ಭ್ರಷ್ಟಾಚಾರದ ಎಸ್‌ಐಟಿ ತನಿಖೆ! PUTTUR

ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ಆಗ್ರಹ | ಯುವತಿಗೆ ದೌರ್ಜನ್ಯ ಆರೋಪ
mescom sabhe
ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ಗುತ್ತಿಗೆದಾರ ಲಕ್ಷ್ಮೀನಾರಾಯಣ ಸಮಸ್ಯೆಗಳನ್ನು ಅಧಿಕಾರಿಗಳಲ್ಲಿ ಹೇಳಿದರು. ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಮೆಸ್ಕಾಂ ಅಧೀಕ್ಷಕ ಇಂಜಿನಿಯರ್ ಕೃಷ್ಣರಾಜ್ ಮತ್ತಿತರರಿದ್ದರು.
Published on: 

ಪುತ್ತೂರು: ಬಯೋಮೆಟ್ರಿಕ್ ಹಾಜರಾತಿ ಇಲ್ಲ, ಕಚೇರಿಗಳಲ್ಲಿ ಸಿಸಿ ಕ್ಯಾಮರಾ ಇಲ್ಲ. ಮೂರು ತಿಂಗಳಿಂದ ಹೆಚ್ಚು ಪ್ರಭಾರ ಹುದ್ದೆ ಹಾಕುವುಂತಿಲ್ಲ. ನಾನ್‌ಟೆಕ್ನಿಕಲ್ ವ್ಯಕ್ತಿಗೆ ಹುದ್ದೆ ನೀಡಿ ಅಕ್ರಮ ಎಸಗಲಾಗುತ್ತಿದೆ. ಹೆಣ್ಣುಮಕ್ಕಳ ಮಾನ ಕಾಪಾಡಬೇಕು. ಪುತ್ತೂರು ಮೆಸ್ಕಾಂ ಕಚೇರಿಯಲ್ಲಿ ಭ್ರಷ್ಟಾಚಾರ ತುಂಬಿದ್ದು, ಎಸ್.ಐ.ಟಿ. ಮೂಲಕ ತನಿಖೆ ನಡೆಸಬೇಕು...

ಮೆಸ್ಕಾಂ ವತಿಯಿಂದ ಬನ್ನೂರು ಕಚೇರಿ ಸಭಾಂಗಣದಲ್ಲಿ ನಡೆದ ಪುತ್ತೂರು ನಗರ ಹಾಗೂ ಗ್ರಾಮಂತರ ಉಪವಿಭಾಗದ ವ್ಯಾಪ್ತಿಯ ಜನಸಂಪರ್ಕ ಸಭೆಯಲ್ಲಿ ಈ ಆಗ್ರಹ ವ್ಯಕ್ತವಾಯಿತು.

ಗುತ್ತಿಗೆದಾರ ಲಕ್ಷ್ಮೀನಾರಾಯಣ ಮಾತನಾಡಿ, ಅರ್ಹತೆಯಿಲ್ಲದವರಿಗೆ ಕಾಮಗಾರಿಗಳನ್ನು ನೀಡಿ ಅಪಘಾತಗಳು ನಡೆದರೆ ಇದಕ್ಕೆ ಹೊಣೆ ಯಾರು? ಉಪ್ಪಿನಂಗಡಿ ಹೆದ್ದಾರಿಯ ಬದಿಯಲ್ಲಿ ಸ್ಪನ್ ಪೋಲ್‌ಗಳು ವಾಲಿದ್ದು, ಅದಕ್ಕೆ ವ್ಯವಸ್ಥೆ ಮಾಡುವವರು ಯಾರು? ನಾಲ್ವರು ಗುತ್ತಿಗೆದಾರರ ಹೊರತು ಬೇರಾರಿಗೂ ಕಾಮಗಾರಿ ಸಿಗುತ್ತಿಲ್ಲ. ಸಿಬ್ಬಂದಿ ಕಚೇರಿಗೆ ೧೧, ೧೨ ಗಂಟೆಗೆ ಆಗಮಿಸಿದರೂ ಕೇಳುವವರಿಲ್ಲ. ಕಚೇರಿಯ ಕೆಲಸಗಳು ಬೊಳುವಾರಿನ ಹೋಟೇಲ್‌ನಲ್ಲಿ ನಡೆಯುತ್ತಿದೆ ಎಂದರು.

ವಿದ್ಯುತ್ ಗುತ್ತಿಗೆದಾರ ಸಂಘದ ಅಧ್ಯಕ್ಷ ಕೃಷ್ಣಪ್ರಶಾಂತ್ ಮಾತನಾಡಿ, ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗೆ ಕೊಳವೆಬಾವಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಬಹುದಾಗಿದ್ದು, ಇದಕ್ಕೆ ಬೇಕಾದ ಪರಿವರ್ತಕಗಳನ್ನು ನೀಡಬೇಕು. ಗಂಗಾಕಲ್ಯಾಣ ಕೆಲಸ ಮಾಡಲು ಗುತ್ತಿಗೆದಾರರಿಗೆ ನಿಗದಿಪಡಿಸಿದ ಮೊತ್ತ ಹೆಚ್ಚು ಮಾಡಬೇಕು ಎಂದರು.

ಬೆದ್ರಾಳ ಪುತ್ರಮೂಲೆಯಲ್ಲಿ ಟಿಸಿ ಸಮಸ್ಯೆಯ ಕುರಿತು ೨೦೨೧ರಲ್ಲೇ ಇಲಾಖೆಯ ಗಮನಕ್ಕೆ ತರಲಾಗಿದ್ದು, ಇನ್ನೂ ಸಮಸ್ಯೆ ಬಗೆಹರಿದಿಲ್ಲ. ಚಿಕ್ಕ ಸಿಡಿಲು ಬಂದರೂ ವಿದ್ಯುತ್ ಸಂಪರ್ಕ ಇಲ್ಲದಾಗುತ್ತದೆ ಎಂದು ಗ್ರಾಹಕ ಲೀಯೊ ಆರೋಪಿಸಿದರು. ಗ್ರಾಹಕ ಸುಧಾಕರ ರಾವ್ ಆರ್ಯಾಪು ಭಾಗಕ್ಕೆ ಹೆಚ್ಚಿನ ಪವರ್‌ಮನ್‌ಗಳನ್ನು ನೀಡಬೇಕು. ಲೈನ್ ನಿರ್ವಹಣೆ, ಪೊದೆಗಳ ತೆರವುಮಾಡಬೇಕು ಎಂದರು. ಮಾಡಾವು ಭಾಗದಲ್ಲಿ ೪೦ ವರ್ಷಗಳಿಂದ ವಿದ್ಯುತ್ ತಂತಿ ಬದಲಾವಣೆಯಾಗಿಲ್ಲ ಎಂಬ ದೂರು ಕೇಳಿಬಂತು.

ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಮೆಸ್ಕಾಂ ಅಧೀಕ್ಷಕ ಇಂಜಿನಿಯರ್ ಕೃಷ್ಣರಾಜ್, ಕಾರ್ಯ ನಿರ್ವಾಹಕ ಅಭಿಯಂತ ರಾಮಚಂದ್ರ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ಶಿವಶಂಕರ್ ಉಪಸ್ಥಿತರಿದ್ದರು.

ಅಧಿಕಾರಿ ಪತ್ನಿ ಹೆಸರಲ್ಲಿ ಗುತ್ತಿಗೆ!

ಪುತ್ತೂರು ಮೆಸ್ಕಾಂ ಅಧಿಕಾರಿಯೊಬ್ಬರು ತನ್ನ ಪತ್ನಿಯ ಹೆಸರಿನಲ್ಲಿ ಗುತ್ತಿಗೆ ನಡೆಸುವುದಕ್ಕೆ ಸಿ೨ ಪರವಾನಗಿಯನ್ನು ಹೊಂದಿದ್ದಾರೆ. ಮೆಸ್ಕಾಂನಲ್ಲಿ ಇದಕ್ಕೆ ಅವಕಾಶ ಇದೆಯಾ? ಈಗಾಗಲೇ ಅಧಿಕಾರಿ ಪ್ರಭಾವನ್ನು ಬಳಸಿಕೊಂಡು ಎಷ್ಟು ಕಾಮಗಾರಿಗಳನ್ನು ಈ ಗುತ್ತಿಗೆಯ ಮೂಲಕ ನಡೆಸಿದಾಗ ಉತ್ತರಿಸಲು ಅಽಕಾರಿಗಳು ತಡಕಾಡಿದರು.

ಹೆಣ್ಣುಮಕ್ಕಳ ಮಾನ ಕಾಪಾಡಿ

ಬ್ಯಾಂಕ್ ಉದ್ಯೋಗಿ ಮಹಿಳೆಯೊಬ್ಬರ ವಾಹನ ರೈಲ್ವೆ ನಿಲ್ದಾಣ ರಸ್ತೆಯಲ್ಲಿ ಸರ್ವೀಸ್ ಸ್ಟೇಷನ್ ವಾಹನಕ್ಕೆ ಡಿಕ್ಕಿಯಾಗಿದ್ದು, ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಮೆಸ್ಕಾಂ ಅಧಿಕಾರಿಯೊಬ್ಬರು ಗುತ್ತಿಗೆದಾರರ ಸಹಾಯಕಿ ಯುವತಿಗೆ ದೌರ್ಜನ್ಯ ಎಸಗಿದ್ದು, ಇದನ್ನು ಮುಚ್ಚಿಹಾಕುವ ಯತ್ನವಾಗಿದೆ ಹೆಣ್ಣುಮಕ್ಕಳ ಮಾನ ಕಾಪಾಡಬೇಕು ಎಂದು ಗುತ್ತಿಗೆದಾರ ಲಕ್ಷ್ಮೀನಾರಾಯಣ ಹೇಳಿದರು. ಮೆಸ್ಕಾಂ ಸಿಬ್ಬಂದಿಯೊಬ್ಬರ ರಾಸಲೀಲೆ ಕುರಿತು ಜನಸಂಪರ್ಕ ಸಭೆಯಲ್ಲಿ ಚರ್ಚೆ ನಡೆಯಿತು.

ಪುತ್ತೂರಿನಲ್ಲಿ ೬೦ ಸಾವಿರ ಗೃಹಜ್ಯೋತಿ ಫಲಾನುಭವಿಗಳಿದ್ದು, ಪರಿಶೀಲನೆಯ ಸಂದರ್ಭ ೨-೩ ಸಾವಿರ ಮನೆಗಳನ್ನು ಬಾಕಿಯಾಗಿದೆ. ಬಿಟ್ಟು ಹೋಗಿದ್ದರೆ ಗಮನಕ್ಕೆ ತಂದರೆ ಅದರ ಕುರಿತು ಗಮನಹರಿಸಲಾಗುವುದು. ಹಳೆ ತಂತಿ, ಪರಿವರ್ತಕ ಬದಲಾವಣೆ, ಮರ ತೆರವು ಸಮಸ್ಯೆಗಳಿದ್ದು, ಮೆಸ್ಕಾಂಗೆ ಹೆಚ್ಚಿನ ಬಜೆಟ್ ಬಂದಾಗ ಪರಿಹಾರವಾಗುತ್ತದೆ.
ಉಮಾನಾಥ ಶೆಟ್ಟಿ ಪೆರ್ನೆ, ಅಧ್ಯಕ್ಷರು, ಪಂಚ ಗ್ಯಾರೆಂಟಿ ಅನುಷ್ಠಾನ ಸಮಿತಿ
ಗುತ್ತಿಗೆದಾರರ ಸಿಬ್ಬಂದಿ ಜತೆಗೆ ಮೆಸ್ಕಾಂ ಅಧಿಕಾರಿ ಅನುಚಿತ ವರ್ತನೆ ಮಾಡಿದ್ದಾರೆಂಬ ಮಾಹಿತಿಯಿದ್ದು, ಈ ಬಗ್ಗೆ ಖಚಿತತೆಯಿಲ್ಲ. ಯಾರೂ ದೂರು ನೀಡಿಲ್ಲ. ಹೊರಗಡೆ ಬಹಳಷ್ಟು ಚರ್ಚೆಗಳು ನಡೆಯುತ್ತಿದ್ದು, ಕಚೇರಿ ಒಳಗಿನ ವಿಚಾರ ಅಲ್ಲ ಹೊರಗಿನ ವಿಚಾರವಾಗಿದೆ. ಲಿಖಿತ ದೂರು ನೀಡಿದಲ್ಲಿ ಅಗತ್ಯ ತನಿಖೆ ಕೈಗೊಳ್ಳಲು ಸಿದ್ಧರಿದ್ದೇವೆ.
ರಾಮಚಂದ್ರ, ಕಾರ್ಯನಿರ್ವಹಣಾ ಇಂಜಿನಿಯರ್, ಮೆಸ್ಕಾಂ