ಆಯುಷ್ ಇಲಾಖೆ ಭ್ರಷ್ಟಾಚಾರ ವಿರುದ್ಧ ಪ್ರತಿಭಟನೆ ಶಾಸಕ ವೇದವ್ಯಾಸ ಕಾಮತ್ ಎಚ್ಚರಿಕೆ

ಶಾಸಕ ವೇದವ್ಯಾಸ ಕಾಮತ್
ಶಾಸಕ ವೇದವ್ಯಾಸ ಕಾಮತ್
Published on
ಮಂಗಳೂರು: ಆಯುಷ್ ಇಲಾಖೆಯಲ್ಲಿ ವೈದ್ಯರು ಅವಧಿ ಮೀರಿದ ಔಷಧ ಪೂರೈಕೆ ಮಾಡಿ ಜನರ ಜೀವದ ಜತೆ ಚೆಲ್ಲಾಟವಾಡಿರುವ ಅಧಿಕಾರಿಗಳ ವಿರುದ್ಧ ದಾಖಲೆಗಳ ಸಹಿತ ದೂರು ನೀಡಿದರೂ ಕ್ರಮ ಕೈಗೊಳ್ಳದೇ ಇರುವುದರ ವಿರುದ್ಧ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಎಚ್ಚರಿಸಿದ್ದಾರೆ.
ನಗರದ ಶಾಸಕರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಯುಷ್ ಔಷಧ ಖರೀದಿಯಲ್ಲಿ ಭಾರೀ ಅಕ್ರಮ ನಡೆದಿದೆ. ಅಧಿಕಾರಿಗಳು ಹಣದಾಸೆಗೆ ಅವಧಿ ಮೀರಿದ ಔಷಧ ಪೂರೈಕೆ ಮಾಡಿರುವುದರ ದಾಖಲೆಗಳ ಸಮೇತ ಜಿಲ್ಲಾಧಿಕಾರಿಯ ಗಮನಕ್ಕೆ ತಂದಿದ್ದು, ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆದ ಕೆಡಿಪಿ ಸಭೆಯಲ್ಲೂ ಪ್ರಸ್ತಾಪಿಸಿದ್ದೇನೆ. ಆದರೂ ಯಾವುದೇ ಕ್ರಮವಾಗಿಲ್ಲ. ಯಾವುದೇ ಒತ್ತಡಕ್ಕೊಳಗಾಗದೆ ಸೂಕ್ತ ತನಿಖೆ ಮುಂದುವರಿದರೆ ಮತ್ತಷ್ಟು ವಿಷಯಗಳು, ಕಾಣದ ಕೈಗಳು ಹೊರಗೆ ಬರುವ ನಿರೀಕ್ಷೆ ಇದೆ ಎಂದು ಕಾಮತ್ ಹೇಳಿದರು.
ಯಕ್ಷಗಾನ ಕಲಾವಿದರ ಬಗ್ಗೆ ಅತ್ಯಂತ ಕೀಳುಮಟ್ಟದ ಹೇಳಿಕೆ ನೀಡಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆಯವರು ತಕ್ಷಣ ಕ್ಷಮೆ ಕೇಳಬೇಕು. ಮಾತ್ರವಲ್ಲ, ಈ ಕೂಡಲೇ ರಾಜ್ಯ ಕಾಂಗ್ರೆಸ್ ಸರ್ಕಾರ ಅವರನ್ನು ಆ ಸ್ಥಾನದಿಂದಲೇ ವಜಾಗೊಳಿಸಬೇಕು ಎಂದು ಶಾಸಕ ಡಿ.ವೇದವ್ಯಾಸ ಕಾಮತ್ ಆಗ್ರಹಿಸಿದ್ದಾರೆ.
ಬಗೆಹರಿಯದ ನೀರಿನ ಸಮಸ್ಯೆ
ನಗರದಲ್ಲಿ ಕುಡಿಯುವ ನೀರಿನ ಕೊಳವೆ ಒಡೆದು ನಾಲ್ಕು ದಿನಗಳು ಕಳೆದು ಜನಸಾಮಾನ್ಯರು ತೀವ್ರ ಸಮಸ್ಯೆ ಅನುಭವಿಸುತ್ತಿದ್ದಾರೆ, ರಾಜ್ಯ ಕಾಂಗ್ರೆಸ್ ಸರ್ಕಾರದ ಅಧೀನದಲ್ಲಿರುವ ಮಂಗಳೂರು ಮಹಾನಗರ ಪಾಲಿಕೆ ನಿರ್ಲಕ್ಷೃ ತಾಳಿದ್ದರೆ, ಪರ್ಯಾಯ ವ್ಯವಸ್ಥೆ ಮಾಡದಿರುವುದು ಸರ್ಕಾರದ ಬೇಜವಾಬ್ದಾರಿಯ ಪರಮಾವಧಿ ಎಂದು ವೇದವ್ಯಾಸ ಕಾಮತ್ ಟೀಕಿಸಿದರು.
ಕದ್ರಿ ಪಾರ್ಕ್ ರಸ್ತೆಗೆ ಟೋಲ್ ಗೆ ಕಿಡಿ
ಸ್ಮಾರ್ಟ್ ಸಿಟಿ ಯೋಜನೆಯಡಿ ಜನರ ತೆರಿಗೆ ಹಣದಲ್ಲಿ ಅಭಿವೃದ್ಧಿಪಡಿಸಲಾದ ಕದ್ರಿ ಪಾರ್ಕ್ ರಸ್ತೆಗೆ ಟೋಲ್ ಅಳವಡಿಸಲು ಮುಂದಾಗಿರುವುದು ಸರಿಯಲ್ಲ ಎಂದು ಕಾಮತ್ ಹೇಳಿದರು.
ನಗರದಲ್ಲಿ ಜೈಲ್ ಜಾಮರ್ ನಿಂದಾಗಿ ಉಂಟಾಗಿರುವ ಸಮಸ್ಯೆ ಬಗೆಹರಿಸುವಂತೆ ಸಾರ್ವಜನಿಕರೊಂದಿಗೆ ಪ್ರತಿಭಟನೆ ನಡೆಸಲಾಗಿದೆ. ಸಚಿವರ ಗಮನಕ್ಕೆ ತಂದರೂ ಪ್ರಯೋಜನ ಆಗದ ಕಾರಣ ಅಧಿವೇಶನದಲ್ಲೂ ಈ ಬಗ್ಗೆ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆಯಲಾಗಿತ್ತು. ಆದರೂ ಪ್ರಯೋಜನ ಆಗದ ಕಾರಣ ಇಲ್ಲಿನ ವಕೀಲರ ಮೂಲಕ ಹೈಕೋರ್ಟ್ ಮಧ್ಯ ಪ್ರವೇಶಿಸಿದ್ದು, ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿರುವುದರಿಂದ ಈ ದಪ್ಪ ಚರ್ಮದ ಸರ್ಕಾರ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು ಎಂದು ಕಾಮತ್ ತಿಳಿಸಿದರು.
ಇ-ಖಾತಾ ಸಮಸ್ಯೆ
ಮನಪಾ ವ್ಯಾಪ್ತಿಯಲ್ಲಿ ಇ-ಖಾತಾಕ್ಕಾಗಿ ಜನಸಾಮಾನ್ಯರು ಅನುಭವಿಸುತ್ತಿರುವ ತೊಂದರೆ ಮುಂದುವರಿದಿದ್ದು ಸರಿಪಡಿಸುವ ಗೋಜಿಗೆ ರಾಜ್ಯ ಸರ್ಕಾರ ಮುಂದಾಗದೆ ಬೇಜವಾಬ್ದಾರಿತನ ತೋರಿದೆ. ಈ ನಡುವೆಯೇ ಅಧಿಕಾರಿಗಳನ್ನು ಸಮೀಕ್ಷೆಗೆ ಹಾಕಲಾಗಿದ್ದು ಅದನ್ನು ಮುಗಿಸಿ ಅಧಿಕಾರಿಗಳು ಬಂದರೂ ಸರ್ವರ್ ಸಮಸ್ಯೆ ಎದುರಾಗಿದೆ ಎಂದವರು ಹೇಳಿದರು.
ಬಿಜೆಪಿ ಮಂಗಳೂರು ದಕ್ಷಿಣ ಮಂಡಲ ಅಧ್ಯಕ್ಷ ರಮೇಶ್ ಕಂಡೆಟ್ಟು, ಪ್ರಮುಖರಾದ ರಮೇಶ್ ಹೆಗ್ಡೆ, ಲಲ್ಲೇಶ್ ಕುಮಾರ್ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net