ಮೆಸ್ಕಾಂ ಕಚೇರಿ ಸ್ಥಳಾಂತರಕ್ಕೆ ವಿರೋಧ MESCOM

ಮೆಸ್ಕಾಂ
ಮೆಸ್ಕಾಂ
Published on
ವಿಟ್ಲ: ಜನ ಸಂಪರ್ಕ ಸಭೆಗಳಲ್ಲಿ ಮೆಸ್ಕಾಂ ಕಚೇರಿ ಸ್ಥಳಾಂತರ ವಿಚಾರದಲ್ಲಿ ವಿರೋಧ ವ್ಯಕ್ತವಾಗಿದ್ದರೂ ಇದನ್ನು ದಿಕ್ಕರಿಸಿ ಮತ್ತೆ ಸ್ಥಳಾಂತರಕ್ಕೆ ಮುಂದಾಗಿರುವ ಹಿನ್ನೆಲೆ ತಕ್ಷಣ ವಿಚಾರ ಕೈಬಿಡುವಂತೆ ಆಗ್ರಹಿಸಿ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.
ವಿಟ್ಲ ಸರ್ಕಾರಿ ಬಸ್ ನಿಲ್ದಾಣದ ಸಮೀಪದಲ್ಲಿರುವ ಮೆಸ್ಕಾಂ ಉಪವಿಭಾಗ ಕಚೇರಿಯನ್ನು ಈ ಹಿಂದೆ ಚಂದಳಿಕೆಗೆ ವರ್ಗಾವಣೆ ಮಾಡುವ ಯೊಜನೆ ಹಾಕಿಕೊಳ್ಳಲಾಗಿತ್ತು. ಬಳಕೆಗಾರರ ತೀವ್ರ ವಿರೋಧ ಹಿನ್ನೆಲೆಯಲ್ಲಿ ಸ್ಥಳಾಂತರ ನಿಂತು ಹೋಗಿತ್ತು. ಆ ಬಳಿಕ ಮಂಗಳೂರು ರಸ್ತೆಯ ಒಂದು ಕಟ್ಟಡಕ್ಕೆ ಸ್ಥಳಾಂತರ ಮಾಡುವ ವಿಚಾರ ಪ್ರಸ್ತಾಪವಾಗಿದ್ದು, ಇದಕ್ಕೂ ಸಭೆಯಲ್ಲಿ ವಿರೋಧ ವ್ಯಕ್ತವಾಗಿತ್ತು. ಈ ಸಂದರ್ಭ ಮೆಸ್ಕಾಂ ಅಧೀಕ್ಷಕರು ಯಾವುದೇ ಕಾರಣಕ್ಕೂ ಈಗಿರುವ ಜಾಗದಿಂದ ಬದಲಾವಣೆಯಿಲ್ಲ ಎಂದು ತಿಳಿಸಿದ್ದರು.
ಸದ್ಯ ಕಟ್ಟಡದ ಛಾವಣಿಯಿಂದ ಮಳೆ ನೀರು ಸೋರುವ ಕಾರಣ ನೀಡಿ ಮತ್ತೆ ಸ್ಥಳಾಂತರಕ್ಕೆ ಮುಂದಾಗಿರುವ ಮಾಹಿತಿ ಕೇಳಿ ಬರುತ್ತಿದೆ. ಈ ಬಗ್ಗೆ ಪತ್ರ ಬರೆದು ಮೆಸ್ಕಾಂ ಕಚೇರಿಗೆ ಈಗಾಗಲೇ ಜಾಗ ನಿಗದಿಪಡಿಸಿದ್ದು, ಅಲ್ಲಿ ಕಟ್ಟಡ ಮಾಡಿ ಹೋಗುವುದಕ್ಕೆ ಅಭ್ಯಂತರವಿಲ್ಲ. ಕೆಪಿಟಿಸಿಎಲ್ ಕಟ್ಟಡ ವ್ಯರ್ಥವಾಗಿದ್ದು, ಅಲ್ಲಿಗೆ ಬೇಕಾದರೆ ಕಚೇರಿಯನ್ನು ಸ್ಥಳಾಂತರಿಸಿ. ಅದು ಬಿಟ್ಟು ಖಾಸಗಿ ಕಟ್ಟಡಕ್ಕೆ ಸ್ಥಳಾಂತರ ಮಾಡಿ ಸಭೆಯ ನಿರ್ಣಯವನ್ನು ಉಲ್ಲಂಘಿಸಿದರೆ ಕಚೇರಿಗೆ ಬೀಗ ಜಡಿಯಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net