲೂರು, ಪ್ರಕಾಶ ತುಮಿನಾಡು. ದೀಪಕ್ ರೈ ಪಾಣಾಜೆ, ಪುಷ್ಪರಾಜ್ ಬೊಳ್ಳೂರ್. ಮೈಮ್ ರಾಮದಾಸ್, ಶೋಭರಾಜ್ ಪಾವೂರು, ತನ್ವಿ ರಾವ್, ವೇನ್ಯ ರೈ, ಚೈತ್ರಾ ಶೆಟ್ಟಿ, ಕೀರ್ತನಾ ಮುಂತಾದವರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ.
ಹಲವು ಕನ್ನಡ, ತಮಿಳು ಹಿಟ್ ಸಿನೆಮಾಗಳ ಛಾಯಾಚಿತ್ರಗಾರ ಎಸ್. ಚಂದ್ರಶೇಖರನ್, ಕ್ಯಾಮೆರಾದ ಹಿಂದೆ ತಮ್ಮ ಕೈಚಳಕ ತೋರಿಸಲಿರುವರು. ಚಿತ್ರಕ್ಕೆ ಸಂಗೀತ ಮಣಿಕಾಂತ ಕದ್ರಿಯವರದ್ದಾಗಿದೆ. ಸಹ ನಿರ್ಮಾಪಕರಾಗಿ ಜಯಪ್ರಕಾಶ ತುಂಬೆ ಹಾಗೂ ಕಾರ್ಯಕಾರಿ ನಿರ್ಮಾಪಕರಾಗಿ ನಟ ಸಂತೋಷ್ ಶೆಟ್ಟಿ ಸಹಕರಿಸಲಿದ್ದಾರೆ. ಚಿತ್ರದಲ್ಲಿ ಬರುವ ‘ಮೆಹಂದಿ’ ದೃಶ್ಯದಲ್ಲಿ ನವೋದಯ ಸ್ವಸಹಾಯ ಸಂಘದ ಸದಸ್ಯರು ನಟನೆ ಮಾಡಲಿದ್ದಾರೆ ಎಂದು ಡಾ.ರಾಜೇಂದ್ರ ಕುಮಾರ್ ಹೇಳಿದರು.
ಸಿನಿಮಾಕ್ಕೆ ಒಂದೇ ಹಂತದಲ್ಲಿ 40 ದಿನಗಳ ಕಾಲ ಕಾಸರಗೋಡು, ಮಂಗಳೂರು, ಉಡುಪಿ, ಕುಂದಾಪುರ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಇದೊಂದು ಹಾಸ್ಯ ಚಿತ್ರ. ಸಮಾಜಕ್ಕೊಂದು ಉತ್ತಮ ಸಂದೇಶವೂ ಇದೆ. ಕರಾವಳಿಯ ಅನೇಕ ಮಂದಿ ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ ಎಂದು ನಿರ್ದೇಶಕ ಶಶಿರಾಜ್ ಕಾವೂರು ತಿಳಿಸಿದರು.
ಎಸ್‌ಸಿಡಿಸಿಸಿ ಬ್ಯಾಂಕ್‌ನ ಸಿಇಒ (ಪ್ರಭಾರ) ಗೋಪಿನಾಥ ಭಟ್, ಸಂತೋಷ್ ಶೆಟ್ಟಿ, ಲಕ್ಷ್ಮಣಕುಮಾರ್ ಮಲ್ಲೂರು, ಸುನಿಲ್ ಬಜಗೋಳಿ, ಜಯಪ್ರಕಾಶ್ ತುಂಬೆ, ಎಸ್ ಚಂದ್ರಶೇಖರನ್ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net